ಡೀಸೆಲ್ ಬೆಲೆ ಏರಿಕೆ ಖಂಡಿಸಿ ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆ

KannadaprabhaNewsNetwork | Published : Apr 3, 2025 12:31 AM

ಸಾರಾಂಶ

ಕೇಂದ್ರ ಸರ್ಕಾರ ಕೂಡ ಟೋಲ್ ಬೆಲೆಯನ್ನು ಶೇ. 5 ರಷ್ಟು ಏರಿಕೆ ಮಾಡಿದೆ

ಕನ್ನಡಪ್ರಭ ವಾರ್ತೆ ನಂಜನಗೂಡುರಾಜ್ಯ ಸರ್ಕಾರ ಡೀಸೆಲ್ ಬೆಲೆಯನ್ನು ಎರಡು ರು. ಗೆ ಏರಿಕೆ ಮಾಡಿರುವ ಕ್ರಮವನ್ನು ಖಂಡಿಸಿ ನಂಜನಗೂಡು ಲಾರಿ ಮಾಲೀಕರ ಸಂಘದ ವತಿಯಿಂದ ಪ್ರತಿಭಟಿಸಲಾಯಿತು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಯ ಬಳಿ ಜಮಾವಣಿಗೊಂಡ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ಪದಾಧಿಕಾರಿಗಳು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಈಗಾಗಲೇ ಲಾರಿ ಬಿಡಿ ಭಾಗಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ನಮಗೆ ರಾಜ್ಯ ಸರ್ಕಾರ ಡೀಸೆಲ್ ಬೆಲೆಯನ್ನು ಎರಡು ರು. ಗೆ ಏರಿಕೆ ಮಾಡುವ ಮೂಲಕ ಲಾರಿ ಮಾಲೀಕರಿಗೆ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ. ಅಲ್ಲದೆ ಕೇಂದ್ರ ಸರ್ಕಾರ ಕೂಡ ಟೋಲ್ ಬೆಲೆಯನ್ನು ಶೇ. 5 ರಷ್ಟು ಏರಿಕೆ ಮಾಡಿದೆ. ಆದರೆ ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ಲಾರಿ ಮಾಲೀಕರ ಸಂಕಷ್ಟ ಆಲಿಸುವ ಕೆಲಸ ಮಾಡಿಲ್ಲ, ದೇಶಾದ್ಯಂತ ಒಂದೇ ರೀತಿಯ ಬಾಡಿಗೆಯನ್ನು ನಿಗದಿಗೊಳಿಸುವಂತಹ ಕ್ರಮಕ್ಕೆ ಮುಂದಾಗಿಲ್ಲ, ಇದರಿಂದಾಗಿ ಕಡಿಮೆ ಬಾಡಿಗೆ ತೆಗೆದುಕೊಂಡು ರಸ್ತೆ ತೆರಿಗೆ, ಇನ್ಸೂರೆನ್ಸ್, ಟೋಲ್ ಶುಲ್ಕ ಹೆಚ್ಚಿನ ಹೊರೆಯಾಗಿದೆ, ಅಲ್ಲದೆ ಆರ್.ಟಿ.ಓ ಮತ್ತು ಪೊಲೀಸರ ಕಿರುಕುಳದ ಜೊತೆಗೆ ಚೆಕ್ ಪೋಸ್ಟ್ ಗಳಲ್ಲಿ ಮಾಮೂಲಿ ಎಂದು ಹಫ್ತಾ ವಸೂಲಿ ಮಾಡಲಾಗುತ್ತಿರುವುದರಿಂದ ಲಾರಿ ಮಾಲೀಕರು ಲಾರಿಯನ್ನೇ ಓಡಿಸಲಾಗದ ಸ್ಥಿತಿಗೆ ತಲುಪಿದ್ದೇವೆ ಎಂದರು.ಈ ಕೂಡಲೇ ರಾಜ್ಯ ಸರ್ಕಾರ ಡೀಸೆಲ್ ಏರಿಕೆಯನ್ನು ಹಿಂಪಡೆಯಬೇಕು, ಜೊತೆಗೆ ಬಾರ್ಡರ್ ಗಳಲ್ಲಿರುವ ಚೆಕ್ ಪೋಸ್ಟ್ ಗಳಲ್ಲಿ ಭ್ರಷ್ಟಾಚಾರ ಅಧಿಕವಾಗಿರುವ ಕಾರಣ ಚೆಕ್ ಪೋಸ್ಟ್ ಗಳನ್ನು ತೆರವುಗೊಳಿಸಬೇಕು, ಆರ್.ಟಿ.ಓ ಅಧಿಕಾರಿಗಳು ಮತ್ತು ಪೊಲೀಸರ ಕಿರುಕುಳವನ್ನು ತಪ್ಪಿಸಬೇಕು, ಇಲ್ಲವಾದಲ್ಲಿ ಕಾರ್ಖಾನೆಗಳಿಗೆ ಲಾರಿ ಬಾಡಿಗೆಗಳನ್ನು ಶೇ. 25 ರಷ್ಟು ಹೆಚ್ಚಿಸುವಂತೆ ಆದೇಶ ಹೊರಡಿಸಬೇಕು, ನಮ್ಮ ಬೇಡಿಕೆ ಈಡೇರದೆ ಹೋದಲ್ಲಿ ಎಲ್ಲಾ ಲಾರಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ತಂದು ನಿಲ್ಲಿಸುವ ಮೂಲಕ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದರು.ಲಾರಿ ಮಾಲಿಕರ ಸಂಘದ ಕಾರ್ಯದರ್ಶಿ ಗಣೇಶ್, ಉಪಾಧ್ಯಕ್ಷ ಮಣಿ, ರಫೀಕ್, ರಾಮರಾಜ್, ಮನ್ಸೂರ್, ಭಾಗ್ಯರಾಜು, ಶಿವು, ನವೀನ, ಕೀರ್ತಿ, ವಿಶ್ವ, ಸೇರಿದಂತೆ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಇದ್ದರು.

Share this article