ವಿಜಯೇಂದ್ರ, ಖರ್ಗೆ ಸೇರಿ ಗಣ್ಯರಿಂದ ಮತದಾನ

KannadaprabhaNewsNetwork | Published : May 8, 2024 1:03 AM

ಸಾರಾಂಶ

ರಾಜ್ಯದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ 2ನೇ ಹಂತದ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಚಿತ್ರನಟ ರಿಷಬ್‌ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯ ಮೆರೆದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ 2ನೇ ಹಂತದ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಚಿತ್ರನಟ ರಿಷಬ್‌ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯ ಮೆರೆದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಹುಬ್ಬಳ್ಳಿಯ ಭವಾನಿನಗರದ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಬಂದು ತಮ್ಮ ಹಕ್ಕು ಚಲಾಯಿಸಿದರು. ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಯವರು ಹುಬ್ಬಳ್ಳಿಯ ಇಲ್ಯಾಮಿಂಗ್ಟನ್‌ ಸ್ಕೂಲ್‌ನ ಮತಗಟ್ಟೆಯಲ್ಲಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯ ಸರ್ಕಾರಿ ಗಂಡು ಮಕ್ಕಳ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ಪತ್ನಿ ಶಿಲ್ಪಾ ಶೆಟ್ಟರ್‌, ಸೊಸೆ, ಸಹೋದರ ಪ್ರದೀಪ ಶೆಟ್ಟರ್‌ ಜೊತೆ ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಹಾಗೂ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಶಿಕಾರಿಪುರದ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು. ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿರಸಿ ತಾಲೂಕಿನ ಕುಳವೆ-ಬರೂರು ಜನತಾ ವಿದ್ಯಾಲಯದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಅವರ ತೃತೀಯ ಪುತ್ರಿ ಶ್ರೀಲಕ್ಷ್ಮೀ ಹೆಗಡೆ ಇದೇ ಮೊದಲ ಬಾರಿಗೆ ತಂದೆಯ ಜೊತೆ ಬಂದು ಮತ ಹಾಕಿ, ಖುಷಿಪಟ್ಟರು.ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆಯವರು ದಂಪತಿ ಸಮೇತರಾಗಿ ಆಗಮಿಸಿ ಕಲಬುರಗಿಯ ಬಸವನಗರ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಇದೇ ವೇಳೆ, ಖರ್ಗೆಯವರು ಪತ್ನಿ ರಾಧಾಬಾಯಿಯವರು ಮತದಾನ ಮಾಡುವಾಗ ಅವರ ಜೊತೆ ನಿಂತು ಮಾರ್ಗದರ್ಶನ ಮಾಡುವ ಮೂಲಕ ಮತದಾನದ ಗೌಪ್ಯತೆ ನಿಯಮ ಉಲ್ಲಂಘಿಸಿದರೆಂಬ ಮಾತುಗಳು ಕೇಳಿ ಬಂದಿವೆ.ಇನ್ನು, ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಹುರಿಯಾಳು ಡಾ.ಉಮೇಶ ಜಾಧವ್‌ ಅವರು ಕಲಬುರಗಿ ದಕ್ಷಿಣ ಮತಕ್ಷೇತ್ರದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಹಸಿರು ಸ್ವಾಮೀಜಿ ಎಂದೇ ಪ್ರಸಿದ್ಧರಾದ ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಶಿರಸಿ ತಾಲೂಕಿನ ಖಾಸಾಪಾಲ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಇದೇ ವೇಳೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್‌ ಅವರು ಕುಟುಂಬ ಸಮೇತರಾಗಿ ಬೆಳಗಾವಿಯ ವಿಜಯನಗರದ ಸರ್ಕಾರಿ ಮರಾಠಿ ಪ್ರಾಥಮಿಕ ಪಾಠಶಾಲೆಯಲ್ಲಿ, ಉಜ್ಜಯಿನಿ ಜಗದ್ಗುರು ಶ್ರೀಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಯವರು ಕೊಟ್ಟೂರಿನ ಉಜ್ಜಿನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕೆ.ಎಸ್‌.ಈಶ್ವರಪ್ಪ ಅವರು ಶಿವಮೊಗ್ಗದ ಸೈನ್ಸ್ ಕಾಲೇಜು ಆವರಣದ ಮತಗಟ್ಟೆಯಲ್ಲಿ ಮತದಾನ ಮಾಡಿದರು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹುಚ್ಚಮ್ಮ ಅವರು ಕೊಪ್ಪಳ ತಾಲೂಕಿನ ಕುಣಿಗೇರಿ ಗ್ರಾಮದಲ್ಲಿ, ಕಲಬುರಗಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ದಂಪತಿ ಸಮೇತರಾಗಿ ಚಿತ್ರಾಪುರ ವಿಧಾನಸಭಾ ಕ್ಷೇತ್ರದ ಗುಂಡಗುರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.ಇದೇ ವೇಳೆ, ಕೇಂದ್ರ ಸಚಿವ ಭಗವಂತ ಖೂಬಾ ಔರಾದ್‌ನಲ್ಲಿ, ಸಾಗರ ಖಂಡ್ರೆ ಭಾಲ್ಕಿಯಲ್ಲಿ, ಸಚಿವ ಸಂತೋಷ್ ಲಾಡ್ ಕಲಘಟಗಿಯಲ್ಲಿ, ಗವಿಸಿದ್ದೇಶ್ವರ ಶ್ರೀಗಳು ಕೊಪ್ಪಳದ ಕುವೆಂಪು ಶಾಲೆಯಲ್ಲಿ, ಚಿತ್ರನಟ ರಿಷಬ್‌ ಶೆಟ್ಟಿಯವರು ತಾವು ಓದಿದ ಬೈಂದೂರಿನ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿ, ತಮ್ಮ ಕರ್ತವ್ಯ ಮೆರೆದರು.ಊಟಕ್ಕಾಗಿ 20 ನಿಮಿಷ ಮತದಾನ ನಿಲ್ಲಿಸಿದ ಸಿಬ್ಬಂದಿ:

