ಕುಶಾಲನಗರ: ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ –ಕರ್ನಾಟಕದ ರಾಜ್ಯ ನಿರ್ದೇಶನಾಲಯದ ನಿರ್ದೇಶನದಂತೆ ರಾಜ್ಯದ 34 ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಗಳಲ್ಲಿ ಜಿಲ್ಲಾ ವೃತ್ತಿಪರ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಪದ ನಿಮಿತ್ತ ಉಪ ನಿರ್ದೇಶಕರು (ಅಭಿವೃದ್ದಿ) ರಾಮಚಂದ್ರ ರಾಜೇ ಅರಸ್ ಹೇಳಿದರು.
ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಹಾಗೂ ವೃತ್ತಿ ಆಯ್ಕೆ ಕುರಿತು ಸಮಗ್ರ ಮಾಹಿತಿ ಒದಗಿಸುವ ಉದ್ದೇಶದಿಂದ ಕೂಡಿಗೆ ಜಿಲ್ಲಾ ಮತ್ತು ತರಬೇತಿ ಸಂಸ್ಥೆ (ಡಯಟ್) ಜಿಲ್ಲಾ ಮಟ್ಟದ ವೃತ್ತಿ ದಿಕ್ಸೂಚಿ, ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ವೃತ್ತಿ ಮಾರ್ಗದರ್ಶನ ಮೇಳ-2026 ಮಾ.27ರಂದು ಬೆಳಿಗ್ಗೆ 10ಕ್ಕೆ ಗಂಟೆಯಿಂದ ಸಂಜೆ 5ರವರೆಗೆ ಏರ್ಪಡಿಸಲಾಗಿದೆ.
ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಿಂದ ನೀಡಿರುವ ಸುತ್ತೋಲೆ ಅನ್ವಯ ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕ ಸ್ಥಾಪಿಸಲಾಗುತ್ತಿದ್ದು, ಈ ಘಟಕದ ಮೂಲಕ ವಿದ್ಯಾರ್ಥಿಗಳಿಗೆ ನಿರಂತರವಾಗಿ ವೃತ್ತಿ ಮಾರ್ಗದರ್ಶನ ನೀಡಲಾಗುವುದು ಎಂದು ಪ್ರಾಂಶುಪಾಲ ರಾಮಚಂದ್ರ ರಾಜೇ ಅರಸ್ ತಿಳಿಸಿದರು.ಈ ವೃತ್ತಿ ಮಾರ್ಗದರ್ಶನ ಮೇಳದಲ್ಲಿ 10ನೇ ತರಗತಿ ಮತ್ತು 12ನೇ ತರಗತಿ ನಂತರದ ಶಿಕ್ಷಣ ಮಾರ್ಗಗಳು, ಜೊತೆಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆ ಮುಂತಾದ ಕೋರ್ಸ್ ಗಳ ಪ್ರವೇಶ ಪರೀಕ್ಷೆಗಳ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು, ಬ್ಯಾಂಕ್ ಗಳು ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮಳಿಗೆ ಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.
ವೃತ್ತಿಪರ ಮೇಳದಲ್ಲಿ ಜಿಲ್ಲಾ ನೋಡಲ್ ಬ್ಯಾಂಕ್ ನ ನಿವೃತ್ತ ಮೆನೇಜರ್ ಆರ್.ಕೆ. ಬಾಲಚಂದ್ರ, ಡಾ. ಎನ್.ಎಸ್. ಸತೀಶ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ರೇಖಾ ಗಣಪತಿ, ಕುಶಾಲನಗರ ಡಿಪ್ಲೋಮಾ ಕಾಲೇಜಿನ ಪ್ಲೇಸ್ ಮೆಂಟ್ ಅಧಿಕಾರಿ ಪ್ರಸನ್ನ, ಜಿಲ್ಲಾ ಉದ್ಯೋಗಾಧಿಕಾರಿ ಸಿ.ಬಿ. ಮಂಜುನಾಥ್ , ಮಡಿಕೇರಿ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ಸಿ.ಕೆ. ಇಂದ್ರೇಶ್ ಸೇರಿದಂತೆ ಕೂಡಿಗೆ ಸೈನಿಕ ಶಾಲೆಯ ಅಧಿಕಾರಿಗಳು ಸೇರಿದಂತೆ ಇತರ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಅರಸ್ ತಿಳಿಸಿದರು.
ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮ ಕುಮಾರ್, ಸೋಮವಾರಪೇಟೆ ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಬಿ.ಎಂ. ಬೆಳ್ಳಿಯಪ್ಪ, ಮಡಿಕೇರಿ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ಸಿ.ಕೆ. ಇಂದ್ರೇಶ್, ಆಲೂರು ಸಿದ್ಧಾಪುರ ಐಟಿಐ ಕಾಲೇಜಿನ ಜೆಟಿಓ ಎ. ತೇಜಸ್ವಿನಿ, ಕುಶಾಲನಗರ ಸ್ಕೌಟ್, ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್. ಗಣೇಶ್ ಇದ್ದರು. ಮೇಳ ಹಾಗೂ ಮಳಿಗೆಯನ್ನು ತೆರೆಯುವ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಎಚ್.ಎಚ್. ಸತೀಶ್ ಮೊ:9449910016 ಹಾಗೂ ವಿ. ವಿಜಯ್ ಉಪನ್ಯಾಸಕರು ಮೊ:8105360463 ಅವರನ್ನು ಸಂಪರ್ಕಿಸಬಹುದು.