ಹಾವೇರಿ: ಸ್ವಾಮಿ ವಿವೇಕಾನಂದರ ಬದುಕು ದೇಶದ ಭವಿಷ್ಯದ ಯುವ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣಾಶಕ್ತಿಯಾಗಿದೆ ಎಂದು ಶಿಕ್ಷಣಪ್ರೇಮಿ ಎಂ.ಕೆ. ಪಾಟೀಲ ಹೇಳಿದರು.
ಸಂಪನ್ಮೂಲ ವ್ಯಕಿಗಳು ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಸದಸ್ಯರಾದ ಹನಮಂತಪ್ಪ ಗೊಲ್ಲರ ಮಾತನಾಡಿ, ಪ್ರಚಂಡ ಇಚ್ಛಾಶಕ್ತಿ, ತಮ್ಮ ಚಾಣಾಕ್ಷತನ, ಪ್ರಖರ ವಾಗ್ಮಿತನದ ಮೂಲಕ ವಿಶ್ವದಲ್ಲಿ ತಮ್ಮದೆ ಆದ ಚಾಪು ಮೂಡಿಸಿದವರು ಸ್ವಾಮಿ ವಿವೇಕಾನಂದರು. ಅವರ ಬದುಕು ವಿದ್ಯಾರ್ಥಿಗಳಿಗೆ ಹಾಗೂ ಯುವ ಜನರಿಗೆ ಮಾದರಿಯಾಗಿದೆ. ಅವರ ಜೀವನ ಸಂದೇಶವನ್ನು ನಾವೆಲ್ಲರೂ ಅಳವಡಿಸಿಕೊಂಡು ಉಜ್ವಲ ಭಾರತಕ್ಕೆ ನಾವು ಕೊಡುಗೆ ನೀಡುವಂತವರಾಗಬೇಕು ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಗೌರವ ಕಾಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರ ಸಂದೇಶ ಪಾಲನೆ ಮಾಡುವಂತೆ ಕೋರಿದರು.ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಪ್ರಾಚಾರ್ಯ ರವಿಕುಮಾರ ಪೂಜಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಹಾಗೂ ಯುವಜನರ ನಿಜವಾದ ಬದುಕಿನ ಹೀರೋಗಳು. ನಮಗೆ ಉತ್ತಮ ಮಾರ್ಗದರ್ಶನ ಹಾಗೂ ಬದುಕಿಗೆ ಪ್ರೇರಣೆ ನೀಡಿದವರು. ಸ್ವಾಮಿ ವಿವೇಕಾನಂದರ ಜೀವನದ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಅವರ ಸಂದೇಶ-ಆದರ್ಶಗಳನ್ನು ಅಳವಡಿಸಿಕೊಂಡರೆ ತಮ್ಮ ಗುರಿ ಸಾಧನೆಗೆ ಸಹಕಾರಿಯಾಗಲಿದೆ ಎಂದರು.
ವಿದ್ಯಾರ್ಥಿನಿ ಸಂಗೀತಾ ಶ್ಯಾಕಾಪುರ ಪ್ರಾರ್ಥಿಸಿದರು. ಚನ್ನಮ್ಮ ಬೂದಿಹಾಳ ಸ್ವಾಗತಿಸಿದರು. ರಕ್ಷಿತಾ ನಾಗಜ್ಜೆನವರ ಕಾರ್ಯಕ್ರಮ ನಿರೂಪಿಸಿದರು. ಭೂಮಿಕಾ ಎಸ್. ವಂದಿಸಿದರು.