ತಾಂತ್ರಿಕ ಕಾರಣ ಹೊರತುಪಡಿಸಿ ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆ ನಿಲ್ಲಿಸುವಂತಿಲ್ಲ ಎಂಬ ಚುನಾವಣಾ ಆಯೋಗದ ನಿಯಮ ಇದ್ದರೂ ಇಲ್ಲಿಯ ಮತಗಟ್ಟೆಯ ಸಿಬ್ಬಂದಿ ಊಟ ಮಾಡುವುದಕ್ಕಾಗಿ ಕೆಲ ಹೊತ್ತು ಮತದಾನ ನಿಲ್ಲಿಸಿ ಯಡವಟ್ಟು ಮಾಡಿಕೊಂಡಿದ್ದಾರೆ.

ಧಾರವಾಡದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿನ ಮತಗಟ್ಟೆ ನಂ.180ರಲ್ಲಿ 20 ನಿಮಿಷ ಮತದಾರರನ್ನು ನಿಲ್ಲಿಸಿ ಊಟದ ವಿರಾಮ ನೀಡಿದ್ದು, ಇದೀಗ ಚರ್ಚೆಯ ವಿಷಯವಾಗಿದೆ. ಮಧ್ಯಾಹ್ನ 1.30ರ ಸುಮಾರಿಗೆ ಮತಗಟ್ಟೆಯ ಬಾಗಿಲು ಹಾಕಿಕೊಂಡು ಸಿಬ್ಬಂದಿ ಊಟ ಮಾಡಿದ್ದು, ಮತದಾನಕ್ಕೆ ಬಂದ ಮತದಾರರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.ದು:ಖದಲ್ಲೂ ಮತ ಚಲಾಯಿಸಿ ಮಾದರಿಯಾದ ಮತದಾರರು:ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ತಮ್ಮ ದು:ಖದ ನಡುವೆಯೂ ಮತದಾನದ ಪವಿತ್ರ ಕರ್ತವ್ಯ ಚಲಾಯಿಸುವ ಮೂಲಕ ಹಲವರು ಇತರರಿಗೆ ಮಾದರಿಯಾದರು.ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ಹೆತ್ತ ಮಗ ಮೃತಪಟ್ಟ ಸುದ್ದಿ ಕೇಳಿದ ಬಳಿಕವೂ ದಂಪತಿ ಮತದಾನ ಮಾಡಿ ಜವಾಬ್ದಾರಿ ಮೆರೆದರು. ಗ್ರಾಮದ ನಾಗಪ್ಪ ಶಿವಪ್ಪ ಬಂಕಾಪುರ (ಕುಸುಗಲ್) ಹಾಗೂ ಪ್ರೇಮವ್ವ ನಾಗಪ್ಪ ಬಂಕಾಪುರ (ಕುಸುಗಲ್) ಅವರ ಮಗ ರಾಜು ಬಂಕಾಪುರ (26) ಎಂಬುವರು ತುಮಕೂರಿನಲ್ಲಿ ಖಾಸಗಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪೆಟ್ರೋಲ್‌ ಬಂಕ್‌ನಲ್ಲಿ ವಾಹನಕ್ಕೆ ಡೀಸೆಲ್‌ ಹಾಕಿಸುವಾಗ ಪಿಟ್ಸ್‌ ಬಂದು ಮೃತಪಟ್ಟಿದ್ದರು. ದು:ಖದ ನಡುವೆಯೂ ದಂಪತಿ ಮತದಾನ ಮಾಡಿದರು.ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತಂದೆ ಸತ್ತ ದು:ಖದ ನಡುವೆಯೂ ಮಲ್ಲನಗೌಡ ಬಿರಾದಾರ ಎಂಬುವರು ಮತದಾನ ಮಾಡಿದ್ದಾರೆ. ಹೃದಯಾಘಾತದಿಂದ ಅವರ ತಂದೆ ಬೆಳಗ್ಗೆ ಮೃತಪಟ್ಟಿದ್ದಾರೆ. ಕಲಬುರಗಿಯಲ್ಲಿ ನೀರಜ್‌ ಎಂಬುವರು ತಮ್ಮ ತಾಯಿಯ ಸತ್ತ ದು:ಖದಲ್ಲಿಯೂ ಮತದಾನ ಮಾಡಿದರು. ಅವರ ತಾಯಿ ಸಂಧ್ಯಾ ಧಾರವಾಡಕಲರ್‌ (68) ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಡುಗೋಡಿಯಲ್ಲಿ ಪತಿಯ ಸಾವಿನ ದು:ಖದಲ್ಲೂ ಕಲಾವತಿ ವೆಂಕಟೇಶ್‌ ಎಂಬುವರು ಮತ ಚಲಾಯಿಸಿ, ಕರ್ತವ್ಯ ಮೆರೆದರು. ಅವರ ಪತಿ ವೆಂಕಟೇಶ್‌ ಅನಾರೋಗ್ಯದಿಂದ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.ಈ ಮಧ್ಯೆ, ಅಪಘಾತದಲ್ಲಿ ಕಾಲು ಮುರಿದುಕೊಂಡ ಯುವತಿ, ಅನುಷಾ ಪ್ರಭು ಎಂಬುವರು ಕಾರವಾರದ ಸೆಂಟ್‌ ಮೈಕಲ್‌ ಮತಗಟ್ಟೆಯಲ್ಲಿ ಕಾಲಿಗೆ ಬ್ಯಾಂಡೇಜ್‌ ಸುತ್ತಿಕೊಂಡು ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು. ಇದೇ ವೇಳೆ, ಅಪಘಾತದಲ್ಲಿ ಕೈ, ಕಾಲಿಗೆ ಗಾಯವಾಗಿದ್ದರೂ, ಆಶಾ ಪಾಟೀಲ (68) ಎಂಬುವರು ವ್ಹೀಲ್‌ ಚೇರಲ್ಲಿ ಬಂದು ಮಗಳ ಸಹಾಯದಿಂದ ಬೆಳಗಾವಿಯ ವಿಶ್ವೇಶ್ವರಯ್ಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮೂರು ವರ್ಷದ ಹಿಂದೆ ಕಟ್ಟಡದಿಂದ ಬಿದ್ದು ಕಾಲು ಸ್ವಾಧೀನ ಕಳೆದುಕೊಂಡ ಅಂಗವಿಕಲ ಯಮನ್ಖಾನ್‌ ಎಂಬುವರು ವಾಕಿಂಗ್‌ ಸ್ಟಿಕ್‌ ಸಹಾಯದಿಂದ ಬಂದು ಗಂಗಾವತಿಯ 1ನೇ ವಾರ್ಡ್‌ನಲ್ಲಿ ಮತ ಹಾಕಿದರು. ನಿನ್ನೆಯಷ್ಟೇ ಮೃತಪಟ್ಟಿದ್ದ ಮಾಜಿ ಶಾಸಕ ದಿ.ನಾಗರೆಡ್ಡಿ ಗೌಡರ ಕುಟುಂಬದ 20 ಸದಸ್ಯರು ಮಂಗಳವಾರ ಸೇಡಂನಲ್ಲಿ ಮತದಾನ ಮಾಡಿ, ಇತರರಿಗೆ ಮಾದರಿಯಾದರು.10ಕ್ಕೂ ಹೆಚ್ಚು ಬಾಣಂತಿಯರಿಂದ ಮತ:

