ಸಮಾನತೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣ

KannadaprabhaNewsNetwork |  
Published : Feb 18, 2024, 01:31 AM IST
೧೭ಕೆಜಿಎಫ್೨ಕೆಜಿಎಫ್ ತಾಲೂಕು ಆಡಳಿತ ಸೌಧದಲ್ಲಿ ವಿಶ್ವಗುರು ಬಸವಣ್ಣರ ಭಾವಚಿತ್ರ ಶಾಸಕಿ ರೂಪಕಲಾ ಶಶಿಧರ್ ಅನಾವರಣಗೊಳಿಸಿದರು. | Kannada Prabha

ಸಾರಾಂಶ

ಅಹಿಂಸಾ ತತ್ವವನ್ನು ಬೋಧಿಸಿದ ಬುದ್ಧ, ಬಸವ, ಮಹಾತ್ಮಾಗಾಂಧಿ, ಅಂಬೇಡ್ಕರ್ ಎಲ್ಲ ಮಹನೀಯರು ತಮ್ಮ ತಮ್ಮ ಕಾಲಘಟ್ಟಗಳಲ್ಲಿ ಆರೋಗ್ಯಕರ, ಮನುಷ್ಯತ್ವದಿಂದ ಕೂಡಿದ ಸಾಮಾಜಿಕ ವ್ಯವಸ್ಥೆ ಬಯಸಿದವರು

ಕನ್ನಡಪ್ರಭ ವಾರ್ತೆ ಕೆಜಿಎಫ್

ಎಲ್ಲ ವರ್ಗದವರನ್ನು ಸಮಾನವಾಗಿ ಕಂಡು ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಸಂದೇಶ ಜಗತ್ತಿಗೆ ಸಾರಿದ ವಿಶ್ವಗುರು ಬಸವಣ್ಣರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.

ನಗರದ ತಾಲೂಕು ಆಡಳಿತ ಭವನದಲ್ಲಿ ವಿಶ್ವಗುರು ಜಗಜ್ಜೋತಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿ, ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ನಮ್ಮೆಲ್ಲರ ಹೆಮ್ಮೆಯಾಗಿದ್ದು, ಅವರು ಜನಿಸಿದಂತಹ ಭೂಮಿಯಲ್ಲಿ ನಾವು ಜನಿಸಿರುವುದು ನಮ್ಮೆಲ್ಲರ ಭಾಗ್ಯವಾಗಿದೆ ಎಂದರು.

ಸಮಾನತೆಯ ಹಕ್ಕು ಪ್ರತಿಪಾದನೆ

ಅಹಿಂಸಾ ತತ್ವವನ್ನು ಬೋಧಿಸಿದ ಬುದ್ಧ, ಬಸವ, ಮಹಾತ್ಮಾಗಾಂಧಿ, ಅಂಬೇಡ್ಕರ್ ಎಲ್ಲ ಮಹನೀಯರು ತಮ್ಮ ತಮ್ಮ ಕಾಲಘಟ್ಟಗಳಲ್ಲಿ ಆರೋಗ್ಯಕರ, ಮನುಷ್ಯತ್ವದಿಂದ ಕೂಡಿದ ಸಾಮಾಜಿಕ ವ್ಯವಸ್ಥೆ ಬಯಸಿದವರು. ಜಾತೀಯತೆ, ಮೌಢ್ಯ ಕಂದಾಚಾರಗಳನ್ನು ತಮ್ಮದೇ ಆದ ರೀತಿಯಲ್ಲಿ ವಿರೋಧಿಸುವ ಮೂಲಕ ಎಲ್ಲರಿಗೂ ಸಮಾಜದಲ್ಲಿ ಬದುಕುವ ಹಕ್ಕಿದೆ ಎಂದು ಸಾರಿದಂತಹವರಾಗಿದ್ದಾರೆ, ಸಮಾಜದಲ್ಲಿನ ಮೇಲು, ಕೀಳು, ಬಡವ, ಬಲ್ಲಿದ ಎಂಬ ಅಸಮಾನತೆಗಳನ್ನು ತೊಲಗಿಸಿ ಎಲ್ಲರೂ ಗೌರವದಿಂದ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ದಿಸೆಯಲ್ಲಿ ಬಸವಣ್ಣನವರು ಶ್ರಮಿಸಿದ್ದರು. ಅವರ ಹಾದಿಯಲ್ಲಿ ನಾವು ನಡೆದಲ್ಲಿ ನವ ಸಮಾಜ, ಸಮ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದರು. ವಚನಗಳ ಮೂಲಕ ಜನಜಾಗೃತಿ

ನುಡಿದಂತೆ ನಡೆದವರ ಕೀರ್ತಿ ಬಸವಣ್ಣರಿಗೆ ಸಲ್ಲುತ್ತದೆ, ವರ್ಗ ರಹಿತ, ಜಾತಿ ರಹಿತ, ಮೌಢ್ಯಗಳಿಲ್ಲದ ವೈಚಾರಿಕ ಸಮಾಜ ಸ್ಥಾಪನೆಯ ಆಶಯದಿಂದ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ವಚನಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದ ಕೀರ್ತಿ ಬಸವಣ್ಣರಿಗೆ ಸಲ್ಲುತ್ತದೆ ಎಂದು ಹೇಳಿದರು.

ಸಮ ಪಾಲು, ಸಮ ಬಾಳು

ಕಾಯಕ, ದಾಸೋಹ ಬೋಧಿಸಿದ ಬಸವಣ್ಣ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಎಂಬಂತೆ ಯಾರೂ ಸಹ ಕುಳಿತು ತಿನ್ನದೇ ಕಾಯಕದಲ್ಲಿ ತೊಡಗಬೇಕೆಂದು ಪ್ರತಿಪಾದಿಸಿದರು, ಬಡವರು ಬಡವರಾಗಿಯೇ ಉಳಿಯುವ ಹಾಗೂ ಶ್ರೀಮಂತರ ಕೂತು ತಿನ್ನುವ ವ್ಯವಸ್ಥೆ ಹೋಗಬೇಕು, ಅಧಿಕಾರ ಮತ್ತು ಸಂಪತ್ತು ಕೆಲವೇ ಜನರ ಕೈಯಲ್ಲಿ ಇರಬಾರದು, ಎಲ್ಲರಿಗೂ ಸಮಪಾಲು, ಸಮಬಾಳು ಎಂದು ಬಸವಾದಿ ಶರಣರು ತಿಳಿಸಿದ್ದರು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗವೇಣಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ಶಿಕ್ಷಕ ಅಶ್ವತ್ಥ್ ಗ್ರಾಮ ಆಡಳಿತಾಧಿಕಾರಿಗಳಾದ ವಿನೀತ್, ಅಂಬರೀಷ್‌ ಇದ್ದರು.

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