ಕನ್ನಡಪ್ರಭ ವಾರ್ತೆ ವಿರಾಜಪೇಟೆವಿರಾಜಪೇಟೆ ಕಾವೇರಿ ಕಾಲೇಜು, ಕೊಡವ ಹಾಕಿ ಅಕಾಡೆಮಿ ಹಾಗೂ ಹಾಕಿ ಕರ್ನಾಟಕದ ಆಶ್ರಯದಲ್ಲಿ ಕಾವೇರಿ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಗುರುವಾರ ಹಾಕಿ ತೀರ್ಪುಗಾರರ ಕಾರ್ಯಗಾರದ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೋಮವಾರಪೇಟೆ ತಾಲೂಕು ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೆರ ಜಯ ಚಿನ್ನಪ್ಪ ಮಾತನಾಡಿ, ನಮ್ಮ ಕಾಲದ ಹಾಕಿ ಆಟಕ್ಕೂ, ಈ ಕಾಲದ ಹಾಕಿ ಆಟಕ್ಕೂ ಬಹಳ ಬದಲಾವಣೆಯಾಗಿದೆ. ಈ ರೀತಿಯ ಕಾರ್ಯಾಗಾರಗಳು ನಡೆದಾಗ ನೂತನವಾಗಿ ಅಳವಡಿಸಲಾಗಿರುವ ನಿಯಮಗಳು ಎಲ್ಲ ಕ್ರೀಡಾಪಟುಗಳಿಗೂ ತಿಳಿಯಲು ಸಾಧ್ಯ ಎಂದರು.ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್. ಸಲ್ದಾನ ಮಾತನಾಡಿ, ನಮಗೆ ತಪ್ಪನ್ನು ಮಾಡಲು ಯಾವುದೇ ಮಾರ್ಗದರ್ಶನ, ಪ್ರೇರಣೆಯ ಅಗತ್ಯವಿಲ್ಲ. ಆದರೆ ಒಳ್ಳೆಯ ಕೆಲಸಗಳನ್ನು ಮಾಡಲು ಉತ್ತಮವಾದ ಮಾರ್ಗದರ್ಶನ ಅಗತ್ಯ. ಅದೇ ರೀತಿಯಾಗಿ ಒಂದು ಕ್ರೀಡಾಕೂಟವು ಯಶಸ್ಸನ್ನು ಕಾಣಬೇಕಾದರೆ ಉತ್ತಮ ಮಾರ್ಗದರ್ಶನ ಪಡೆದ ತೀರ್ಪುಗಾರರು ಅತಿ ಮುಖ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಅಂತಾರಾಷ್ಟ್ರೀಯ ಹಾಕಿ ಕ್ರೀಡಾಕೂಟದ ತಾಂತ್ರಿಕ ತೀರ್ಪುಗಾರ ಪುಲ್ಲಂಗಡ ರೋಹಿಣಿ ಬೋಪಣ್ಣ ಮಾತನಾಡಿ, ಯಾವುದೇ ಕೆಲಸವನ್ನು ಮಾಡುವುದಾದರೆ ಆಸಕ್ತಿಯಿಂದ ಮಾಡಬೇಕು ಎಂದರು.ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಂತರ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಕಾರ್ಯಾಗಾರದಲ್ಲಿ ಒಟ್ಟು 58 ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಈ ವರ್ಷ ನವೆಂಬರ್‌ನಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಚಾಂಪಿಯನ್ಸ್ ಲೀಗ್ ನಡೆಸಲಾಗುತ್ತಿದ್ದು, ಇದಕ್ಕೂ ಮೊದಲು ಮತ್ತೊಂದು ತೀರ್ಪುಗಾರರ ಕಾರ್ಯಾಗಾರ ನಡೆಸಲಾಗುತ್ತದೆ. ಆಸಕ್ತರು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಿಕೊಳ್ಳಬೇಕೆಂದು ವಿರಾಜಪೇಟೆ ಕೊಡವ ಹಾಕಿ ಅಕಾಡೆಮಿ ಸದಸ್ಯರು ತಿಳಿಸಿದ್ದಾರೆ.ಈ ಸಂದರ್ಭ ಸಂಪನ್ಮೂಲ ವ್ಯಕ್ತಿ ರಘು ಪ್ರಸಾದ್, ವಿರಾಜಪೇಟೆ ಕೊಡವ ಹಾಕಿ ಉಪಾಧ್ಯಕ್ಷ ಮಾದಂಡ ಪೂವಯ್ಯ, ಮಡಿಕೇರಿ ಕೊಡವ ಹಾಕಿ ಉಪಾಧ್ಯಕ್ಷ ಬಡಕಡ ಡೀನಾ ಪೂವಯ್ಯ, ಕಂಬೀರಂಡ ರಾಖಿ ಪೂವಣ್ಣ, ನೆರಪಂಡ ಹರ್ಷ ಮಂದಣ್ಣ, ಕುಲ್ಲಿಟೀರ ಅರುಣ್ ಬೇಬ, ಅಪ್ಪಚಟೋಲಂಡ ಅಯ್ಯಪ್ಪ, ತಮ್ಮಯ್ಯ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.