ಪಕ್ಷ, ನಾನು ಸೂಚಿಸಿದ ಅಭ್ಯರ್ಥಿಗೆ ಮತ ಹಾಕಿ: ಸಂಸದ ಡಾ.ಕೆ. ಸುಧಾಕರ್

KannadaprabhaNewsNetwork |  
Published : Jul 17, 2026, 01:30 AM IST
  ಸಿಕೆಬಿ-4 ಅಜ್ಜವಾರ ಪಂಚಾಯಿತಿಯ ದೊಡ್ಡಕಿರುಗಂಬಿ ಗ್ರಾಮದಲ್ಲಿ 2022-23 ನೇ ಸಾಲಿನ ಪ್ರಧಾನ ಮಂತ್ರಿ ಆದರ್ಶಗ್ರಾಮ ಯೋಜನೆಯಲ್ಲಿ ವಿವಿಧ ಕಾಮಗಾರಿಗಳಿಗೆ ಸಂಸದ ಡಾ.ಕೆ.ಸುಧಾಕರ್ ಗುದ್ದಲಿ ಪೂಜೆ ನೆರವೇರಿಸಿದರು | Kannada Prabha

ಸಾರಾಂಶ

2023ರ ಚುನಾವಣೆಯಲ್ಲಿ ನನಗೆ ಯಾಕೆ ಹೆಚ್ಚಿನ ಮತ ಹಾಕಲಿಲ್ಲ ಎಂಬುದು ಈ ಕ್ಷಣಕ್ಕೂ ಅರ್ಥವಾಗುತ್ತಿಲ್ಲ. ನಾನೇನಾದರೂ ತಪ್ಪು ಮಾಡಿದರೆ, ನಿಮ್ಮ ನಿರೀಕ್ಷೆ ಹುಸಿ ಮಾಡಿ ಕೆಲಸ ಮಾಡದಿದ್ದರೆ ಸೋಲಿಸಿ ತಪ್ಪಿಲ್ಲ.

ಮತ ಪಡೆದು ಏನೂ ಮಾಡದೆ ಹೋದ ಶಾಸಕರಿಗಿಂತ ಎಲ್ಲವನ್ನೂ ಕೊಟ್ಟ ನನ್ನನ್ನೆ ಯಾಕೆ ಸೋಲಿಸಿದಿರಿ: ಸಂಸದ ಡಾ.ಕೆ. ಸುಧಾಕರ್

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನನಗಿಂತಲೂ ಹಿಂದೆ ಇದ್ದ ಎಲ್ಲಾ ಎಂಎಲ್ಎಗಳು ಚುನಾವಣೆ ಸಂದರ್ಭದಲ್ಲಿ ಕೇವಲ ಮತವನ್ನು ಹಾಕಿಸಿಕೊಂಡು ಮನೆಗೆ ಹೋದರು. ನನ್ನಂತೆ ಅವರೇನು ಸೌಲಭ್ಯಗಳನ್ನು ಕೊಡಲಿಲ್ಲ. ನಾನು ಎಲ್ಲವನ್ನೂ ಕೊಟ್ಟರು ಸೋಲಿನ ಉಡುಗೊರೆಯನ್ನು ಯಾಕೆ ಕೊಟ್ಟಿರಿ?. 2023ರ ಚುನಾವಣೆಯಲ್ಲಿ ನನಗೆ ಯಾಕೆ ಹೆಚ್ಚಿನ ಮತ ಹಾಕಲಿಲ್ಲ ಎಂಬುದು ಈ ಕ್ಷಣಕ್ಕೂ ಅರ್ಥವಾಗುತ್ತಿಲ್ಲ. ನಾನೇನಾದರೂ ತಪ್ಪು ಮಾಡಿದರೆ, ನಿಮ್ಮ ನಿರೀಕ್ಷೆ ಹುಸಿ ಮಾಡಿ ಕೆಲಸ ಮಾಡದಿದ್ದರೆ ಸೋಲಿಸಿ ತಪ್ಪಿಲ್ಲ. ನೀವು ಕೇಳದೆ ಎಲ್ಲವನ್ನೂ ನಿಮ್ಮ ಮನೆಯ ಬಾಗಿಲಿಗೆ ತಲುಪಿಸಿದೆ. ಆದರೂ ನೀವು ಮತ ನೀಡಲಿಲ್ಲ ಏಕೆ ಎಂದು ಸಂಸದ ಡಾ.ಕೆ.ಸುಧಾಕರ್ ಕಾರ್ಯಕರ್ತರ ಮುಂದೆ ಗದ್ಗದಿತರಾದರು.

