ಸುಭದ್ರ ದೇಶಕ್ಕಾಗಿ ಮೋದಿಗೆ ಮತ ಹಾಕಿ: ಅಮಿತ್‌ ಶಾ

KannadaprabhaNewsNetwork | Published : May 2, 2024 12:17 AM

ಸಾರಾಂಶ

ಸುಭದ್ರ, ಸುರಕ್ಷಿತ, ಭ್ರಷ್ಟಾಚಾರ ಮುಕ್ತ, ಆತಂಕವಾದಕ್ಕೆ ಮುಕ್ತ, ಅಭಿವೃದ್ಧಿಗಾಗಿ ಪಣ ತೊಟ್ಟಿರುವ ಮೋದಿ, ಇನ್ನೊಂದೆಡೆ ಬರೀ ಭ್ರಷ್ಟಾಚಾರ ಮಾಡುತ್ತಾ, ಆತಂಕವಾದಕ್ಕೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್‌. ಯಾವ ಸರ್ಕಾರ ಬೇಕೋ ನೀವೇ ತುಲನೆ ಮಾಡಿ ಮತ ಚಲಾಯಿಸಿ.

ಹುಬ್ಬಳ್ಳಿ:

ಸುರಕ್ಷಿತ, ಸುಭದ್ರ, ಸುಸ್ಥಿರ, ಭ್ರಷ್ಟಾಚಾರ ಮುಕ್ತ ಸರ್ಕಾರ (ಎನ್‌ಡಿಎ) ಬೇಕೋ? ಭ್ರಷ್ಟಾಚಾರಿಗಳ ಸರ್ಕಾರ (ಇಂಡಿಯಾ ಕೂಟ) ಬೇಕೋ?

ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರ ಪ್ರಚಾರ ಭಾಷಣದ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೇಳಿದ ಪ್ರಶ್ನೆ.

ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಭಾಷಣ ಮಾಡಿದ ಅಮಿತ್‌ ಶಾ, ಈ ಪ್ರಶ್ನೆ ಕೇಳುತ್ತಿದ್ದಂತೆ ಎಲ್ಲರೂ ಮೋದಿ ಮೋದಿ ಎಂದು ಕೂಗು ಹಾಕುವ ಮೂಲಕ ಬಿಜೆಪಿಗೆ ಬೆಂಬಲಿಸಿದರು. ವೇದಿಕೆಗೆ ಬರುತ್ತಿದ್ದಂತೆ ನೇರವಾಗಿ ಭಾಷಣ ಶುರು ಮಾಡಿದ ಶಾ ಬರೋಬ್ಬರಿ 23 ನಿಮಿಷಗಳ ಕಾಲ ಭಾಷಣ ಮಾಡಿ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಜತೆ ಜತೆಗೆ ಕಾಂಗ್ರೆಸ್‌ ವೈಫಲ್ಯಗಳನ್ನು ಖಂಡಿಸುತ್ತಾ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

ಸುಭದ್ರ, ಸುರಕ್ಷಿತ, ಭ್ರಷ್ಟಾಚಾರ ಮುಕ್ತ, ಆತಂಕವಾದಕ್ಕೆ ಮುಕ್ತ, ಅಭಿವೃದ್ಧಿಗಾಗಿ ಪಣ ತೊಟ್ಟಿರುವ ಮೋದಿ, ಇನ್ನೊಂದೆಡೆ ಬರೀ ಭ್ರಷ್ಟಾಚಾರ ಮಾಡುತ್ತಾ, ಆತಂಕವಾದಕ್ಕೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್‌. ಯಾವ ಸರ್ಕಾರ ಬೇಕೋ ನೀವೇ ತುಲನೆ ಮಾಡಿ ಮತ ಚಲಾಯಿಸಿ ಎಂದು ಜನರಿಗೆ ತಿಳಿಸಿದರು.

