ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯ ರೈತ ಸಂಘಟನೆಗಳ ಒಕ್ಕೂಟ , ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಮಂಗಳವಾರ ಕಾಡಾ ಕಚೇರಿಗೆ ಭೇಟಿ ನೀಡಿ ರೈತರ ಕುಂದು ಕೊರತೆ ಬಗ್ಗೆ ಹರಿಸಲು ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ ಅವರಿಗೆ ಒತ್ತಾಯ ಪತ್ರ ನೀಡಿದರು.ತಾಲೂಕು ಮಟ್ಟದಲ್ಲಿ ರೈತರಿಗೆ, ಮಣ್ಣು ಪರೀಕ್ಷೆ, ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಹಾಗೂ ನೀರು ಬಳಕೆ ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ ನಡೆಸುವಂತೆ ಆಗ್ರಹಿಸಿದರು.ರೈತರಿಗೆ ಆಧುನಿಕ ಕೃಷಿ ಮಾಡುವ ಬಗ್ಗೆ ಮಾಹಿತಿ ಕೊರತೆಯಿದ್ದು, ಕಡಿಮೆ ಖರ್ಚು ಮಾಡಿ ಅಧಿಕ ಇಳುವರಿ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಗಾರ ನಡೆಸಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಹಾಗೂ ಸ್ವಕ್ಷೇತ್ರವಾದ್ದರಿಂದ ಮೊದಲಿಗೆ ಮೈಸೂರಿನಲ್ಲಿ ತಾಲೂಕು ಮಟ್ಟದ ಕಾರ್ಯಾಗಾರ ಪ್ರಾರಂಭ ಮಾಡಿದರೆ ಸರ್ಕಾರದ ಗಮನ ಸೆಳೆಯಬಹುದು ಎಂದರು.ಕೃಷಿ ಪರಿಕರಗಳಾದ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಹಾಗೂ ನೀರು ಅತಿಯಾದ ಬಳಕೆಯಿಂದ ಮಣ್ಣು ಸತ್ವ ಕಳೆದುಕೊಂಡಿದ್ದು ಮಣ್ಣಿನ ಆರೋಗ್ಯ ರಕ್ಷಣೆ ಮಾಡಿ ಉತ್ತಮ ಬೆಳೆ ಬೆಳೆಯಲು ಜಾಗೃತಿಗೊಳಿಸಬೇಕು. ನಕಲಿ- ಕಳಪೆ ಬಿತ್ತನೆ ಬೀಜ, ರಸಗೊಬ್ಬರ, ನರ್ಸರಿ ಸಸಿಗಳು ಕೀಟ ನಾಶಕ ಮಾರಾಟ ಮಾಡುವವರಿಗೆ ಜಾಮೀನು ರಹಿತ ಕಠಿಣ ಜೈಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು, ಟ್ರ್ಯಾಲಕ್ಟರ್, ಪವರ್ ಟಿಲ್ಲರ್ ಬಿಡಿಭಾಗಗಳ ಬೆಲೆಗಳು ಗಗನಕ್ಕೇರಿದ್ದು ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು. .ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೂ ಬೆಳೆ ವಿಮೆ ಪರಿಹಾರ ಸಿಗುವಂತಾಗಬೇಕು, ಟ್ರ್ಯಾಜಕ್ಟರ್, ಪವರ್ ಟಿಲ್ಲರ್ ಕೃಷಿ ಯಂತ್ರಗಳ ಮಾರಾಟ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿದ ದರವನ್ನು ಬಹಿರಂಗವಾಗಿ ನಾಮಫಲಕ ಹಾಕಬೇಕು, ರಸ ಗೊಬ್ಬರಗಳ ಜೊತೆ ಮೈಕ್ರೋ ಫುಡ್ ಲಿಂಕ್ ಮಾರಾಟಕ್ಕೆ ಒತ್ತಡ ಹೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರತಿ 3 ತಿಂಗಳಿಗೊಮ್ಮೆ ರೈತರ ಕುಂದು ಕೊರತೆಗಳ ಸಭೆ ನಡೆಸಿ ಸಮಸ್ಯೆಗೆಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ರೈತರ ಕುಂದು ಕೊರತೆಗಳ ಸಭೆ ನಡೆಸಿ ರೈತರು ಅಲೆದಾಡುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ಮಂಜುಳಾ, ಬನ್ನೂರು ಸೂರಿ, ವಾಜಮಂಗಳ ಮಹದೇವು, ಕೆಂಡಗಣ್ಣಪ್ಪ ಸ್ವಾಮಿ, ಪ್ರಭುಸ್ವಾಮಿ, ಕಾಟೂರು ನಾಗೇಶ್, ಗಿರೀಶ್, ಸಾತಗಳ್ಳಿ ಬಸವರಾಜ್, ಸಾತಗಳ್ಳಿ ಮಹೇಶ್, ಮಾರ್ಬಳ್ಳಿ ಬಸವರಾಜ್, ಶಿವಣ್ಣ, ಪಿ. ನಾಗೇಂದ್ರ, ಜಯರಾಮ ವರಕೋಡು, ಶಿವಕುಮಾರ್, ಪ್ರಕಾಶ್, ಎನ್. ನಾಗೇಂದ್ರ, ಪ್ರಭಾಕರ್, ಮೂರ್ತಿ ಮೊದಲಾದವರು ಇದ್ದರು.