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 10ಕ್ಕೂ ಹೆಚ್ಚು ಬಾಣಂತಿಯರು ಬಿರುಬಿಸಿಲಿನ ನಡುವೆಯೂ ಹಸುಗೂಸಿನೊಂದಿಗೆ ಆಗಮಿಸಿ, ಮತ ಚಲಾಯಿಸಿದರು.

ನವಜೋಡಿಯಿಂದ ಮತದಾನ:ಕೊಪ್ಪಳ ಲೋಕಸಭಾ ಕ್ಷೇತ್ರವ್ಯಾಪ್ತಿಯ ಸುರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನವಜೋಡಿ ಮಮತಾ ಮತ್ತು ನನ್ನೆಪ್ಪ ಮದುವೆ ಮಂಟಪದಿಂದ ಬಂದು ಮತ ಚಲಾಯಿಸಿದರು.

ಮತದಾನ ವೇಳೆ ಅಲ್ಲಲ್ಲಿ ಗಲಾಟೆ

ಉದ್ಯೋಗಕ್ಕಾಗಿ ನಗರಗಳತ್ತ ವಲಸೆ ಹೋಗಿದ್ದ ಕಾರ್ಮಿಕರು ತವರಿಗೆ ವಾಪಸ್ಸಾದ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮತಯಾಚಿಸುವ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು, ಪರಸ್ಪರ ಕಲ್ಲು ತೂರಾಟ ನಡೆದ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಬಾದ್ಯಾಪುರ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಮಂಗಳವಾರ ನಡೆದಿದೆ.ರಾಯಚೂರು ಲೋಕಸಭೆ ಮತ್ತು ಸುರಪುರ ಉಪ ಚುನಾವಣೆಗೆ ಮಂಗಳವಾರ ನಡೆದ ಮತದಾನದ ವೇಳೆ ಈ ಘಟನೆ ಸಂಭವಿಸಿದೆ. ಗಲಾಟೆಯಲ್ಲಿ ಬಾದ್ಯಾಪುರ ಗ್ರಾಮದ ಭೀಮಣ್ಣ (40) ಎಂಬುವರ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಇದೇ ವೇಳೆ, ಬೆಳಗಾವಿಯ ಹನುಮಾನ ನಗರದಲ್ಲಿ, ಸುರಪುರದಲ್ಲಿ ಮತಗಟ್ಟೆಗಳ ಸಮೀಪ ಬಿಜೆಪಿ ಅಭ್ಯರ್ಥಿಯುಳ್ಳ ಸ್ಟಿಕ್ಕರ್ ಹಂಚಿದ ವಿಷಯವಾಗಿ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಮಧ್ಯೆ, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಬಂಡಾರಹಳ್ಳಿಯಲ್ಲಿ ಮತಯಾಚನೆ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಕಾಂಗ್ರೆಸ್‌ ಕಾರ್ಯಕರ್ತ ಹಣಮಂತಪ್ಪಾ ಭೀಮಪ್ಪಾ ಅರಭಾಂವಿ (48) ಎಂಬುವರು ಗಾಯಗೊಂಡಿದ್ದಾರೆ.ಹುಕ್ಕೇರಿ ತಾಲೂಕಿನ ಎಲೆಮುನ್ನೋಳಿ ಗ್ರಾಮದಲ್ಲಿ ಮತದಾನ ಮಾಡಲು ಸಾಲಿನಲ್ಲಿ ನಿಂತಿದ್ದ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾರಾಮಾರಿ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ಮಧ್ಯೆ, ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಕೇಸರಿ ಶಾಲು ಧರಿಸಿ ಮತಗಟ್ಟೆಗೆ ಬಂದವರನ್ನು ಸಿಬ್ಬಂದಿ ತಡೆದಾಗ, ಮತದಾರರು ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಬೆಳಗಾವಿ ಜಿಲ್ಲೆ ಹುಕ್ಕೇರಿಯ ಕೋಟೆಬಾಗ ಶಾಲೆಯ 162ರ ಮತಗಟ್ಟೆಯಲ್ಲಿ ಬಿಜೆಪಿ ಪರ ಮತ ಚಲಾಯಿಸುವಂತೆ ಮತಗಟ್ಟೆ ಅಧಿಕಾರಿಯೊಬ್ಬರು ಒತ್ತಾಯಿಸಿದರು ಎಂಬ ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಮತದಾನದ ವೇಳೆ ಇಬ್ಬರ ಸಾವು, ಮೂವರು ಅಸ್ವಸ್ಥ:

