ಕನ್ನಡಪ್ರಭವಾರ್ತೆ ಪುತ್ತೂರು
ಸುಮಾರು ೮೦೦ ವರ್ಷಗಳ ಐತಿಹ್ಯ ಇರುವ ಕೇಪು ಉಳ್ಳಾಲ್ತಿ ಅಮ್ಮನವರ ಜಾತ್ರೋತ್ಸವದ ಬಳಿಕ ಪ್ರತೀ ವರ್ಷ ಮೂರು ದಿನ ಜೂಜು ರಹಿತ ಕೋಳಿ ಅಂಕ ನಡೆಯುತ್ತದೆ. ಧಾರ್ಮಿಕ ಹಿನ್ನೆಲೆಯಲ್ಲಿ ನಡೆಯುವ ಕೋಳಿ ಅಂಕಕ್ಕೆ ಜಿಲ್ಲಾ ಪೊಲೀಸ್ ತಡೆ ಮಾಡಿ ಕೋಳಿ ಅಂಕ ನಡೆಸದಂತೆ ಸೂಚನೆಯನ್ನು ನೀಡಿತ್ತು. ಧಾರ್ಮಿಕ ಹಿನ್ನೆಲೆಯಿರುವ ಕಾರಣ ಶಾಸಕ ಅಶೋಕ್ ರೈ ಅವರು ಖುದ್ದಾಗಿ ಸ್ಥಳದಲ್ಲಿ ನಿಂತು ಕೋಳಿ ಅಂಕ ಮಾಡಿಸಿದ್ದರು. ಪ್ರಕರಣಕ್ಕೆ ಸಂಭಂದಿಸಿದಂತೆ ಶಾಸಕ ಅಶೋಕ್ ರೈ ಹಾಗೂ ಅಂಕದಲ್ಲಿ ಭಾಗವಹಿಸಿದ ಸುಮಾರು ೨೦ ಮಂದಿಯ ವಿರುದ್ದ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟಿನಲ್ಲಿ ಶಾಸಕರು ದಾವೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟು ಶಾಸಕ ಅಶೋಕ್ ರೈ ವಿರುದ್ದ ಬಲವಂತದ ಕ್ರಮ ಕೈಗೊಳ್ಳದಂತೆ ಕೆಲದಿನಗಳ ಹಿಂದೆ ಆದೇಶವನ್ನು ಮಾಡಿತ್ತು. ಇಂದು ಇದೇ ಪ್ರಕರಣಕ್ಕೆ ತಡೆಯಾಜ್ಞೆಯನ್ನು ನೀಡಿದೆ. ಶಾಸಕರ ಹಾಗೂ ತಂಡದ ಪರವಾಗಿ ನ್ಯಾಯವಾದಿ ಅರುಣ್ ಶ್ಯಾಂ ಹಾಗೂ ಸುಯೋಗ್ ವಾದ ಮಂಡಿಸಿದ್ದರು.