ಕೂಡ್ಲಿಗಿ: ಹಳ್ಳಿಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುವ ಹಾಗೂ ಗ್ರಾಮೀಣ ಬದುಕಿನ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಬಯಲಾಟ ಕಲೆ ಮುಂದಿನ ತಲೆಮಾರಿಗೂ ಉಳಿಸಬೇಕು ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ್ ಸಲಹೆ ನೀಡಿದರು.
ಅವರು ಬಾನುವಾರ ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ಬಯಲಾಟ ಕಲಾವಿದೆಯರನ್ನು ಭೇಟಿಯಾಗಿ ಮಾತನಾಡಿದರು.ರಾಜ್ಯದ ಜನಪದ ಕಲೆಯಾದ ಬಯಲಾಟಗಳು ಪೌರಾಣಿಕ ಕತೆಗಳನ್ನು ಆಧರಿಸಿದ ಪ್ರಸಂಗಗಳನ್ನು ಪ್ರದರ್ಶಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿವೆ. ಇಂಥ ಗಂಡುಕಲೆಯಾದ ಬಯಲಾಟವನ್ನು ಈವರೆಗೆ ಪೋಷಿಸಿಕೊಂಡು ಬಂದಿರುವ ಕಲಾವಿದರಿಗೆ ಸರಿಯಾದ ಮನ್ನಣೆ, ಗೌರವ ಸಿಗಬೇಕಿದೆ. ಸರ್ಕಾರ ನೀಡುವ ಹಿರಿಯ ಕಲಾವಿದರ ಮಾಸಾಶನವೂ ಬಹಳಷ್ಟು ಜನರಿಗೆ ದೊರೆಯುತ್ತಿಲ್ಲ. ಹಿರಿಯ ಕಲಾವಿದರು ಮಾಸಾಶನಕ್ಕೆ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು. ಕೂಡ್ಲಿಗಿ, ವಿರುಪಾಪುರ ಸೇರಿ ನಾನಾ ಕಡೆ ಬಯಲಾಟ ಕಲಾವಿದರು ಹೆಚ್ಚಾಗಿದ್ದು, ಆ ಕಲೆಯನ್ನು ಬೆಳೆಸುವುದು ಸೇರಿ ಈಗಿನ ಯುವ ಪೀಳೆಗೆಗೂ ಬಯಲಾಟ ಕಲೆಯನ್ನು ಕಲಿಸಬೇಕಿದೆ. ಹತ್ತಾರು ಕಲಾವಿದರು ಸೇರಿ ಬಯಲಾಟ ಕಲೆ ತರಬೇತಿ ನೀಡಲು ಅಕಾಡೆಮಿಗೆ ಅರ್ಜಿ ಸಲ್ಲಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಹುಟ್ಟಿರುವ ನಾನು ಬಯಲಾಟಗಳನ್ನು ನೋಡುತ್ತಾ ಬೆಳೆದಿದ್ದು, ಬಯಲಾಟದ ಕಲೆಯನ್ನೇ ಉಸಿರಾಗಿಸಿಕೊಂಡ ಅನೇಕ ಕಲಾವಿದರ ಬದುಕು ಕಷ್ಟದಲ್ಲಿದೆ. ಅದರಲ್ಲೂ ನಾಟಕಗಳಲ್ಲಿ ಅಭಿನಯಿಸುವ ಕಲಾವಿದೆಯರಿಗೆ ಸಮಾಜ ಗೌರವಿಸುವಂತಾಗಬೇಕು. ಕೂಡ್ಲಿಗಿ, ವಿರುಪಾಪುರ, ಮರಿಯಮ್ಮನಹಳ್ಳಿ ಸೇರಿ ರಾಜ್ಯದ ನಾನಾ ಕಡೆ ಇರುವ ಮಹಿಳಾ ಕಲಾವಿದರ ಬದುಕು ಸಂಕಷ್ಟದಲ್ಲಿದೆ. ಬಯಲಾಟದ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ತಮ್ಮ ಜೀವನ ಸವೆಸಿದ ಕಲಾವಿದರಿಗೆ ಅಕಾಡೆಮಿಯಿಂದ ಮಾಸಾಶನ ಕೊಡಿಸಲಾಗುವುದು ಎಂದು ದುರ್ಗಾ ದಾಸ್ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ವಿರುಪಾಪುರ ಅಂಜಿನಮ್ಮ, ಹಂಪಮ್ಮ, ಗಂಗಮ್ಮ, ನಾಗಮ್ಮ, ವಿಜಯಲಕ್ಷ್ಮಿ, ಭಾಗ್ಯಮ್ಮ, ನಾಗರತ್ನಮ್ಮ, ಕಾಂಚನಾ ಇದ್ದರು.ಕೂಡ್ಲಿಗಿ ತಾಲೂಕಿನ ವಿರುಪಾಪುರದಲ್ಲಿ ಬಯಲಾಟ ಸೇರಿ ನಾಟಕ ಕಲಾವಿದೆಯರನ್ನು ಭಾನುವಾರ ಭೇಟಿಯಾದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ್ ಅವರ ಕಷ್ಟ ಸುಖ ವಿಚಾರಿಸಿದರು.