ರಾಜ್ಯದಲ್ಲಿ ಮಂಗಳವಾರ ನಡೆದ 2ನೇ ಹಂತದ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಸಂಬಂಧಿ ದುರ್ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಅಸ್ವಸ್ಥರಾಗಿದ್ದಾರೆ.

14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಬಹುತೇಕ ಪ್ರದೇಶಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಬಿಸಿಲ ಝಳಕ್ಕೆ ಮತದಾರರು, ಚುನಾವಣಾ ಸಿಬ್ಬಂದಿ ಹೈರಾಣಾಗುವಂತಾಯಿತು. ಬೀದರ್‌ನಲ್ಲಿ 46, ಕಲಬುರಗಿಯಲ್ಲಿ 46.1ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇತ್ತು. ಬೀದರ್‌ ಮತಕ್ಷೇತ್ರದಡಿಯಲ್ಲಿ ಬರುವ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ವಲಯದ ಮಗುಣಕಿ ಗ್ರಾಮದ ನಿವಾಸಿ ಸಿದ್ದಪ್ಪ ಶರಣಪ್ಪ ಪಡಶೆಟ್ಟಿ (70) ಎಂಬುವರು, ಮತದಾನ ಮಾಡಿ, ಮತಗಟ್ಟೆಯಿಂದ ಹೊರಬಂದವರೇ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಬಿಸಿಲಝಳವೇ ಸಾವಿಗೆ ಕಾರಣ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಾಯಚೂರು ಜಿಲ್ಲೆ ಅರಕೇರಾ ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮದಲ್ಲಿ ಚುನಾವಣೆ ಕರ್ತವ್ಯ ನಿರತ ಸಿಬ್ಬಂದಿ ಬಸವರಾಜ ಜಗ್ಲಿ (58) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಇವರು, ಮತಗಟ್ಟೆ ಸಂಖ್ಯೆ 265ರಲ್ಲಿ ಬಿಎಲ್ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಈ ಮಧ್ಯೆ, ಧಾರವಾಡದ ಗಾಂಧಿನಗರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಿಬ್ಬಂದಿ ಮೇಲಿಮನಿ ಎಂಬುವರು ಏಕಾಏಕಿ ಕುಸಿದು ಬಿದ್ದು ಅಸ್ವಸ್ಥರಾದರು. ಶಿರಸಿಯ ಮಾರಿಕಾಂಬಾ ಶಾಲೆಯ ಮತಗಟ್ಟೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಪ್ರಕಾಶ್‌ ಕೋರಿ ಎಂಬುವರಿಗೆ ಎದೆ ನೋವು ಕಾಣಿಸಿಕೊಂಡಿತು. ಬಳ್ಳಾರಿಯ ಕುಡುತಿನಿ ಮತದಾನ ಕೇಂದ್ರದ ಸಿಬ್ಬಂದಿಯೊಬ್ಬರು ಕೂಡ ಕರ್ತವ್ಯದ ವೇಳೆ ಅಸ್ವಸ್ಥರಾದರು. ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಲಾಯಿತು.ವಿದೇಶದಿಂದ ಬಂದು ಮತ ಹಾಕಿದ ಕನ್ನಡಿಗರು:ರಾಜ್ಯದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ 2ನೇ ಹಂತದ ಚುನಾವಣೆಯಲ್ಲಿ ಮತದಾನದ ತಮ್ಮ ಪವಿತ್ರ ಹಕ್ಕನ್ನು ಚಲಾಯಿಸಲು ಹಲವು ಮತದಾರರು ವಿದೇಶಗಳಿಂದ ಆಗಮಿಸಿದ್ದು ವಿಶೇಷವಾಗಿತ್ತು.ಜರ್ಮನಿಯಿಂದ ಆಗಮಿಸಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಆನಂದ್ ಭಟ್ಟ ಡೊಂಬೆಸರ ಹಾಗೂ ಜೀವಶಾಸ್ತ್ರಜ್ಞೆ ಶ್ರೇಯಾ ಹೆಗಡೆ ಗಲ್ಲದಮನೆ ಅವರು ಮಂಗಳವಾರ ಶಿರಸಿ ತಾಲೂಕಿನ ಇಸಳೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು.