2014ರವರೆಗೆ ದೇಶದ ಆರ್ಥಿಕ ಸ್ಥಿತಿ ಅಷ್ಟೊಂದು ಸದೃಢವಾಗಿರಲಿಲ್ಲ. ಆದರೆ ಮೋದಿ ಬಂದ ಮೇಲೆ ಆರ್ಥಿಕ ಶಕ್ತಿಯಾಗಿ ದೇಶ ಬೆಳೆಯುತ್ತಿದೆ. ಇದೀಗ 5ನೆಯ ಸ್ಥಾನದಲ್ಲಿದೆ. ಇದನ್ನು 3ನೆಯ ಸ್ಥಾನಕ್ಕೆ ಕೊಂಡೋಯ್ಯುತ್ತೇವೆ ಎಂದ ಅವರು, ನಕ್ಸಲವಾದ, ಆತಂಕವಾದ, ಎಲ್ಲವನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈಗ ಕಾಶ್ಮೀರ:

ಕಾಶ್ಮೀರದಲ್ಲಿ 370ನೇ ಕಲಂ ತೆಗೆದಾಗಲೂ ಕಾಂಗ್ರೆಸ್‌ ವಿರೋಧಿಸಿತ್ತು. ರಾಹುಲ್‌ಬಾಬಾ ಅಲ್ಲಿ ರಕ್ತದ ನದಿಯೇ ಹರಿಯುತ್ತದೆ ಎಂದು ಹೇಳಿದ್ದರು. ಆದರೆ 370ನೇ ಕಲಂ ತೆಗೆದು ಇಷ್ಟ ದಿನಗಳಾಗಿವೆ. ಒಂದೇ ಒಂದು ಅಹಿತಕರ ಘಟನೆ ನಡೆದಿಲ್ಲ. ಅಲ್ಲಿನ ಶಾಂತಿಗೆ ಭಂಗ ಬಂದಿಲ್ಲ. ಅಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿದೆ. ಪುಲ್ವಮಾ ದಾಳಿ ಆದಾಗ ಪಾಕಿಸ್ತಾನದೊಳಗೆ ನುಗ್ಗಿ ಆತಂಕವಾದಿಗಳನ್ನು ಹೊಡೆದುರುಳಿಸಿದ್ದೇವೆ ಎಂದರು.

ಗಾಂಧಿ ಪರಿವಾರವಾದಿಗಳು (ರಾಹುಲ್‌, ಪ್ರಿಯಾಂಕಾ) ರಜೆಯಲ್ಲಿ ಮಜಾ ಮಾಡಲು ವಿದೇಶಗಳಿಗೆ ಹೋಗುತ್ತಾರೆ. ಆದರೆ ಮೋದಿ ಅವರು, ದೀಪಾವಳಿಯನ್ನೂ ಸೈನಿಕರೊಂದಿಗೆ ಆಚರಿಸುತ್ತಾರೆ. ಇವರದು ಬರೀ ವೋಟ್‌ ಬ್ಯಾಂಕ್‌ ರಾಜಕಾರಣ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಇವರ ಮೇಲೆ ಲಕ್ಷ ಕೋಟಿಗಟ್ಟಲೇ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಆದರೆ ಮೋದಿ 10 ವರ್ಷದಿಂದ ಆಡಳಿತ ನಡೆಸುತ್ತಿದ್ದಾರೆ. 15 ಪೈಸೆಯಷ್ಟು ಭ್ರಷ್ಟಾಚಾರದ ಆರೋಪ ಕೇಳಿ ಬಂದಿಲ್ಲ. ನೀವೇ ಹೇಳಿ ಎಂಥ ಸರ್ಕಾರ ಬೇಕು ಎಂದರು.

ಶ್ರೀರಾಮಮಂದಿರ ಪ್ರಾಣಪ್ರತಿಷ್ಠಾ ಮಹೋತ್ಸವಕ್ಕೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ, ರಾಹುಲ್‌ಗೆ ಆಹ್ವಾನ ನೀಡಿದ್ದೇವು. ಆದರೆ ಅಲ್ಲಿಗೆ ಬಂದರೆ ಎಲ್ಲಿ ಅಲ್ಪಸಂಖ್ಯಾತರ ಮತ ಹೋಗಿ ಬಿಡುತ್ತವೆಯೋ ಎಂದುಕೊಂಡು ಬರಲಿಲ್ಲ. ಇವರದು ಬರೀ ವೋಟ್‌ ಬ್ಯಾಂಕ್‌ ರಾಜಕಾರಣ ಎಂದು ಕಿಡಿಕಾರಿದರು.

