ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಜಿಲ್ಲಾ ಘಟಕದ ವತಿಯಿಂದ ನಗರದ ಗನ್ ಹೌಸ್ ಬಳಿಯ ವಿಶ್ವಮಾನವ ಉದ್ಯಾನವನದಲ್ಲಿ ರೈತರ ಕುಂದು ಕೊರತೆಗಳ ಸಭೆ ನಡೆಸಿ, ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಅವರಿಗೆ ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯ ಪತ್ರ ಸಲ್ಲಿಸಿದರು.ಮುಂಗಾರು ಮಳೆ ಪ್ರಾರಂಭವಾಗಿದ್ದು, ಕೃಷಿ ಚಟುವಟಿಕೆಗೆ ರೈತರು ಸಜ್ಜಾಗುತ್ತಿದ್ದು, ತುರ್ತಾಗಿ ಹಸಿರೆಲೆ ಗೊಬ್ಬರಕ್ಕಾಗಿ ಬಿತ್ತನೆ ಬೀಜಗಳಾದ ಚಂಬೆ, ಹೆಸರು, ಉದ್ದು, ಹಲಸಂದೆ, ಹುರುಳಿ ಹಾಗೂ ಮುಸುಕಿನ ಜೋಳ ಮುಂತಾದ ಬಿತ್ತನೆ ಬೀಜಗಳು ತುಂಬಾ ಅವಶ್ಯಕತೆ ಇದ್ದು, ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಉಚಿತವಾಗಿ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ತುರ್ತಾಗಿ ಸಿಗುವಂತೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಗೃಹ ಬಳಕೆ ವಿದ್ಯುತ್ ಪೂರೈಕೆ ಯೋಜನೆಯನ್ನು ಹೊಸದಾಗಿ ರೂಪಿಸಲು ಹೊರಟಿರುವ ಕರೆನ್ಸಿ ರೂಪದ ವಿದ್ಯುತ್ ಪೂರೈಕೆ ಕೈಬಿಡಬೇಕು. ಕೃಷಿ ಪಂಪ್ ಸೆಟ್ ರೈತರಿಗೆ ಟಿಸಿ ಅಳವಡಿಸಲು ಹಿಂದಿನಂತೆ ಅಕ್ರಮ- ಸಕ್ರಮ ಯೋಜನೆ ಮುಂದುವರಿಸಿ, ಹಗಲು ವೇಳೆ ನಿರಂತರ ಬೆಳಗ್ಗೆ 6 ರಿಂದ ಸಂಜೆ 6 ರವರಗೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಹೈನುಗಾರಿಕೆ ರೈತರಿಗೆ ಪ್ರೋತ್ಸಾಹ ಧನ ಲೀಟರ್ 5 ರೂ. ಬಾಕಿ ಉಳಿಸಿಕೊಂಡಿರುವುದನ್ನು ಕೂಡಲೇ ಕೊಡಿಸಿಬೇಕು. ಅಲ್ಲದೆ ಹೆಚ್ಚುವರಿಯಾಗಿ ಲೀಟರ್ 10 ರೂ. ಏರಿಕೆ ಮಾಡಿ ಹಾಲು ಉತ್ಪಾದಕ ರೈತರ ರಕ್ಷಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ರೈತರ ವಿವಿಧ ಬೇಡಿಕೆಗಳನ್ನು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಈ ವೇಳೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ರಾಜ್ಯ ಖಂಜಾಜಿ ಎಂ.ಬಿ. ಚೇತನ್, ಪದಾಧಿಕಾರಿಗಳಾದ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಪರಶಿವಮೂರ್ತಿ, ಕುರುಬೂರು ಸಿದ್ದೇಶ, ಲಕ್ಷ್ಮೀಪುರ ವೆಂಕಟೇಶ್, ದೇವನೂರು ವಿಜೇಂದ್ರ, ಕೋಟೆ ಸುನಿಲ್, ಮಹದೇವಸ್ವಾಮಿ, ಯೋಗೇಶ್, ವರಕೋಡು ನಾಗೇಶ್, ಕುರುಬೂರು ಪ್ರದೀಪ್, ಕಿರಗಸೂರು ಪ್ರಸಾದ್ ನಾಯಕ, ನಿಂಗರಾಜು, ಕೆ. ಉಮೇಶ್, ಮಹಾದೇವ, ನಾಗೇಂದ್ರ, ನಾಗೇಶ್, ಮಹದೇವಸ್ವಾಮಿ, ಶ್ರೀಕಂಠ, ಮಹೇಶ್, ಮಹಾಲಿಂಗನಾಯಕ, ಮಹೇಶ, ಪ್ರಕಾಶ, ರಾಮಮೂರ್ತಿ, ಮಂಜುನಾಥ್, ಗಿರೀಶ್, ಹೆಗ್ಗೂರು ರಂಗರಾಜು, ಕೆಂಪೇಗೌಡ, ರಾಮಮೂರ್ತಿ, ನಾಗೇಂದ್ರ. ಮಂಟೆಸ್ವಾಮಿ ಮೊದಲಾದವರು ಇದ್ದರು.