ಇಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಚುನಾವಣೆ

KannadaprabhaNewsNetwork | Published : May 25, 2025 2:41 AM
ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಸಂಘ(ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್)ದ ೩ ವರ್ಷಗಳ ಅವಧಿಗೆ ಮೇ.೨೫ರ ಭಾನುವಾರ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೂ ನ್ಯೂಟೌನ್ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ (ಜೆಟಿಎಸ್)ಯಲ್ಲಿ ಮತದಾನ ನಡೆಯಲಿದೆ.
Follow Us

ಕನ್ನಡಪ್ರಭ ವಾರ್ತೆ ಭದ್ರಾವತಿ

ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಸಂಘ(ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್)ದ ೩ ವರ್ಷಗಳ ಅವಧಿಗೆ ಮೇ.೨೫ರ ಭಾನುವಾರ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೂ ನ್ಯೂಟೌನ್ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ (ಜೆಟಿಎಸ್)ಯಲ್ಲಿ ಮತದಾನ ನಡೆಯಲಿದೆ.

ಸುಮಾರು ೩೦ ತಿಂಗಳಿನಿಂದ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಹಿಂಪಡೆಯುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ, ಗುತ್ತಿಗೆ ಕಾರ್ಮಿಕರಿಗೆ ಪೂರ್ಣಾವಧಿ ಉದ್ಯೋಗ ಕಲ್ಪಿಸಿಕೊಡುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಖಾನೆ ಮುಂಭಾಗದಲ್ಲಿ ನಿರಂತರವಾಗಿ ಹೋರಾಟದಲ್ಲಿ ತೊಡಗಿರುವ ಗುತ್ತಿಗೆ ಕಾರ್ಮಿಕರು ಇದೀಗ ತಮ್ಮ ಹೊಸ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಒಟ್ಟು ಕಾರ್ಖಾನೆಯಲ್ಲಿ ೧೩೦೦ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರಿದ್ದು, ಈ ಪೈಕಿ ಸಂಘದಲ್ಲಿ ೧೦೪೪ ಮಂದಿ ಸದಸ್ಯರಿದ್ದಾರೆ. ಉಳಿದಂತೆ ಗುತ್ತಿಗೆ ಕಾರ್ಮಿಕರು ಎಐಟಿಯುಸಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ತಮ್ಮ ೩ ವರ್ಷಗಳ ಅಧಿಕಾರಾವಧಿಯಲ್ಲಿ ಬಹುತೇಕ ಅವಧಿ ಹೋರಾಟದಲ್ಲಿಯೇ ಕಳೆದಿದ್ದಾರೆ. ಆದರೆ ಕಾರ್ಖಾನೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಆಡಳಿತ ನಡೆಸುತ್ತಿರುವ ಸರ್ಕಾರಗಳಿಂದ ಕೇವಲ ಭರವಸೆಗಳ ಮಹಾಪೂರವೇ ಹರಿದು ಬಂದಿದೆ ಹೊರತು ಯಾವುದೇ ಭರವಸೆ ಇದುವರೆಗೂ ಈಡೇರಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಪುನಃ ಹೊಸ ನಾಯಕರ ಆಯ್ಕೆಯಲ್ಲಿ ಗುತ್ತಿಗೆ ಕಾರ್ಮಿಕರು ತೊಡಗಿಸಿಕೊಂಡಿರುವುದು ಕ್ಷೇತ್ರದಲ್ಲಿ ಇದೀಗ ಗಮನ ಸೆಳೆಯುತ್ತಿದೆ.

ಈ ನಡುವೆ ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿಯವರು ಶುಕ್ರವಾರ ಕಾರ್ಖಾನೆಯನ್ನು ಮರುನಿರ್ಮಾಣಗೊಳಿಸುವ ಕುರಿತು ಹೇಳಿಕೆ ನೀಡಿರುವುದು ಗುತ್ತಿಗೆ ಕಾರ್ಮಿಕರಲ್ಲೂ ಹೊಸ ಸಂಚಲನ ಮೂಡಿಸಿದೆ. ನೂತನ ನಾಯಕರ ಆಯ್ಕೆ ನಂತರ ಹೋರಾಟ ಮುಂದುವರೆಯುವುದೇ ಅಥವಾ ಸ್ಥಗಿತಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಮೇ.೨೫ರಂದು ಮತದಾನ ನಂತರ ಮತ ಎಣಿಕೆ ನಡೆಯಲಿದೆ. ಸಹಪ್ರಾಧ್ಯಾಪಕ ಡಾ. ಎಸ್. ಸುಮಂತ್ ಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.