ಶಿರಸಿ: ಇಲ್ಲಿನ ವಿವೇಕಾನಂದ ನಗರದ ಮೈದಾನವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ವಾಯುವಿಹಾರಕ್ಕೆ ತೆರಳಲು ಅಲ್ಲಿನ ನಿವಾಸಿಗಳು ಭಯಪಡುವಂತಾಗಿದೆ. ಸಂಜೆ ವೇಳೆ ಪೊಲೀಸರು ಗಸ್ತು ತಿರುಗಿ ಇದಕ್ಕೆ ಕಡಿವಾಣ ಹಾಕಬೇಕಾಗಿದೆ.
ಸ್ಥಳೀಯರಿಗೆ ವಿವಿಧ ಕಾರ್ಯಕ್ರಮ ಆಯೋಜಿಸಲು ಅನುಕೂಲವಾಗಲೆಂದು ಜಿಲ್ಲಾ ಪಂಚಾಯಿತಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ₹೩ ಲಕ್ಷ ವೆಚ್ಚದಲ್ಲಿ ಸಭಾಭವನ ನಿರ್ಮಾಣ ಮಾಡಲಾಗಿದೆ. ಇದು ಈಗ ಮದ್ಯವ್ಯಸನಿಗಳ ನೆಚ್ಚಿನ ತಾಣವಾಗಿದೆ. ಬೇಸಿಗೆ ಸಮಯದಲ್ಲಿ ಮೈದಾನದ ಸುತ್ತಲೂ ಕುಳಿತುಕೊಂಡು ಮದ್ಯ ಸೇವನೆ ಮಾಡುತ್ತಿದ್ದರು. ಈಗ ಮಳೆಗಾಲವಾದದ್ದರಿಂದ ಸಭಾಭವನದ ಒಳಗಡೆ ಕುಳಿತು ಮದ್ಯ ಸೇವಿಸಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಬೀಸಾಡಿ ಸುತ್ತಲಿನ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಸಂಜೆ ವೇಳೆ ಗುಂಪು, ಗುಂಪಾಗಿ ಆಗಮಿಸುವ ಯುವಕರ ತಂಡವು ತಡರಾತ್ರಿಯವರೆಗೆ ಮೋಜು- ಮಸ್ತಿಯಲ್ಲಿ ನಿರತರಾಗಿರುತ್ತಾರೆ. ಇದಕ್ಕೆ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಕೇವಲ ಮದ್ಯವೊಂದೇ ಅಲ್ಲದೇ, ಗಾಂಜಾ, ಸಿಗರೇಟ್ ಇನ್ನಿತರ ಅಮಲು ಪದಾರ್ಥಗಳನ್ನು ಸೇವಿಸಿ, ಅಮಲಿನಲ್ಲಿರುವ ವ್ಯಸನಿಗಳು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ.ಇದು ವಾಯುವಿಹಾರಕ್ಕೆ ಮೀಸಲಿಟ್ಟ ಪ್ರದೇಶ, ಇಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಸ್ಪದವಿಲ್ಲ ಎಂದು ಎಚ್ಚರಿಕೆ ನೀಡಲು ಮುಂದಾದರೆ, ಹಲ್ಲೆಗೆ ಯತ್ನಿಸುತ್ತಾರೆ. ಬಾಟಲಿಗಳನ್ನು ಒಡೆದು ಮೈದಾನದ ಸುತ್ತಲು ಬೀಸಾಕುವುದರಿಂದ ವೃದ್ಧರು, ಮಹಿಳೆಯರು, ಚಿಕ್ಕಮಕ್ಕಳು ವಾಯುವಿಹಾರಕ್ಕೆ ತೆರಳಲು ಹಿಂದೇಟು ಹಾಕುವಂತಾಗಿದೆ. ಕೆಲಸಮಯ ಹಗಲಿನ ವೇಳೆಯಲ್ಲಿಯೂ ಮದ್ಯ ಸೇವನೆ ಮಾಡುತ್ತಿರುತ್ತಾರೆ. ಮೈದಾನದ ಪಕ್ಕದಲ್ಲಿಯೇ ಕೆಎಚ್‌ಬಿ ಕಾಲನಿಯ ಮಾದರಿ ಸರ್ಕಾರಿ ಹಿರಿಯ ಪ್ರಾಥಮಕ ಶಾಲೆಯಿದ್ದು, ಇದು ಆದರ್ಶ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂತಹ ಜಾಗವು ವ್ಯಸನಿಗಳ ತಾಣವಾಗಿರುವುದು ಬೇಸರ ಎನ್ನುತ್ತಾರೆ ಸ್ಥಳೀಯ ನಿವಾಸಿಯೊಬ್ಬರು.
ರಾರಾಜಿಸುವ ಮದ್ಯದ ಬಾಟಲಿಗಳು...ಮಳೆಗಾಲದಲ್ಲಿ ವ್ಯಸನಿಗಳು ಬೆಟ್ಟದ ಮರೆ ಪ್ರದೇಶದಲ್ಲಿ ಕುಳಿತು ಮದ್ಯ ಸೇವಿಸಲು ಸಾಧ್ಯವಾಗದ ಹಿನ್ನೆಲೆ ಸಭಾಭವನ, ಬಸ್ ತಂಗುದಾಣವನ್ನು ನೆಚ್ಚಿನ ತಾಣವನ್ನಾಗಿ ಮಾಡಿಕೊಳ್ಳುತ್ತಾರೆ. ಕೆಲವು ತಂಗುದಾಣಗಳಲ್ಲಿ ಹೆಂಡದ ಬಾಟಲಿಗಳೇ ರಾರಾಜಿಸುತ್ತವೆ. ಬಸ್‌ಗಾಗಿ ಕಾಯುವ ಪ್ರಯಾಣಿಕರು ತಂಗುದಾಣದ ಒಳಗಡೆ ಕುಳಿತುಕೊಳ್ಳಲು ಹೇಸಿಗೆಯಾಗಿ ಮಳೆಯಲ್ಲಿಯೇ ನಿಂತುಕೊಳ್ಳುವ ಸ್ಥಿತಿ ಕೆಲ ಕಡೆಗಳಲ್ಲಿ ಕಂಡುಬರುತ್ತಿದೆ. ಇಂತಹ ಅವ್ಯವಸ್ಥೆಗೆ ಸ್ಥಳೀಯ ಗ್ರಾಪಂ ಕಡಿವಾಣ ಹಾಕಲು ಮುಂದಾಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.