ಸ್ವಯಂಪ್ರೇರಣೆಯಿಂದ ಮತದಾನದಲ್ಲಿ ಭಾಗವಹಿಸಿ: ಜೋಸೆಫ್‌

KannadaprabhaNewsNetwork | Published : Mar 18, 2024 1:46 AM

ಸಾರಾಂಶ

ದೇಶದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಮತದಾನ ಮಹತ್ವದ ಪಾತ್ರ ವಹಿಸುತ್ತದೆ.

ಮುಂಡಗೋಡ: ದೇಶದ ಅಭಿವೃದ್ಧಿಗೆ ಪೂರಕವಾಗಿ ಯೋಗ್ಯವಾದ ವ್ಯಕ್ತಿಗಳನ್ನು ಆಯ್ಕೆಗಾಗಿ ಚುನಾವಣೆಗಳಲ್ಲಿ ಮತದಾನ ಮಾಡುವುದಕ್ಕೆ ಯಾವುದೇ ಜಾತಿ, ಧರ್ಮಗಳ ಸೀಮಿತ ರೇಖೆ ಇಲ್ಲದ ಕಾರಣ ದೇಶದ ಪ್ರತಿಯೊಬ್ಬ ೧೮ ವರ್ಷ ಮೇಲ್ಪಟ್ಟ ನಾಗರಿಕರು ಸ್ವಯಂ ಪ್ರೇರಣೆಯಿಂದ ಮತದಾನ ಮಾಡುವ ಅವಶ್ಯಕತೆಯಿದೆ ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಮುಂಡಗೋಡ ತಾಲೂಕು ಚುನಾವಣಾ ರಾಯಭಾರಿ ಬಿನ್ಸಿ ಜೋಸೆಫ್ ಅಭಿಪ್ರಾಯಪಟ್ಟರು.

ಶುಕ್ರವಾರ ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ಲೋಕಸಭಾ ಚುನಾವಣೆ-೨೦೨೪ರ ಹಿನ್ನೆಲೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಹಾಗೂ ತಾಲೂಕಾ ಸ್ವೀಪ್ ಸಮೀತಿ, ತಾಲೂಕಾಡಳಿತ, ತಾಲೂಕು ಪಂಚಾಯಿತಿ ವತಿಯಿಂದ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸುವುದಕ್ಕಾಗಿ ಆಯೋಜಿಸಿದ್ದ ಮಹಿಳೆಯರ ರಂಗೋಲಿ ಸ್ಪರ್ಧೆ, ಜಾಗೃತಿ ಕಾರ್ಯಕ್ರಮ ಹಾಗೂ ಎನ್‌ಆರ್‌ಎಲ್‌ಎಂನ ಸಂಜೀವಿನಿ ಮಾಸಿಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಮತದಾನ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಯಾವುದೇ ಆಮಿಷ ಹಾಗೂ ಪ್ರಭಾವಕ್ಕೆ ಒಳಗಾಗದೇ ಕಾನೂನು ಬದ್ಧ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ತಮ್ಮ ಸುತ್ತಮುತ್ತಲಿನ ಜನರಿಗೂ ಕಡ್ಡಾಯವಾಗಿ ಮತದಾನದ ಹಕ್ಕನ್ನು ಚಲಾಯಿಸಲು ಪ್ರೇರೇಪಿಸಬೇಕು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರ ಜೀವನದಲ್ಲಿ ಕೈಗೊಳ್ಳಬಹುದಾದ ಹಲವು ನಿರ್ಧಾರಗಳನ್ನು ಚುನಾಯಿತ ಜನಪ್ರತಿನಿಧಿಗಳು ಹಾಗೂ ಸರ್ಕಾರಗಳು ಹೊಂದಿವೆ. ಆದರೆ ಆ ಜನಪ್ರತಿನಿಧಿಗಳು ಹಾಗೂ ಸರ್ಕಾರಗಳನ್ನು ಆಯ್ಕೆ ಮಾಡುವ ಮಹತ್ತರವಾದ ಜವಾಬ್ದಾರಿಯನ್ನು ಸಂವಿಧಾನ ಮತದಾರ ಪ್ರಭುಗಳಿಗೆ ನೀಡಿದೆ. ಆದ್ದರಿಂದ ಸಾರ್ವಜನಿಕರು ಸ್ವಇಚ್ಛೆಯಿಂದ ತಮಗೆ ಉತ್ತಮ ಎನಿಸುವ ನಾಯಕರನ್ನು ಮತದಾನದ ಮೂಲಕ ಆಯ್ಕೆ ಮಾಡಬಹುದಾಗಿದೆ. ಇದ್ದಕಾಗಿ ಚುನಾವಣಾ ಆಯೋಗವು ಸಾವಿರಾರು ಕೋಟಿ ಖರ್ಚು ಮಾಡಿ ವ್ಯವಸ್ಥಿತ ಮತದಾನಕ್ಕೆ ಅನುಕೂಲವಾಗುವಂತೆ ಅನೇಕ ಸೌಲಭ್ಯಗಳನ್ನು ಒದಗಿಸಿದ್ದಾರೆ. ಈ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸಂವಿಧಾನಬದ್ಧ ಮತದಾನ ಹಕ್ಕನ್ನು ಎಲ್ಲರೂ ಕಡ್ಡಾಯವಾಗಿ ಚಲಾಯಿಸಬೇಕು ಎಂದರು.

ನಂತರ ಅತ್ಯುತ್ತಮ ರಂಗೋಲಿ ಬಿಡಿಸಿದ ಮಹಿಳೆಯರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ವಿತರಿಸಿ ಗೌರವಿಸಲಾಯಿತು.

ಇದೇ ವೇಳೆ ಗ್ರಾಮೀಣ ಭಾಗದ ಮಹಿಳೆಯರು ಎನ್‌ಆರ್‌ಎಲ್‌ಎಂ ಯೋಜನೆಯಡಿ ಸಾಲ ಸೌಲಭ್ಯ ಪಡೆದು ತಯಾರಿಸಿದ ಸಣ್ಣಪುಟ್ಟ ಆದಾಯೋತ್ಪನ್ನ ಪದಾರ್ಥಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ತಾಲೂಕು ಪಂಚಾಯಿತಿ, ಎನ್‌ಆರ್‌ಎಲ್‌ಎಂ ವತಿಯಿಂದ ಆಯೋಜಿಸಿದ ಸಂಜೀವಿನಿ ಮಾಸಿಕ ಸಂತೆಯನ್ನು ಅತಿಥಿಗಳು ಉದ್ಘಾಟಿಸಿದರು.

ತಾಪಂ ನರೇಗಾ ಸಹಾಯಕ ನಿರ್ದೇಶಕರು, ವ್ಯವಸ್ಥಾಪಕರು, ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ತಾಪಂ, ಎನ್‌ಆರ್‌ಎಲ್‌ಎಂ ಹಾಗೂ ನರೇಗಾ ಯೋಜನೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Share this article