ಚಿಕ್ಕಮಗಳೂರಿನ ಬೀಕನಹಳ್ಳಿ ಹಾಗೂ ಮಲ್ಲೇನಹಳ್ಳಿಯಲ್ಲಿ ಮೂರಾರ್ಜಿ ವಸತಿ ಶಾಲೆಗಳಿಗೆ ಭೇಟಿ
ಪ್ರತಿ ಎರಡು ತಿಂಗಳಿಗೊಮ್ಮೆ ವಸತಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಮೂಲಸೌಕರ್ಯ ಪರಿಶೀಲಿಸುತ್ತೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದ್ದಾರೆ.
ಶುಕ್ರವಾರ ಚಿಕ್ಕಮಗಳೂರಿನ ಬೀಕನಹಳ್ಳಿ ಹಾಗೂ ಮಲ್ಲೇನಹಳ್ಳಿಯಲ್ಲಿ ಮೂರಾರ್ಜಿ ವಸತಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ವಸತಿ ಶಾಲೆಯ ಊಟ ಹಾಗೂ ಇತರೆ ಮೂಲಸೌಕರ್ಯದ ಬಗ್ಗೆ ಯಾರು ದೂರು ಹೇಳಲಿಲ್ಲ. ಮುರಾರ್ಜಿ ದೇಸಾಯಿ ವಸತಿ ಶಾಲೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೆ. ಊಟದ ಸಮಸ್ಯೆ ಇದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎರಡು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಜತೆಗೆ ಮಕ್ಕಳೊಂದಿಗೆ ಸಂವಾದ ಮಾಡಿದ್ದೇನೆ ಎಂದು ತಿಳಿಸಿದರು.ಹಾಸ್ಟೆಲ್ ನಲ್ಲಿ ಒಂದಿಷ್ಟು ಲೋಪ - ದೋಷ ಕಂಡು ಬಂದಿವೆ. ಉತ್ತಮ ವ್ಯವಸ್ಥೆ ಇರುವುದು ಸಹ ಇದೆ. ಬೀಕನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಬೇಸಿಗೆ ಕಾಲದಲ್ಲಿ ಉತ್ತಮ ರೀತಿಯಲ್ಲಿ ಬಿಸಿ ನೀರು ಬರುತ್ತದೆ. ಮಳೆಗಾಲದಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ವಸತಿ ಶಾಲೆಗಳಲ್ಲಿ ಬಿಸಿ ನೀರು, ನಿರಂತರ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ನಾನೂ ಸಹ ಸಾಮಾನ್ಯ ವರ್ಗದಿಂದ ಬಂದಿದ್ದೇನೆ. ಮಕ್ಕಳ ಕಷ್ಟ ನನಗೂ ಅರ್ಥವಾಗುತ್ತದೆ. ಯಾವುದೇ ಮೂಲ ಸೌಕರ್ಯ ಕೊರತೆ ಆಗದ ರೀತಿಯಲ್ಲಿ ರಾಜ್ಯ ಸರ್ಕಾರ ನೋಡುತ್ತಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜವಾಬ್ದಾರಿ ಇರುತ್ತದೆ ಅವರನ್ನು ಎಚ್ಚರಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಮಲ್ಲೇನಹಳ್ಳಿ ಮೂರಾರ್ಜಿ ವಸತಿ ಶಾಲೆಗೆ ಶುಕ್ರವಾರ ಭೇಟಿ ನೀಡಿದ ವೇಳೆ ಶಾಸಕ ಎಚ್.ಡಿ. ತಮ್ಮಯ್ಯ ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಊಟ ಸವಿದರು.