- ಕೇಸರಿ ಬಂಟಿಂಗ್‌ಗಳಿಂದ ಸಿಂಗಾರಗೊಂಡ ಪಟ್ಟಣ । ಬಿಗಿ ಪೊಲೀಸ್ ಭದ್ರತೆ, ಡ್ರೋಣ್ ಕಣ್ಗಾವಲು
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಊರಬಾಗಿಲ ಶ್ರೀ ಹನುಮಂತ ದೇವಾಲಯ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್- ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಿರುವ ವಿರಾಟ್ ಹಿಂದೂ ಮಹಾಗಣಪತಿ ರಾಜಬೀದಿ ಉತ್ಸವ ಅಕ್ಟೋಬರ್ 8ರಂದು ನಡೆಯಲಿದ್ದು, ಮೆರವಣಿಗೆ ಬಳಿಕ ಪಟ್ಟಣದ ಗಣಪತಿ ಹೊಂಡದಲ್ಲಿ ವಿಸರ್ಜನೆ ನಡೆಯಲಿದೆ.ಬೃಹತ್ ಶೋಭಾಯಾತ್ರೆ ಸಂಭ್ರಮಕ್ಕೆ ಚನ್ನಗಿರಿ ಪಟ್ಟಣ ಸಜ್ಜಾಗಿದೆ. ಪ್ರಮುಖ ರಸ್ತೆಗಳಲ್ಲಿ ಕೇಸರಿ ಬಣ್ಣದ ಬಾವುಟ ಮತ್ತು ಬಂಟಿಂಗ್ಸ್, ಝಗಮಗಿಸುವ ವಿದ್ಯುತ್ ದೀಪಗಳಿಂದ ಸಿಂಗಾರ ಮಾಡಲಾಗಿದೆ. ಪಟ್ಟಣದ ಯಾವ ದಿಕ್ಕಿನಲ್ಲಿ ನೋಡಿದರೂ ಶೋಭಾಯಾತ್ರೆಗೆ ಶುಭ ಕೋರುವ ಫ್ಲೆಕ್ಸ್ ಮತ್ತು ಬ್ಯಾನರ್‌ಗಳೇ ರಾರಾಜಿಸುತ್ತಿದ್ದು, ಪ್ರಮುಖ ವೃತ್ತಗಳು ಆಕರ್ಷಣೆ ಹೆಚ್ಚಿಸಿಕೊಂಡಿವೆ.
ಇತ್ತೀಚಿನ ದಿನಗಳಲ್ಲಿ ಚನ್ನಗಿರಿ ವಿರಾಟ್ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಮಧ್ಯ ಕರ್ನಾಟಕ ಭಾಗದಲ್ಲಿ ಸದ್ದು ಮಾಡುತ್ತಿದೆ. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸ್ವಾಗತ ಕೋರುವ ಮಹಾದ್ವಾರಗಳು, ಉಗ್ರ ನರಸಿಂಹನ ಮೂರ್ತಿ, ಭೂವರಹಾ ಸ್ವಾಮಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮ ಹಿಂದೂ ಕಾರ್ಯಕರ್ತರ ಭಾವಚಿತ್ರಗಳು ಕಣ್ಮನ ಸೆಳೆಯುತ್ತಿವೆ.
ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 3 ಜನ ಡಿವೈಎಸ್‌ಪಿ, 10 ಸರ್ಕಲ್ ಇನ್ಸ್‌ಪೆಕ್ಟರ್, 24 ಪೊಲೀಸ್ ಸಬ್ ಇನ್‌ಸ್ಪೆಕ್ಟರ್, 35 ಎ.ಎಸ್.ಐ, 240 ಪೊಲೀಸ್ ಹೆಡ್ ಕಾನ್‌ಸ್ಟೇಬಲ್ಸ್, 150 ಹೋಮ್ ಗಾರ್ಡ್ಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಶೋಭಾಯಾತ್ರೆ ಉದ್ದಕ್ಕೂ 2 ಡ್ರೋನ್ ಕ್ಯಾಮರಾಗಳ ಕಣ್ಗಾವಲು ಇರಲಿದೆ. ಪಟ್ಟಣದ ಆಯಕಟ್ಟಿನ ಪ್ರದೇಶಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಒಟ್ಟು 462 ಜನ ಪೊಲೀಸ್ ಸಿಬ್ಬಂದಿಯೊಂದಿಗೆ 2 ಕೆ.ಎಸ್.ಆರ್.ಪಿ. ತುಕಡಿಗಳು, ಅರೆಸೇನಾ ಪಡೆ ತುಕಡಿಗಳು ಇರಲಿವೆ. ಪಟ್ಟಣದಲ್ಲಿ ಕಾನೂನು ಸುವ್ಯಸ್ಥೆ ಕಾಪಾಡಲು ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಡಿವೈಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ತಿಳಿಸಿದ್ದಾರೆ.
(ಬಾಕ್ಸ್)
ಚನ್ನಗಿರಿ: ಪಟ್ಟಣದ ವಿರಾಟ್ ಹಿಂದೂ ಮಹಾಗಣಪತಿ ವಿಸರ್ಜನೆ ಅ.8ರ ಗುರುವಾರ ನಡೆಯಲಿದ್ದು, ವಿಸರ್ಜನಾ ಪೂರ್ವ ನಡೆಯಲಿರುವ ಬೃಹತ್ ಶೋಭಾಯಾತ್ರೆ ನಿಮಿತ್ತ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಿಗಿ ಪೊಲೀಸ್ ಬಂದೋಬಸ್ತಿಗೆ ನಿಯೋಜನೆಗೊಂಡಿರುವ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಡಿವೈಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಿದರು. ಪಥ ಸಂಚಲನವು ಗಣಪತಿ ಮಂಟಪದ ಮುಂದೆ ಸಾಗಿ ಬರುವಾಗ ಗಣೇಶೋತ್ಸವ ಸಮಿತಿ ಪ್ರಮುಖರು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಪುಷ್ಪವೃಷ್ಠಿ ಸುರಿಸಿ, ಸ್ವಾಗತ ಕೋರಿದರು.
-7ಕೆಸಿಎನ್ಜಿ5: ಡಿವೈಎಸ್‌ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ ನೇತೃತ್ವದಲ್ಲಿ ಬುಧವಾರ ಸಂಜೆ ಪೊಲೀಸ್ ಪಥ ಸಂಚಲನ ನಡೆಯಿತು.
-7ಕೆಸಿಎನ್ಜಿ4: ವಿಶ್ವ ಹಿಂದೂ ಪರಿಷತ್- ಬಜರಂಗದಳದಿಂದ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ.