ಕಾರವಾರ: ದೇಶಕ್ಕೆ ಕಾನೂನುಬಾಹಿರವಾಗಿ ನುಸುಳುವ ಅಡಕೆಯನ್ನು ನಿಯಂತ್ರಿಸಬೇಕು ಎಂದು ಕುಮಟಾ ಅಡಿಕೆ ಮಾರಾಟ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ವಿಶ್ವನಾಥ ಹೆಗಡೆ ಕೂಜಳ್ಳಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಡಕೆ ಬೆಳೆಗಾರರ ಹಿತರಕ್ಷಣೆಗೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ಸರ್ಕಾರ ಹಾಗೂ ರೈತರ ಗಮನ ಸೆಳೆದಿದ್ದಾರೆ.ಬೆಳೆಗಾರರ ಹಂತದಲ್ಲಿ ಅಡಕೆಯ ಸಮಗ್ರ ಗುಣ ಧರ್ಮಗಳ ಕುರಿತು ವಿಸ್ತ್ರತ ಸಂಶೋಧನೆಗೆ ಚಾಲನೆ ನೀಡಬೇಕು. ಅಡಕೆ ಪೊಟ್ಟಣದ ಮೇಲೆ ಕಡ್ಡಾಯವಾಗಿ ಬರೆಯಬೇಕಾದ ಅಡಕೆ ಜಗೆಯುವುದು ಆರೋಗ್ಯಕ್ಕೆ ಹಾನಿಕರ ಎನ್ನುವುದು ನಿರಾಧಾರವಾಗಿದ್ದು, ಇದನ್ನು ತಕ್ಷಣ ರದ್ದು ಮಾಡಬೇಕು.ಅಡಕೆ ಬೆಳೆಯ ಅವೈಜ್ಞಾನಿಕ ವಿಸ್ತರಣೆಯನ್ನು ನಿಯಂತ್ರಿಸುವ ನೀತಿ ಜಾರಿಗೆ ಬರಬೇಕು. ರೈತರಿಂದ- ಬಳಕೆದಾರರವರೆಗಿನ ಅಡಕೆ ಉತ್ಪನ್ನದ ಗರಿಷ್ಠ ಗುಣಮಟ್ಟ ಕಾಯ್ದುಕೊಳ್ಳುವುದು ಹಾಗೂ ಕಲಬೆರಕೆಯಾಗುತ್ತಿರುವ ಅಪಾಯಕಾರಿ ರಾಸಾಯನಿಕಗಳ ಬಳಕೆಗೆ ಕಠಿಣ ಕಡಿವಾಣ ಹಾಕಲು, ಅಡಕೆ ಮತ್ತು ಸಾಂಬಾರು ಬೆಳೆ ಅಭಿವೃದ್ಧಿ ನಿರ್ದೇಶನಾಲಯ ಸಮಗ್ರವಾಗಿ ನಿಯಮಾವಳಿ ರೂಪಿಸಿ, ಜಾರಿಗೆ ತರಬೇಕು.ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಡಕೆಯ ಉತ್ಪನ್ನಗಳ ಗುಣಮಟ್ಟದ ಕುರಿತು ಆಹಾರ ಸುರಕ್ಷತೆ ಬಗ್ಗೆ ಸೂಕ್ತ ನಿಯಮಾವಳಿ ರೂಪಿಸಿ ಜಾರಿಗೆ ತರಬೇಕು. ಆಹಾರ ವಸ್ತು ಹಾಗೂ ಅಡಕೆಯ ಗುಣಮಟ್ಟ ಮೇಲ್ವಿಚಾರಣೆಗಾಗಿ ಹಾಗೂ ತಾಲೂಕು ಮಟ್ಟದಲ್ಲಿ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಅಡಕೆ ಬೇಸಾಯ, ರೋಗ ನಿರ್ವಹಣೆ, ಕೊಯಿಲು, ಸಂಸ್ಕರಣೆ, ಸಂಗ್ರಹಣೆ ಹಾಗೂ ಮಾರುಕಟ್ಟೆಗೆ ಒಯ್ಯುವುದು- ಈ ಎಲ್ಲ ಹಂತಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ಸೂಕ್ತ ವಿಧಾನಗಳನ್ನು ಪಾಲಿಸುವ ಸ್ವಯಂಶಿಸ್ತನ್ನು ರೈತರು ಪಾಲಿಸಬೇಕು.
ಅಡಕೆ ವ್ಯಾಪಾರದಲ್ಲಿ ತೊಡಗಿರುವವರು, ಸ್ವಯಂಶಿಸ್ತು, ಸೂಕ್ತ ನಿಯಮಾವಳಿ, ತಂತ್ರಜ್ಞಾನ ಹಾಗೂ ಟ್ರೇಡ್ ಮಾರ್ಕ್ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ನಾಳೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಡಿ. ೧೩ರಂದು ೧೦.೩೦ಕ್ಕೆ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ ತಿಳಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು, ಸಚಿವರು ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷ ಎಂಟು ತಿಂಗಳು ಕಳೆದಿದೆ. ಇದುವರೆಗೂ ಬೇರೆ ಬೇರೆ ನಿಗಮ ಮಂಡಳಿಗೆ ಅನುದಾನ ನೀಡಿಲ್ಲ. ನಿಗಮಗಳಲ್ಲಿ ಇರುವ ಯೋಜನೆಯನ್ನು ಬಂದ್ ಮಾಡಲಾಗಿದೆ.
ಯಾವುದೇ ರೀತಿಯ ಸಹಾಯಧನ, ಸಬ್ಸಿಡಿ ಯಾವುದನ್ನೂ ನೀಡುತ್ತಿಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ವಿಶ್ವಕರ್ಮ ನಿಗಮಕ್ಕೆ ₹೧೦೦ ಕೋಟಿ, ಅಂಬಿಗರ ಚೌಡಯ್ಯ ನಿಗಮಕ್ಕೆ ₹೭೫ ಕೋಟಿ, ಅಲೆಮಾರಿ ನಿಗಮಕ್ಕೆ ₹೧೨೮ ಕೋಟಿ, ಒಕ್ಕಲಿಗ ನಿಗಮಕ್ಕೆ ₹೩೦೦ ಕೋಟಿ ಹೀಗೆ ಬೇರೆ ಬೇರೆ ನಿಗಮಕ್ಕೆ ಸೇರಿ ₹೩ ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ದೇವರಾಜ ಅರಸು ನಿಗಮಕ್ಕೆ ₹೩೦೦ ಕೋಟಿ ಅತಿದೊಡ್ಡ ಮೊತ್ತದ ಅನುದಾನ ನೀಡಿದ್ದರು ಎಂದರು.ದೇವರಾಜ ಅರಸು ನಿಗಮದಿಂದ ಅರಿವು ಕಾರ್ಯಕ್ರಮವಿದೆ. ಹಿಂದುಳಿದ ವರ್ಗದ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಉನ್ನತ ವ್ಯಾಸಂಗಕ್ಕೆ ಸಬ್ಸಿಡಿಯಲ್ಲಿ ಸಾಲ ಸಿಗುತ್ತಿತ್ತು. ಆದರೆ ಈ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾವುದೂ ಸಿಗುತ್ತಿಲ್ಲ. ವಿವಿಧ ನಿಗಮಗಳಲ್ಲಿ ಇರುವ ಇಂತಹ ಯಾವ ಯೋಜನೆಯೂ ಅನುಷ್ಠಾನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಡಿಸಿದ ಅವರು, ರಾಜ್ಯ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯಕ, ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಸ್ ಗುನಗಿ, ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ದೀಪಾ ಹರಿಕಂತ್ರ, ನಗರದ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ, ದೇವಿದಾಸ ನಾಯ್ಕ, ಕಿಶನ ಕಾಂಬ್ಳೆ, ಪ್ರದೀಪ ಗುನಗಿ, ವಿನಾಯಕ ಶೇಟ್ ಇದ್ದರು.