ಪ್ರಜಾಪ್ರಭುತ್ವದ ಹಬ್ಬ- 2024 ಅಂಗವಾಗಿ ಜಾಗೃತ ಮತದಾರರ ಸಮಾವೇಶ
’ನೋಟಾ’ ಬೇಡ ’ಓಟು’ಹಾಕಿ. ನಂಬಿಕೆ ಮತ್ತು ನೈತಿಕತೆ ಬದುಕು ನಮ್ಮದು. ದೇಶದ ಜನ, ಆಸ್ತಿ, ಪರಂಪರೆ ನನ್ನದ್ದೆಂದುಕೊಳ್ಳುವ ಭಾವ ರಾಷ್ಟ್ರೀಯತೆ ಎಂದು ವಾಗ್ಮಿ, ನಿರ್ದೇಶಕ ಎಸ್.ಎನ್.ಸೇತುರಾಂ ಹೇಳಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಪ್ರಜಾಪ್ರಭುತ್ವದ ಹಬ್ಬ- 2024 ಅಂಗವಾಗಿ ಸುಗಮ ಸಂಗೀತಗಂಗಾ, ಸಂಸ್ಕಾರ ಭಾರತಿ, ಯುವ ಬ್ರಿಗೇಡ್, ವಂದೇ ಮಾತರಂ ಟ್ರಸ್ಟ್, ವಿವೇಕ ಜಾಗೃತ ಬಳಗ, ನಾದಚೈತನ್ಯ, ಅಖಿಲಭಾರತೀಯ ಸಾಹಿತ್ಯ ಪರಿಷದ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದ್ದ ’ಜಾಗೃತ ಮತದಾರರ ಸಮಾವೇಶ’ ದಲ್ಲಿ ’ರಾಷ್ಟ್ರೀಯತೆ ಹತ್ತು ಹಲವು ಮುಖಗಳು’ ಕುರಿತಂತೆ ಉಪನ್ಯಾಸ ನೀಡಿದ ಅವರು, ಮತದಾರರೊಂದಿಗೆ ಸಂವಾದ ನಡೆಸಿದರು.ದೇಶದ ಆಗು-ಹೋಗು, ಸರಿ-ತಪ್ಪು ತುಲನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ, ವಿವೇಚನೆಗೆ ಬೇಕಾದ ಜ್ಞಾನ ಮತ್ತು ಯೋಗ್ಯತೆ ನಮ್ಮಲ್ಲಿರಬೇಕು. ದೇಶದ ಸಾಧನೆ ಕೀಳಾಗಿ ನೋಡುವುದು ಬೇಡ, ಅನೇಕ ಸಂಗತಿಗಳು ಸುಳ್ಳಿರಬಹುದು. ಆದರೆ ಆಗುತ್ತಿರುವ ಸಕಾರಾತ್ಮಕ ಅಂಶಗಳನ್ನು ಗುರುತಿಸೋಣ. ನಮ್ಮವರ ಗೆಲುವಿಗೆ ಸಂತಸ ಪಡೋಣ, ಆಳುವವರ ಬಗ್ಗೆ ಸ್ಪಷ್ಟತೆ ಬೇಕು. ದೇಶ, ಜನ, ಸುತ್ತಲಿನ ವಸ್ತುಗಳೆಲ್ಲ ನನ್ನದೇ ಎಂಬ ಭಾವವೇ ರಾಷ್ಟ್ರೀಯತೆಯ ಲಕ್ಷಣ ಎಂದರು.
ದಾಸ್ಯದಿಂದ ಆಚೆ ಬರೋಣ. ಸಾವಿರ ವರ್ಷಗಳ ದಾಸ್ಯದ ಪರಿಣಾಮ ನಮ್ಮ ಆಲೋಚನೆಗಳಲ್ಲೂ ಪ್ರಭಾವಿಸಿದೆ. ದೇವಸ್ಥಾನ, ಪೂಜೆ, ಪದ್ಧತಿ ತಲೆ ತಲಾಂತರದಿಂದ ಬಂದಿರುವುದನ್ನು ಕೆಲವರು ಟೀಕಿಸುತ್ತಾರೆ. ಪದ್ಧತಿ ಪಾಲನೆಯಾಗದಿದ್ದರೆ ದೇವಸ್ಥಾನಕ್ಕೆ ಹೋಗಬೇಕಾದವರು ಹೋಗುವುದಿಲ್ಲ. ಆಸಕ್ತರು ಹೋಗದಿದ್ದರೆ ಪಾಳುಬಿದ್ದು ಲೂಟಿಕೋರರ ಪಾಲಾಗುತ್ತವೆ ಎಂಬುದನ್ನು ನೆನಪಿಡಬೇಕೆಂದರು.
ಸುಗಮ ಸಂಗೀತ ಗಂಗಾ ಉಪಾಧ್ಯಕ್ಷ ಸ.ಗಿರಿಜಾಶಂಕರ್ ಮಾತನಾಡಿ, ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮತದಾರ ಜಾಗೃತನಾಗಬೇಕು. ಎಷ್ಟೇ ಸಿರಿವಂತನಿದ್ದರೂ ಜನಸಾಮಾನ್ಯರನ್ನು ಮತ ನೀಡುವಂತೆ ಕೋರಬೇಕಾದ ಸ್ಥಿತಿಯೆ ಪ್ರಜಾಪ್ರಭುತ್ವದ ಹಿರಿಮೆ. ಚುನಾವಣೆಗಳು ನಡೆದಂತೆಲ್ಲ ಮತದಾರ ಪಕ್ವಗೊಳ್ಳುತ್ತಿಲ್ಲ ಎಂದು ವಿಷಾಧಿಸಿದ ಅವರು, ಮತದಾನ ಮಾಡದಿರುವುದು ಅಪರಾಧ ಎಂದರು.
ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ನಡೆದ ’ಜಾಗೃತ ಮತದಾರರ ಸಮಾವೇಶ’ವನ್ನು ಚಿಂತಕ ಸೇತುರಾಂ ಉದ್ಘಾಟಿಸಿದರು. ಅರವಿಂದ್ ದೀಕ್ಷಿತ್, ಗಿರಿಜಾಶಂಕರ್, ಡಾ. ಜೆ.ಪಿ. ಕೃಷ್ಣೇಗೌಡ, ಪ್ರಭುಲಿಂಗಶಾಸ್ತ್ರಿ, ಪ್ರೇಮ್‌ಕುಮಾರ್ ಇದ್ದರು.