ಕನ್ನಡಪ್ರಭ ವಾರ್ತೆ ಕನಕಪುರ
ಬೆಳಗ್ಗೆ 7.30 ಗಂಟೆಗೆ ರನ್ ಫಾರ್ ಮನರೇಗಾ, ಮನರೇಗಾ ಉಳಿಸಿ ಗ್ರಾಮೀಣ ಜನರ ಬದುಕು ರಕ್ಷಿಸಿ ಎಂಬ ಘೋಷ ವಾಕ್ಯದೊಂದಿಗೆ ಆಯೋಜಿಸಿದ್ದ ಹದಿನಾರು ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ನೂರಾರು ಮಹಿಳೆಯರು, ಹೆಣ್ಣು ಮಕ್ಕಳು ಓಟದಲ್ಲಿ ಭಾಗವಹಿಸಿ ಮನರೇಗಾ ಯೋಜನೆ ಪುನರ್ ಜಾರಿಗೆ ಬೆಂಬಲ ಸೂಚಿಸಿದರು. ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯ ತಾಲೂಕು ಮಟ್ಟದದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಚಲನಚಿತ್ರ ಗಾಯನ ಸ್ಪರ್ಧೆ, ನೃತ್ಯ ಹಾಗೂ ರಂಗಗೀತೆ, ಜಾನಪದ ಗೀತೆಗಳ ಪ್ರದರ್ಶನ ಸಭಿಕರ ಮನಸೂರೆಗೊಂಡಿತ್ತು, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಕ್ಕಳ ಜೊತೆ ನೃತ್ಯ ಮಾಡಿ ಮಕ್ಕಳನ್ನು ಹುರಿದುಂಬಿಸಿದರು.
ಫಲಪುಷ್ಪ ಪ್ರದರ್ಶನ, ವಿಜ್ಞಾನ ಮೇಳ ಹಾಗೂ ಪೇಟೆ ಕೆರೆ ಬಳಿಯ ಪ್ಯಾಂಟಸಿ ವರ್ಲ್ಡ್ ವೀಕ್ಷಣೆಗೆ ಮೂರನೇ ದಿನವು ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿ ವೀಕ್ಷಿಸಿದ್ದು ಕಂಡುಬಂದಿತು. ಡಿಸಿಎಂ ಡಿಕೆಶಿ ಪುತ್ರಿ ಐಶ್ವರ್ಯ ಸಮಾರಂಭಕ್ಕೆ ಆಗಮಿಸಿ ಫಲಪುಷ್ಪ ಪ್ರದರ್ಶನ, ವಿಜ್ಞಾನ ಮೇಳಕ್ಕೆ ಭೇಟಿ ನೀಡಿ ಮಕ್ಕಳಲ್ಲಿರುವ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.ಬೆಳಗ್ಗೆ 10 ಗಂಟೆಯಿಂದ ಆರಂಭವಾದ ವಾಯ್ಸ್ ಆಫ್ ಕನಕೋತ್ಸವದಲ್ಲಿ ನೂರಾರು ಬಾಲಕ, ಬಾಲಕಿಯರು, ಮಹಿಳೆಯರು ಭಾಗವಹಿಸಿ ತಮ್ಮ ಕಂಠಸಿರಿಯಿಂದ ಗಾಯನಗಳನ್ನು ಹಾಡಿದರು. ಸಂಜೆ ನಡೆದ ಕೇಶ ವಿನ್ಯಾಸ ಸ್ಪರ್ಧೆಯಲ್ಲಿ ನೂರಾರು ಹೆಣ್ಣು ಮಕ್ಕಳು, ಮಹಿಳೆಯರು ವಿವಿಧ ರೀತಿಯ ಕೇಶ ವಿನ್ಯಾಸ ದೊಂದಿಗೆ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಜಿಲ್ಲಾ ಮಟ್ಟದ ಕುಸ್ತಿ, ಷಟಲ್ ಬ್ಯಾಡ್ಮಿಂಟನ್, ವಾಲಿಬಾಲ್, ಕಬ್ಬಡಿ,ಪಂದ್ಯಾವಳಿಗಳು ರೋಮಾಂಚನಕಾರಿಯಾಗಿ ಮೂಡಿ ಬಂದವು. ಮ್ಯಾರಾಥಾನ್ ಓಟ, ಗಾಯನ, ನೃತ್ಯ, ರಂಗಗೀತೆಗಳಲ್ಲಿ ವಿಜೇತ ತಂಡಗಳಿಗೆ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ನಗದು ಬಹುಮಾನ ಹಾಗೂ ಉಡುಗೊರೆ ನೀಡಿ ಶುಭ ಹಾರೈಸಿದರು.