ಅಮೆರಿಕದ ಟೆಕ್ಸಾಸ್‌ ವಾಸಿ, ದಾವಣಗೆರೆ ಮೂಲದ ರಾಘವೇಂದ್ರ ಕಮಲಾಕರ ಶೇಟ್‌ ಅವರು, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಎಂಸಿಸಿ ಎ ಬ್ಲಾಕ್‌ನ ಶ್ರೀ ಬಕ್ಕೇಶ್ವರ ಶಾಲೆಯ ಮತಗಟ್ಟೆಯಲ್ಲಿ ಮತ ಹಾಕಿ, ಉಳಿದವರಿಗೆ ಮಾದರಿಯಾದರು. ಮತ ಹಾಕಲೆಂದೇ ಅವರು ಸುಮಾರು 1.5 ಲಕ್ಷ ರು. ಖರ್ಚು ಮಾಡಿಕೊಂಡು ಆಗಮಿಸಿದ್ದರು. ದಾವಣಗೆರೆಯ ರೀತು ಎಂಬುವರು ಕೂಡ ಅಮೆರಿಕದಿಂದ ಆಗಮಿಸಿ, ಇದೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಇದೇ ವೇಳೆ, ಇಂಗ್ಲೆಂಡ್‌ನ ಕೂವೆಂಟ್ರಿ ನಗರದಲ್ಲಿ ಎಂಜಿನೀಯರ್‌ ಆಗಿ ಸೇವೆ ಸಲ್ಲಿಸುತ್ತಿರುವ ಗದಗಿನ ವಿನಯ ಚಂದ್ರಶೇಖರ ವಸ್ತ್ರದ ಅವರು ಇಂಗ್ಲೆಂಡಿನಿಂದ ಆಗಮಿಸಿ, ಗದಗ ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯಲ್ಲಿನ ಮತಗಟ್ಟೆ100ರಲ್ಲಿ ಕುಟುಂಬದ ಸಮೇತರಾಗಿ ಮತದಾನ ಮಾಡಿದರು. ದೂರದ ಕತಾರ್‌ನಲ್ಲಿ ಉದ್ಯೋಗಿಯಾಗಿರುವ ನಾಗರಾಜ್ ಕೌಂಜೂರು ಅವರು ಮತದಾನ ಮಾಡಲೆಂದೇ ಸೋಮವಾರ ಕತಾರ್‌ನಿಂದ ಆಗಮಿಸಿದ್ದು, ಉಡುಪಿ ಜಿಲ್ಲೆ ಮಾವಿನಕಟ್ಟೆ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿ, ಮಂಗಳವಾರವೇ ಕತಾರ್‌ಗೆ ಪ್ರಯಾಣ ಬೆಳೆಸಿದರು.ಇದೇ ವೇಳೆ, ಹಾವೇರಿಯ ಭಾವನಾ ಶಿವಾನಂದ್‌ ಅವರು ಆಸ್ಟ್ರೇಲಿಯಾದ ಸಿಡ್ನಿಯಿಂದ ಆಗಮಿಸಿ, ಹಾವೇರಿ ನಗರದ ಲಯನ್ಸ್‌ ಸ್ಕೂಲ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಧಾರವಾಡದ ರುಚಿತಾ ಅವರು ಅಮೆರಿಕದಿಂದ ಆಗಮಿಸಿ ಮೊದಲ ಬಾರಿಗೆ ಮತದಾನ ಮಾಡಿದರು. ಕೊಪ್ಪಳ ಕ್ಷೇತ್ರ ವ್ಯಾಪ್ತಿಯ ವಟಗಲ್‌ನಲ್ಲಿ ಅಮರೇಶ ಎಂಬುವರು ಓಮಾನ್‌ ದೇಶದ ಮಸ್ಕತ್‌ನಿಂದ ಬಂದು ಮತ ಚಲಾಯಿಸಿ, ಇತರರಿಗೆ ಮಾದರಿಯಾದರು.ಶಾಯಿ ಗುರುತು ತೋರಿಸಿದವರಿಗೆ ಸಾಗರದಲ್ಲಿ ಗೋಲ್ಡ್ ಫಿಶ್ ಗಿಫ್ಟ್‌:

