ವಿಶ್ವಕರ್ಮ ವಿಶ್ವದ ಮೊದಲ ಎಂಜಿನಿಯರ್: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Sep 18, 2025, 01:10 AM IST
೧೭ಕೆಎಂಎನ್‌ಡಿ-೭ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ವಿಶ್ವಕರ್ಮದವರು ಇಲ್ಲವೆಂದರೆ ರೈತರಿಗೆ ಉಳುಮೆ ಮಾಡಲು ನೇಗಿಲು ಇರುತ್ತಿರಲಿಲ್ಲ. ವಿಶ್ವಕರ್ಮ ರೈತ ಸ್ನೇಹಿ. ಮದುವೆ, ಶುಭ ಸಂದರ್ಭಗಳಲ್ಲಿ ತಾಳಿ ಒಡವೆ ಮಾಡುವಂತಹ ಪೂಣ್ಯದ ಕೆಲಸವನ್ನು ವಿಶ್ವಕರ್ಮ ಸಮುದಾಯದವರು ಮಾಡಿಕೊಂಡು ಬರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದೇವರುಗಳಿಗೂ ಮನೆ ನಿರ್ಮಾಣ ಮಾಡಿದಂತಹ ವಿಶ್ವಕರ್ಮ ವಿಶ್ವದ ಮೊದಲ ಎಂಜಿನಿಯರ್ ಎಂದು ಶಾಸಕ ಪಿ.ರವಿಕುಮಾರ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮದವರು ಇರದಿದ್ದರೆ ವಾಸವಿರಲು ಮನೆಗಳು ಇರುತ್ತಿರಲಿಲ್ಲ. ಇಂದು ಅಯೋಧ್ಯೆ, ಕನ್ಯಾಕುಮಾರಿ, ಕೇದಾರನಾಥ ಇವೆಲ್ಲಾ ದೇವಾಲಯಗಳಿಗೆ ಅಡಿಪಾಯ ಹಾಕಿದವರು ಹಾಗೂ ಜಗತ್ತಿನ ಮೊದಲ ದೇವಾಲಯವನ್ನು ನಿರ್ಮಿಸಿದವರು ವಿಶ್ವಕರ್ಮರು ಎಂದರು .

ವಿಶ್ವಕರ್ಮದವರು ಇಲ್ಲವೆಂದರೆ ರೈತರಿಗೆ ಉಳುಮೆ ಮಾಡಲು ನೇಗಿಲು ಇರುತ್ತಿರಲಿಲ್ಲ. ವಿಶ್ವಕರ್ಮ ರೈತ ಸ್ನೇಹಿ. ಮದುವೆ, ಶುಭ ಸಂದರ್ಭಗಳಲ್ಲಿ ತಾಳಿ ಒಡವೆ ಮಾಡುವಂತಹ ಪೂಣ್ಯದ ಕೆಲಸವನ್ನು ವಿಶ್ವಕರ್ಮ ಸಮುದಾಯದವರು ಮಾಡಿಕೊಂಡು ಬರುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಅವರ ಜೊತೆ ಇದೆ. ನಗರದಲ್ಲಿ ವಿಶ್ವಕರ್ಮ ಭವನವಿಲ್ಲ. ಸರ್ಕಾರಿ ಜಾಗಗಳಿಗೆ ಕೊರತೆ ಇದೆ. ಮುಡಾದಿಂದ ಸೈಟ್ ಖರೀದಿ ಮಾಡಿದರೆ ಸರ್ಕಾರದ ಅನುದಾನದಿಂದ ಸಮುದಾಯ ಭವನ ನಿರ್ಮಾಣ ಮಾಡಬಹುದು. ಸೈಟ್ ಖರೀದಿಸಲು ನಾನು ೫ ಲಕ್ಷ ರು. ಹಣ ನೀಡುತ್ತೇನೆ ಎಂದು ಭರವಸೆ ನೀಡಿದರು.

ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ ಉದಯ್ ಮಾತನಾಡಿ, ಸಮಾಜಕ್ಕೆ ವಿಶ್ವಕರ್ಮ ಸಮುದಾಯದವರು ಅನೇಕ ಕೊಡುಗೆಯನ್ನು ನೀಡಿದ್ದಾರೆ. ಆಧುನೀಕರಣದಲ್ಲಿ ಅನೇಕ ತಾಂತ್ರಿಕ ಮಾರ್ಪಾಡುಗಳು ಉಂಟಾಗಿವೆ. ಆದರೆ ಈಗಲೂ ಕೌಶಲ್ಯಯುತವಾದ ಕಸುಬಿನೊಂದಿಗೆ ಸಮಾಜಕ್ಕೆ ವಿಶ್ವಕರ್ಮ ಸಮುದಾಯದವರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಮದ್ದೂರಿನಲ್ಲಿ ವಿಶ್ವಕರ್ಮ ಸಮುದಾಯದವರಿಗೆ ನಿವೇಶನ ನೀಡುವ ಸಲುವಾಗಿ ಸರ್ವೆ ಕೆಲಸ ನಡೆಸಲಾಗುತ್ತಿದೆ. ಶೀಘ್ರದಲ್ಲೇ ನಿವೇಶನ ಕೊಡಿಸಲಾಗುವುದು. ಒಂದು ರಸ್ತೆ ವೃತ್ತದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಅವರು ಪ್ರತಿಮೆ ನಿರ್ಮಾಣ ಮಾಡಲು ಚಿಂತನೆ ಮಾಡಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ ಮಾತನಾಡಿ, ವಿಶ್ವಕರ್ಮ ಭವನ ನಿರ್ಮಾಣಕ್ಕೆ ಸೈಟ್ ಖರೀದಿಸಲು ಶಾಸಕರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ನೀವು ಸಹ ನಿಮ್ಮ ಸಮುದಾಯದವರ ಬಳಿ ಹಣ ಸಂಗ್ರಹಣೆ ಮಾಡಿದರೆ ಮುಡಾದಲ್ಲಿ ಸೈಟ್ ಖರೀದಿಸಲು ಕ್ರಮ ವಹಿಸಬಹುದು ಎಂದರು.

ನಂತರ ವಿಶ್ವಕರ್ಮ ಸಮುದಾಯದಲ್ಲಿ ಸಾಧನೆ ಮಾಡಿದ ಹತ್ತು ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿ, ಯತಿರಾಜ ದಾರ್ಪ ಗುರು ಪೀಠದ ಗೃಹಸ್ಥ ಪೀಠಾಧಿಪತಿ ಶ್ರೀನಿವಾಸ ನರಸಿಂಹಸ್ವಾಮಿ ಗುರೂಜಿ. ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್), ನಟ ಮದನ್‌ಕುಮಾರ್, ಜಿಲ್ಲಾ ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಸುದರ್ಶನ್, ನಗರಸಭೆ ಸದಸ್ಯರಾದ ಶ್ರೀಧರ್, ಶಿವಪ್ರಕಾಶ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್ ಇತರರಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