ಪ್ರಜ್ವಲ್‌ ರೇವಣ್ಣ ಪ್ರಸ್ತಾಪ

ಪ್ರಜ್ವಲ್‌ ರೇವಣ್ಣ ಅವರದೆನ್ನಲಾದ ಅಶ್ಲೀಲ ವಿಡಿಯೋ ಬಗ್ಗೆ ಪ್ರಸ್ತಾಪಿಸಿದ ಶಾ, ಹೆಣ್ಣು ಮಕ್ಕಳಿಗೆ, ಮಾತೆಯರಿಗೆ ಅತ್ಯಂತ ಗೌರವವಾಗಿ ನಡೆದುಕೊಳ್ಳುವ ಪಕ್ಷ ಬಿಜೆಪಿ. ಈ ವಿಷಯದಲ್ಲಿ ಬಿಜೆಪಿಯ ನಿಲುವು ಸ್ಪಷ್ಟವಾಗಿದೆ. ಈ ಹೆಣ್ಣು ಮಕ್ಕಳಿಗೆ ದೌರ್ಜನ್ಯ ಮಾಡುವಂಥವರೊಂದಿಗೆ ಬಿಜೆಪಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಜ್ವಲ್‌ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಮಾಡಿ. ತಪ್ಪಿತಸ್ಥರಿದ್ದರೆ ಅತಿ ಕಠಿಣವಾದ ಶಿಕ್ಷೆ ನೀಡಲಿ. ಆದರೆ ಕಾಂಗ್ರೆಸ್‌ ಪಕ್ಷ ಇದರಲ್ಲಿ ರಾಜಕಾರಣ ಮಾಡುತ್ತಿದೆ. ಇದು ಭಯಂಕರ ಅಪರಾಧ ಕೂಡ. ಇಲ್ಲಿನ ಸರ್ಕಾರ ಅತಿ ಕಠೋರವಾದ ಶಿಕ್ಷೆ ನೀಡಲಿ. ವಿದೇಶಕ್ಕೆ ಹೋಗಲು ಏಕೆ ಬಿಟ್ಟಿರಿ. ನಿಮ್ಮದೇ ಸರ್ಕಾರವಿದೆಯೆಲ್ಲ ಎಂದು ಪ್ರಶ್ನಿಸಿದರು. ಕಚ್ಚಾಟದಿಂದ ಬರ ಪರಿಹಾರ ವಿಳಂಬ:

ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬರುವುದು ವಿಳಂಬವಾಗಿದೆ ಎಂದು ಕಾಂಗ್ರೆಸ್‌ ಟೀಕಿಸುತ್ತಿದೆ. ಆದರೆ ಅದು ಸಿಎಂ- ಡಿಸಿಎಂ ಕಚ್ಚಾಟದಿಂದ ವಿಳಂಬವಾಗಿದೆ. ಇವರು ಪರಸ್ಪರ ಕಚ್ಚಾಡುತ್ತಾ ವರದಿ ಕಳುಹಿಸುವುದನ್ನು ವಿಳಂಬ ಮಾಡಿದರು. ಹೀಗಾಗಿ ಪರಿಹಾರ ನೀಡುವುದು ವಿಳಂಬವಾಗಿದೆ ಅಷ್ಟೇ ಎಂದರು. ಅನುದಾನ ನೀಡಿಕೆ, ತೆರಿಗೆ ಹಂಚಿಕೆ ಸೇರಿದಂತೆ ಎಲ್ಲದರಲ್ಲೂ ಯುಪಿಎ ಸರ್ಕಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಎನ್‌ಡಿಎ ಸರ್ಕಾರ ನೀಡಿದೆ ಎಂದು ವಿವರಿಸಿದರು.

Share this article