ಅಜ್ಜವಾರ ಪಂಚಾಯಿತಿಯ ದೊಡ್ಡಕಿರುಗಂಬಿ ಹಾಗೂ ಅಗಲಗುರ್ಕಿ ಪಂಚಾಯತಿಯ ಶ್ರೀರಾಮಪುರ, ಕೊಂಡೇನಹಳ್ಳಿ ಗ್ರಾಮ ಪಂಚಾಯಿತಿಯ ಕಣಿತಹಳ್ಳಿ ಗ್ರಾಮಗಳಲ್ಲಿ 2022-23ನೇ ಸಾಲಿನ ಪ್ರಧಾನ ಮಂತ್ರಿ ಆದರ್ಶಗ್ರಾಮ ಯೋಜನೆಯಲ್ಲಿ ವಿವಿಧ ಕಾಮಗಾರಿಗಳಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ನಾನು ನಮ್ಮ ಪಕ್ಷ ತೀರ್ಮಾನಿಸಿ ಒಬ್ಬರನ್ನು ಈ ಕ್ಷೇತ್ರಕ್ಕೆ ಕೊಡುತ್ತೇವೆ. ನಾವು ಸೂಚಿಸಿದ ಅಭ್ಯರ್ಥಿ ಆದರೂ ಒಂದೇ, ನಾನಾದರೂ ಒಂದೇ. ಇದನ್ನೆಲ್ಲಾ ತಲೆಯಲ್ಲಿಟ್ಟುಕೊಂಡು ಇವತ್ತಿಂದ ಕೆಲಸ ಮಾಡಿ ನಾನು ಪಾರ್ಟಿಯೊಳಗೆ ಸಂಸದನಾಗಿ ಇರಬೇಕು ಎಂದರೆ ಸಂಸದನಾಗೇ ಇರುತ್ತೇನೆ. ಆದರೆ ನಮ್ಮ ಪಕ್ಷದಿಂದ ಒಬ್ಬರನ್ನು ಎಲ್ಲಾ ಮುಖಂಡರ ವಿಶ್ವಾಸ ತೆಗೆದುಕೊಂಡು ಯಾರೋ ಒಬ್ಬರನ್ನು ಆಯ್ಕೆ ಮಾಡುತ್ತೇವೆ. ಅವರನ್ನು ನೀವು ಶಾಸಕನ್ನಾಗಿ ಮಾಡಬೇಕು. ಅವರು ಗೆದ್ದರೆ ನಾನು ಗೆದ್ದಂತೆಯೇ. ಆಗಲು ಇದೇ ರೀತಿಯ ಅಭಿವೃದ್ಧಿ ಕಾರ್ಯಗಳು ಆಗುತ್ತವೆ. ಈ ದೆಸೆಯಲ್ಲಿ ನಾವು ನೀವೆಲ್ಲ ಸೇರಿ ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗೋಣ ಎಂದು ಹೇಳಿದರು.