ಸಾಗರ: ಕಡ್ಡಾಯವಾಗಿ ಮತದಾನ ಮಾಡಬೇಕು, ಮತದಾನದ ಪ್ರಮಾಣ ಹೆಚ್ಚಾಗಬೇಕೆನ್ನುವ ಕಾಳಜಿಯಿಂದ ಶಿವಮೊಗ್ಗದ ಸಾಗರ ಪಟ್ಟಣದಲ್ಲಿರುವ ಶ್ರೀಷ ಅಕ್ವೇರಿಯಂ ಮಾಲೀಕ ಆನಂದ ಬಾಳೆಕೊಪ್ಪದಲ್ಲಿ ಮತದಾನ ಮಾಡಿದವರಿಗೆ ಎರಡು ಗೋಲ್ಡ್ ಫಿಶ್ ಉಡುಗೊರೆಯಾಗಿ ನೀಡಿ ಗಮನ ಸೆಳೆದರು.ಕೋರ್ಟ್‌ ಅನುಮತಿ: ಧಾರವಾಡಕ್ಕೆ ಬಂದು ವಿನಯ್‌ ಕುಲಕರ್ಣಿ ಮತ:ಧಾರವಾಡ: ನ್ಯಾಯಾಲಯದ ನಿರ್ಬಂಧದ ಹಿನ್ನೆಲೆಯಲ್ಲಿ ಸುಮಾರು ಮೂರು ವರ್ಷಗಳಿಂದ ಧಾರವಾಡ ಜಿಲ್ಲೆಯಿಂದ ಹೊರಗುಳಿದಿದ್ದ ಶಾಸಕ ವಿನಯ ಕುಲಕರ್ಣಿ ಅವರು ಹೈಕೋರ್ಟ್‌ ಅನುಮತಿ ನೀಡಿದ ಮೇರೆಗೆ ಮಂಗಳವಾರ ಧಾರವಾಡಕ್ಕೆ ಆಗಮಿಸಿ ಇಲ್ಲಿನ ಶಾರದಾ ಹೈಸ್ಕೂಲ್‌ ಮತಗಟ್ಟೆಯಲ್ಲಿ ತಮ್ಮ ಮತದಾನ ಮಾಡಿದರು. ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಹಾಗೂ ಪತ್ನಿ ಶಿವಲೀಲಾ ಕುಲಕರ್ಣಿ, ಮಗಳು ವೈಶಾಲಿ ಜತೆಗೂಡಿ ಮತಗಟ್ಟೆಗೆ ಆಗಮಿಸಿದ ವಿನಯ್‌ ಮತದಾನ ಮಾಡಿದರು. 2016ರಲ್ಲಿ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ವಿನಯ್‌ರನ್ನು ಸಿಬಿಐ 2020ರ ನವೆಂಬರ್‌ನಲ್ಲಿ ಬಂಧಿಸಿತ್ತು. ಜೈಲಲ್ಲಿದ್ದ ವಿನಯ್‌ಗೆ 2021ರ ಆಗಸ್ಟ್‌ 11ಕ್ಕೆ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. 2021ರ ಜುಲೈ 27ರಂದು ಜಿಪಿಎ ನೀಡಲು ವಿನಯ ಕುಲಕರ್ಣಿ ಧಾರವಾಡಕ್ಕೆ ಆಗಮಿಸಿದ್ದೇ ಕೊನೆ.ನಕಲಿ ಮತದಾನಕ್ಕೆ ಯತ್ನ: ಯುವಕ ವಶಕ್ಕೆಕಲಾದಗಿ: ಅಪರಿಚಿತ ಯುವಕನೊಬ್ಬ ನಕಲಿ ಮತದಾನಕ್ಕೆ ಮುಂದಾಗಿದ್ದು, ಬಿಜೆಪಿ ಮುಖಂಡರು, ಕಾರ್ಯಕರ್ತರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ನಡೆದಿದೆ. ಈ ವೇಳೆ ಮತಕೇಂದ್ರ ಕೆಲಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಮತಗಟ್ಟೆಯಲ್ಲಿ ಒಂದಿಷ್ಟು ನಕಲಿ ಮತಗಳು ಚಲಾವಣೆ ಆಗಿದ್ದು, ಮತಗಟ್ಟೆಯಲ್ಲಿ ಮರುಮತದಾನ ಮಾಡಬೇಕೆಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Share this article