ಜೀವನೋತ್ಸಾಹ ಶಿಬಿರ ಜೀವನಕ್ಕೆ ಹೊಸ ಹುರುಪು

KannadaprabhaNewsNetwork | Published : May 24, 2025 12:23 AM
ಸುಂದರ ಪ್ರಕೃತಿಯ ಮಡಿಲಿನಲ್ಲಿ ಏರ್ಪಡಿಸಿರುವ ಜೀವನೋತ್ಸಾಹ ಶಿಬಿರ ಜೀವನಕ್ಕೆ ಹೊಸ ಹುರುಪು ನೀಡುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಹೇಳಿದರು.
Follow Us

ಕನ್ನಡಪ್ರಭ ವಾರ್ತೆ ಮೈಸೂರು

ಸುಂದರ ಪ್ರಕೃತಿಯ ಮಡಿಲಿನಲ್ಲಿ ಏರ್ಪಡಿಸಿರುವ ಜೀವನೋತ್ಸಾಹ ಶಿಬಿರ ಜೀವನಕ್ಕೆ ಹೊಸ ಹುರುಪು ನೀಡುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಹೇಳಿದರು.

ಬಿಳಿಗಿರಿರಂಗನ ಬೆಟ್ಟದಲ್ಲಿ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿರುವ ಜೀವನೋತ್ಸಾಹ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬದುಕಿನ ಉತ್ಸಾಹವನ್ನು ಹೆಚ್ಚಿಸುವ ಶಿಬಿರ ಇದಾಗಿದೆ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಛಲದಿಂದ ಎದುರಿಸಬೇಕು. ಎಲ್ಲ ಕಷ್ಟ-ನಷ್ಟ ಮತ್ತು ಸಮಸ್ಯೆಗಳಿಗೆ ಗೂಗಲ್‌ ನಲ್ಲಿ ಉತ್ತರ ಲಭಿಸುವುದಿಲ್ಲ. ಹಳ್ಳಿಯ ಆಹಾರ ಪದ್ಧತಿಯು ಆರೋಗ್ಯಕರವಾಗಿರುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಹಿರಿಯರನ್ನು, ತಂದೆ-ತಾಯಿಗಳನ್ನು ಶ್ರದ್ಧಾಭಕ್ತಿ ಮತ್ತು ಗೌರವಗಳಿಂದ ಕಾಣಬೇಕು ಎಂದು ಅವರು ಹೇಳಿದರು.

ಚಾಮರಾಜನಗರ ಎಸ್ಪಿ ಡಾ.ಬಿ.ಟಿ. ಕವಿತಾ ಮಾತನಾಡಿ, ಭಗವಂತನು ನೀಡಿದ ಈ ಜೀವನ ಸುಂದರವಾಗಿದೆ. ಇಂತಹ ಜೀವನವನ್ನು ಇನ್ನಷ್ಟು ಸುಂದರವಾಗಿಸಿಕೊಳ್ಳಲು ಇಂತಹ ಶಿಬಿರಗಳ ಅವಶ್ಯಕತೆಯಿದೆ ಎಂದರು. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಬಿ. ಪ್ರಭುದೇವ್‌ ಮಾತನಾಡಿ, ಶ್ರೀಗಳರ ಆಶೀರ್ವಾದದಿಂದ ನಾನು ಉನ್ನತ ಮಟ್ಟಕ್ಕೆ ಬೆಳೆದು, ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದರು.

ಚಲನಚಿತ್ರ ಕಲಾವಿದ, ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಭಾರತ ಸುಂದರವಾದ ದೇಶವಾಗಿದೆ. ಇಲ್ಲಿ ಬದುಕಬೇಕಾದರೆ ಹೊಂದಾಣಿಕೆ ಅನಿವಾರ್ಯ, ಕೌಟುಂಬಿಕ ಹೊಂದಾಣಿಕೆ ಮತ್ತು ಸಾರ್ವಜನಿಕ ಹೊಂದಾಣಿಕೆ ಬಹಳ ಮುಖ್ಯ. ಯಾರು ಜೀವನದಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಾರೋ ಅವರು ಸಂತೋಷವಾಗಿರುತ್ತಾರೆ ಎಂದರು. ಜೆಎಸ್‌ಎಸ್ ಕಾನೂನು ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಪ್ರೊ.ಕೆ.ಎಸ್. ಸುರೇಶ್‌, ಬಾಲಭವನದ ಅಧ್ಯಕ್ಷ ಬಿ.ಆರ್.ನಾಯ್ಡು ಮಾತನಾಡಿದರು.

ಶಿಬಿರದಲ್ಲಿ ಮೈಸೂರು, ಕೊಡಗು, ವಿಜಯಪುರ, ಚಿಕ್ಕಬಳ್ಳಾಪುರ, ಬೆಳಗಾವಿ ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.