ಕ್ಷೇತ್ರದ ಮಹಿಳೆಯರಿಗೆ ಶ್ವಾಸಕೋಶದ ತೊಂದರೆ ಆಗಬಾರದೆಂದು ನಮ್ಮ ಸರ್ಕಾರ ಉಜ್ವಲ ಯೋಜನೆ ಮೂಲಕ ಉಚಿತ ಗ್ಯಾಸ್ ನೀಡಿದೆ. ಕ್ಷೇತ್ರದಲ್ಲಿ ಸಾಯಿ ಕೃಷ್ಣಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಕುಕ್ಕರ್, ಮಿಕ್ಸರ್ ಗ್ರೈಂಡರ್, ಸ್ಟೌವ್ ನೀಡುವ ಮೂಲಕ ಮಹಿಳೆಯರ ಶ್ರಮವನ್ನು ತಗ್ಗಿಸಲಾಗಿದೆ. ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟಾಗ ಮತದಾನದ ಸಂದರ್ಭದಲ್ಲಿ ಯಾವುದಾದರೂ ಒಂದು ನೆನಪಿಗೆ ಬರಬೇಕಲ್ಲ ಎಂದು ಮೆಲುಕು ಹಾಕಿದರು.

ಈಗ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಮಕ್ಕಳಿಗೆ 5000 ನಗದು ಪ್ರೋತ್ಸಾಹ ಧನ ಕೊಡುತ್ತಿದ್ದೇನೆ. ಇವನ್ನೆಲ್ಲ ನಾವು ಏಕೆ ಮಾಡುತ್ತಿದ್ದೇವೆ? ಎಂಬುದು ನಿಮಗೆ ಅರ್ಥವಾಗಬೇಕು. ನಾನು ಡ್ರಾಮಾ ಮಾಡುತ್ತಿಲ್ಲ. ನಾವು ನೀಲಿ ಟವಲ್ ಹಾಕಿಕೊಳ್ಳುವುದು, ದೊಡ್ಡಮ್ಮ ಅನ್ನುವುದು ಅವ್ವ ಅನ್ನೋದು ಮಾಡುವುದಿಲ್ಲ. ಬಡವರ ಮನೆಗೆ ಹೋಗಿ ತಟ್ಟೆ ತೆಗೆದುಕೊಂಡು ತಾನೇ ಊಟ ಹಾಕಿಕೊಳ್ಳುವುದು ಮಾಡುವುದಿಲ್ಲ. ಇಷ್ಟಕ್ಕೆ ನೀವು ತೃಪ್ತರಾಗಿ ಆಕಾಶವನ್ನೇ ತಂದುಕೊಟ್ಟಷ್ಟು ಸಂತೋಷದಿಂದ ಮತ ಹಾಕಿದಿರಿ. ಈ ತರದ ಡ್ರಾಮಾ ನಾನು ಮಾಡುವುದಿಲ್ಲ ಎನ್ನುವ ಮೂಲಕ ಹೆಸರು ಹೇಳದೇ ಶಾಸಕ ಪ್ರದೀಪ್ ಈಶ್ವರವರ ಕಾಲೆಳೆದರು.

