ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೈಗಾರಿಕಾ ಕ್ಷೇತ್ರಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ ಎಂದು ಎಸ್.ಎಸ್.ವಾಗೇಶ್ ಹೇಳಿದರು.ಗಂಗೋತ್ರಿ ಪಿಯು ಕಾಲೇಜಿನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ವತಿಯಿಂದ ಆಯೋಜಿಸಿದ್ದ ಇಂಜಿನಿಯರ್ಸ್ ಡೇ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ‍್ಯ ಭಾರತದಲ್ಲಿ ದೇಶ ಏಳಿಗೆಯಾಗಲು ಕೈಗಾರಿಕೆಯು ತುಂಬಾ ಅವಶ್ಯಕ ಎಂದು ತಿಳಿಸಿದರು.
ಮೈಸೂರು ದೀವಾನರಾಗಿದ್ದಾಗ ಶಿವಮೊಗ್ಗದಲ್ಲಿ ಗಂಧದೆಣ್ಣೆ, ಭದ್ರಾವತಿಯಲ್ಲಿ ಕಬ್ಬಿಣ, ಸಿಮೆಂಟ್ ಕಾರ್ಖಾನೆ ಸ್ಥಾಪಿಸಿದರು. ಇದರಿಂದ ಹಲವರಿಗೆ ಕೆಲಸ ದೊರೆತರೆ ಸಮಾಜದ ಬಹಳಷ್ಟು ಜನರ ಪ್ರಗತಿಗೆ ದಾರಿಯಾಯಿತು. ಭಾರತ ಸರ್ಕಾರ ಇವರ ಕಾರ್ಯವೈಖರಿ ಕಂಡು ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಮಹಾನ್ ವ್ಯಕ್ತಿ ಕರ್ನಾಟಕ ದವರು ಎಂಬುದು ಹೆಮ್ಮೆಯ ಸಂಗತಿ ಎಂದರು.ಇದೇ ಸಂದರ್ಭದಲ್ಲಿ ಲಕ್ಷ್ಮೀ ನಾರಾಯಣ್, ಭಾರದ್ವಾಜ್, ರಾಜಶೇಖರ್, ರಮೇಶ್, ವೆಂಕಟೇಶ್, ಸಂಪತ್ ಕುಮಾರ್ ಅವರನ್ನು ಗೌರವಿಸಲಾಯಿತು.
ಸನ್ಮಾನಿತರಾದ ಭಾರದ್ವಾಜ್ ಮಾತನಾಡಿ, ಸಮಯ ಪಾಲನೆಯಲ್ಲಿ ಸರ್ ಎಂ.ವಿ. ಅವರು ಎತ್ತಿದ ಕೈ. ಅವರನ್ನು ಭೇಟಿ ಮಾಡಲು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಾಯ್ ಪಾಟಿಲ್ ಸಮಯ ನಿಗದಿಪಡಿಸಿ, ಕೆಲ ನಿಮಿಷ ತಡವಾಗಿ ಆಗಮಿಸಿದಾಗ ಇವರು ಕಾಯದೆ ತಮ್ಮ ಕರ್ತವ್ಯದ ಮೇಲೆ ಹೋಗಿದ್ದರಿಂದ ಅವರನ್ನು ಮತ್ತೆ ಭೇಟಿ ಮಾಡಲು ಸಾಧ್ಯ ವಾಗಲಿಲ್ಲವಂತೆ. ಎಲ್ಲರೂ ಸಮಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ವಿದ್ಯಾರ್ಥಿಗಳು ಸಮಯ ಪಾಲನೆ ಮಾಡಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ರೂಪಾ ಪುಣ್ಯಕೊಟಿ ಅವರು ಮಾತನಾಡಿ, ನಮ್ಮ ರಾಷ್ಟ್ರದ ಮಹಾನ್ ವ್ಯಕ್ತಿಗಳ ಪರಿಚಯವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಲು ಇಂತಹ ಕಾರ್ಯ ಕ್ರಮ ಅತ್ಯವಶ್ಯಕ. ಹಿರಿಯರ ಮಾತುಗಳು ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತದೆ. ರೊಟರಿ ಜ್ಯೂಬಿಲಿ ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಇಂದು ಪುರಸ್ಕಾರ ಸ್ವೀಕರಿಸಿದ ಎಲ್ಲರೂ ಹಲವಾರು ವಿಧದ ತಾಂತ್ರಿಕ ನಿಪುಣರು. ಇವರನ್ನು ಸನ್ಮಾನಿಸಿ ಉತ್ತಮ ಕಾರ್ಯಗಳಿಗೆ ಗೌರವ ನೀಡುತ್ತಿದ್ದೇವೆ ಎಂದರು.
ಕಾರ್ಯದರ್ಶಿ ಡಾ.ಪ್ರಕೃತಿ ಮಂಚಾಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದರು. ರೇಣುಕಾರಾಧ್ಯ ನಿರೂಪಿಸಿದರು. ಸತ್ಯನಾರಾಯಣ್ ವಂದಿಸಿದರು.