ಜನಮಾನಸದಲ್ಲಿ ಶಾಶ್ವತವಾಗಿರುವ ವಿಶ್ವನಾಥರೆಡ್ಡಿ ಮುದ್ನಾಳರು: ರಂಭಾಪುರಿ ಶ್ರೀ

KannadaprabhaNewsNetwork | Published : Feb 24, 2024 2:30 AM

ಸಾರಾಂಶ

ಯಾದಗಿರಿ ನಗರದ ಮುದ್ನಾಳ ಕ್ರಾಸ್ ಹತ್ತಿರ ಲಿಂ. ವಿಶ್ವನಾಥರೆಡ್ಡಿ ಮುದ್ನಾಳ ಅವರ ಅಭಿಮಾನಿಗಳ ಬಳಗ ನಿರ್ಮಾಣ ಮಾಡಿರುವ ಕಂಚಿನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಂಭಾಪುರಿ ಶ್ರೀ ಮಾತನಾಡಿದರು. ಕಂಚಿನ ಪ್ರತಿಮೆಯ ಲೋಕಾರ್ಪಣೆಗೊಂಡಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಸ್ವಾತಂತ್ರ ಹೋರಾಟಗಾರರಾಗಿದ್ದ ಮಾಜಿ ಸಚಿವ ಲಿಂ.ವಿಶ್ವನಾಥರಡ್ಡಿ ಮುದ್ನಾಳ ಅವರು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ರಂಭಾಪುರಿ ವೀರಸಿಂಹಾಸನಾಧಿಶ್ವರ 1008 ಜಗದ್ಗುರು ಪ್ರಸನ್ನ ಡಾ.ವೀರ ಸೋಮೇಶ್ವರ ಶಿವಾಚಾರ್ಯ ಭಗತ್ಪಾದರು ನುಡಿದರು. ನಗರದ ಮುದ್ನಾಳ ಕ್ರಾಸ್ ಹತ್ತಿರ ಮುದ್ನಾಳ ಅಭಿಮಾನಿಗಳ ಬಳಗ ನಿರ್ಮಾಣ ಮಾಡಿರುವ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದ ಪಾವನ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಶುಕ್ರವಾರ, ನಗರದ ಮುದ್ನಾಳ ಕ್ರಾಸ್ ಹತ್ತಿರ ಮುದ್ನಾಳ ಅಭಿಮಾನಿಗಳ ಬಳಗ ನಿರ್ಮಾಣ ಮಾಡಿರುವ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಿಂ.ಮುದ್ನಾಳ ಅವರು ಯಾವಾಗಲೂ ಅನ್ಯಾಯ, ಅಧರ್ಮದ ವಿರುದ್ಧ ತಮ್ಮ ಗಟ್ಟಿ ಧ್ವನಿ ಎತ್ತಿದವರು. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದಂತಹ ವ್ಯಕ್ತಿ, ಅವರ ಆದರ್ಶ ಜೀವನ ಇಂದಿನ ಯುವಕರಿಗೆ ದಾರಿದೀಪವಾಗಲಿ ಎಂದು ಹಾರೈಸಿದ ರಂಭಾಪುರಿ ಶ್ರೀಗಳು, ಬದುಕಿನುದ್ದಕ್ಕೂ ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಸಾಮರಸ್ಯ, ರಾಷ್ಟ್ರಪ್ರೇಮ, ಐಕ್ಯತೆ ಮೂಡಿಸುವ ಜೊತೆಗೆ ಅಭಿವೃದ್ಧಿಗೆ ಮುದ್ನಾಳ ಅವರು ತಮ್ಮದೇಯಾದ ಕೊಡುಗೆ ನೀಡಿದ್ದಾರೆಂದರು.

ಮಹಾತ್ಮ ಗಾಂಧಿಜೀಯವರ ಸರಳ ಜೀವನ ಹಾಗೂ ಸ್ವಾತಂತ್ರ ಸೇನಾನಿ ನೇತಾಜಿ ಸುಭಾಶ್ಚಂದ್ರ ಭೋಸರು ದೇಶಕ್ಕಾಗಿ ನಡೆಸಿದ ಹೋರಾಟದ ಗುಣಗಳನ್ನು ಮೈಗೂಡಿಸಿಕೊಂಡು ಕಲ್ಯಾಣ ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದರು, ಅವರಿಗೆ ವ್ಯಯಕ್ತಿಕ ಹಿತಾಸಕ್ತಿ ಬದಿಗಿಟ್ಟು, ಜನರ ಸಮಸ್ಯೆಗಳಿಗೆ ಸ್ಪಂಧಿಸಿದ ಕೀರ್ತಿ ಸಲ್ಲುತ್ತದೆ, ಅದಕ್ಕೆ ಈ ಸಮಾರಂಭವೇ ಸಾಕ್ಷಿ ಎಂದು ಹೇಳಿದರು.

ಯಾವುದೇ ವ್ಯಕ್ತಿಗಾಗಲೀ ದೇಶ ಮತ್ತು ಧರ್ಮ ಎರಡು ಕಣ್ಣುಗಳಿದ್ದಂತೆ, ಅದನ್ನು ಅರಿತಿದ್ದ ಅವರು ರಾಜ್ಯದಲ್ಲಿ ರಾಜಕಾರಣದ ಜೊತೆಗೆ ವೀರಶೈವ ಲಿಂಗಾಯತ ಧರ್ಮ ಸಂಘಟನೆಗೆ ಶಕ್ತಿ ತುಂಬಿದ ಲಿಂ.ಮುದ್ನಾಳರು ಹೊಸ ಕಾಯಕಲ್ಪ ನೀಡಿದ್ದಾರೆಂದರು.

ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಮಾತನಾಡಿ, ಲಿಂ.ಮುದ್ನಾಳ ಅವರು ಬಹುಮುಖ ವ್ಯಕ್ತಿತ್ವ ಹೊಂದಿದ ಶಕ್ತಿಯಾಗಿದ್ದರು, ಅಂದಿನ ಸಮಾಜದಲ್ಲಿ ಜನರನ್ನು ಕಾಡುತ್ತಿರುವ ಸಮಸ್ಯೆ ಹೋಗಲಾಡಿಸಲು ಕೆಲಸ ಮಾಡಿದರು ಎಂದು ಹೇಳಿದರು. ಸಮಾರಂಭದಲ್ಲಿ ವಿವಿಧ ಮಠಾಧೀಶರು ಹಾಗೂ ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

Share this article