ಆಕಾಶ ಎಷ್ಟು ದೂರ ಇದಿಯೋ? ನಿಮ್ಮ ಶಾಸಕನು ಅಷ್ಟೇ ದೂರ ಇದ್ದಾರೆ. ಕೊನೆಗೆ ನಿಮ್ಮ ಗ್ರಾಮಕ್ಕೆ ನಿಮ್ಮ ಬಳಿಗೆ ಬಂದವನು ಇದೆ ಸುಧಾಕರ. ನೀವು ಮತ ಹಾಕಿದ್ದೀರೊ ಇಲ್ಲವೋ ಗೊತ್ತಿಲ್ಲ, ಪರಿಶಿಷ್ಟ ಜಾತಿ ಅವರೇ ಹೆಚ್ಚಿರುವ ದೊಡ್ಡ ಕಿರುಗಂಬಿ, ಶ್ರೀರಾಂಪುರ, ಕಣಿತಹಳ್ಳಿ ಗ್ರಾಮಗಳಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಬಂದಿದ್ದೇನೆ. 20 ಲಕ್ಷ ಹಣ ಮತ್ತೆ ಹಾಕಿದ್ದೇನೆ. ನನಗೆ ನಿಮ್ಮ ಬಗ್ಗೆ ಕೋಪವಿಲ್ಲ. ನನಗೆ ಮತ ಹಾಕಲಿಲ್ಲ ನನ್ನನ್ನು ಸೋಲಿಸಿದ್ದಾರೆ ಎಂಬ ದ್ವೇಷವಿಲ್ಲ. ಸಂಸದನಾಗಿ ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ನಿಮ್ಮ ಮೇಲಿನ ಪ್ರೀತಿ-ವಿಶ್ವಾಸ ಅಕ್ಕರೆ ಮಮತೆ ಹಾಗೆ ಇದೆ. ಮುಂದೆ ನಿಮ್ಮ ಮೇಲೆ ವಿಶ್ವಾಸ ಇಡಬಹುದಾ ನಾನು? ಎಂದು ಸಾರ್ವಜನಿಕರನ್ನು ಪ್ರಶ್ನಿಸಿದರು. ನಾವು ಮರೆಯುವುದಿಲ್ಲ ಎಂದು ಜನತೆ ಹೇಳಿದಾಗ ಮಾತನಾಡಿದ ಸಂಸದರು ಈಗ ಮರೆಯುವುದಿಲ್ಲ. ಚುನಾವಣೆ ಬಂದಾಗ ಮರೆಯುತ್ತೀರಿ? ಎಂದು ಹಾಸ್ಯ ಚಟಾಕಿ ಹಾರಿಸಿದರು.ಬಾಕ್ಸ್:

ಉಚಿತ ಸೈಟು, ಮನೆ ಕೊಡುತ್ತೇವೆ

ಈ ಕ್ಷೇತ್ರದ ಶಾಸಕನಿಗೆ ಲೇಔಟ್ ಅಭಿವೃದ್ಧಿಪಡಿಸಿ ಬಡವರಿಗೆ ನಿವೇಶನ, ಮನೆ ಮಾಡಿಕೊಡುವ ಮನಸ್ಸು ಇಲ್ಲ ಯೋಗ್ಯತೆಯೂ ಇಲ್ಲ. ಒಂದುವರೆ ವರ್ಷ ಕಾಯಿರಿ? ನಮ್ಮದೇ ಪಕ್ಷ ಅಧಿಕಾರಕ್ಕೆ ಬರುತ್ತದೆ. ನಾವೇ ನಿಮಗೆ ಲೇಔಟ್ ಅಭಿವೃದ್ಧಿಪಡಿಸಿ ಉಚಿತ ನಿವೇಶನಗಳನ್ನು ಕೊಡುವ ಜೊತೆಗೆ ಉಚಿತವಾಗಿ ಮನೆಯನ್ನೂ ಕಟ್ಟಿಸಿಕೊಡುತ್ತೇವೆ ಎಂದು ಕಾರ್ಯಕರ್ತರ ಅಳಲಿಗೆ ಸಂಸದ ಡಾ.ಕೆ.ಸುಧಾಕರ್ ದನಿಗೂಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾದ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ. ಚಿಕ್ಕಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಾಮಸ್ವಾಮಿ, ಮತ್ತಿತರರು ಇದ್ದರು.

ಸಿಕೆಬಿ-4 ಅಜ್ಜವಾರ ಪಂಚಾಯಿತಿಯ ದೊಡ್ಡಕಿರುಗಂಬಿ ಗ್ರಾಮದಲ್ಲಿ 2022-23ನೇ ಸಾಲಿನ ಪ್ರಧಾನ ಮಂತ್ರಿ ಆದರ್ಶಗ್ರಾಮ ಯೋಜನೆಯಲ್ಲಿ ವಿವಿಧ ಕಾಮಗಾರಿಗಳಿಗೆ ಸಂಸದ ಡಾ.ಕೆ. ಸುಧಾಕರ್ ಗುದ್ದಲಿ ಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳಗನ್ನಡ ಅಭಿವ್ಯಕ್ತಿ ಕೌಶಲಗಳ ಶೋಧನೆ ಅಗತ್ಯ
ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗೆ ಬದ್ಧ; ಮುನಿಯಪ್ಪ