ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗಿರುವ ಮತದಾನದ ದೊಡ್ಡ ಶಕ್ತಿಯನ್ನು ದುರುಪಯೋಗಪಡಿಸುವ ಜತೆಗೆ ಮತಗಳ್ಳತನದ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸುವ ಕುತಂತ್ರ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆದಿದೆ. ಇದಕ್ಕೆ ಜನ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.ಸಮಾಜ ಕಲ್ಯಾಣ ಇಲಾಖೆಯಿಂದ ವಿಧಾನಸೌಧದದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ‘ನನ್ನ ಮತ ನನ್ನ ಹಕ್ಕು’ ಕಾರ್ಯಕ್ರಮವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶ್ರೀಮಂತರಿಗೆ ಮಾತ್ರ ಮತದಾನದ ಅಧಿಕಾರ ದೊರೆಯುವ ಕಾಲವೊಂದಿತ್ತು. ಆದರೆ, ಪ್ರಜಾಪ್ರಭುತ್ವ ಜಾರಿಯಾದ ಮೇಲೆ ಸಂವಿಧಾನಾತ್ಮಕವಾಗಿ ಶ್ರೀಮಂತ ಬಡವ ಬಲ್ಲಿದ ಎಂಬ ಬೇಧವಿಲ್ಲದೆ, ಎಲ್ಲರಿಗೂ ಒಂದೇ ಮತದ ಅಧಿಕಾರ ನೀಡಲಾಗಿದೆ. ಡಾ। ಬಿ.ಆರ್.ಅಂಬೇಡ್ಕರ್ ಅವರು ‘ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ’ ಎಂದು ಹೇಳಿದ್ದಾರೆ. ಆದರೆ, ಇಂದು ಅಧಿಕಾರ ಉಳಿಸಿಕೊಳ್ಳಲು ಪಟ್ಟಭದ್ರ ಹಿತಾಸಕ್ತಿಗಳು ಮತಗಳ್ಳತನದ ಹಾದಿ ಹಿಡಿದಿದ್ದಾರೆ. ಆ ಮೂಲಕ ದೇಶದ ಸಂವಿಧಾನವನ್ನು ದುರ್ಬಲಗೊಳಿಸುವ ಕುತಂತ್ರ ನಡೆದಿದೆ. ಮತದಾನವೂ ಸೇರಿ ನಮ್ಮ ಹಕ್ಕುಗಳ ರಕ್ಷಣೆ ದೃಷ್ಟಿಯಿಂದ ಇದಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು ಅದನ್ನು ಎಲ್ಲರೂ ತಪ್ಪದೆ ನಿರ್ವಹಿಸಲೇಬೇಕು ಎಂದರು.ಸ್ವಾತಂತ್ರ್ಯ ಬಂದಾಗಿನಿಂದಲೂ ಸಂವಿಧಾನ ವಿರೋಧಿಗಳು ಇದ್ದಾರೆ. ಸಂವಿಧಾನ ಮೇಲು ಕೀಳು ಹೋಗಲಾಡಿಸಿ ಸಮಾನತೆ ತರುತ್ತದೆ. ಸಮಾನತೆ ಬಂದರೆ ಶೋಷಣೆ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಮನುವಾದಿಗಳು ಸಂವಿಧಾನಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಲೇ ಇದ್ದಾರೆ. ಇದಕ್ಕೆ ನಮ್ಮ ಸರ್ಕಾರ ಅವಕಾಶ ನೀಡಲ್ಲ. ಪ್ರಜಾಪ್ರಭುತ್ವ ಉಳಿಸಿ, ಹಕ್ಕುಗಳನ್ನು ರಕ್ಷಿಸುವ ಪ್ರಮಾಣ ಸ್ವೀಕರಿಸಲಾಗಿದೆ. ಸಂವಿಧಾನ ನೀಡುವ ಹಕ್ಕು ಹಾಗೂ ಕರ್ತವ್ಯಗಳ ಪಾಲನೆಯನ್ನು ಚಾಚೂತಪ್ಪದೆ ಮಾಡುತ್ತೇವೆ ಎಂದರು.
ಜಾತಿ ವ್ಯವಸ್ಥೆಯಿಂದ ಅಸಮಾನತೆ:12ನೇ ಶತಮಾನದಲ್ಲೇ ಅನುಭವ ಮಂಟಪ ಸ್ಥಾಪಿಸಿ ಬಸವಣ್ಣನವರು ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಜೀವತುಂಬಿದ್ದರು. ನಮ್ಮ ಸಮಾಜದಲ್ಲಿನ ಜಾತಿ ವ್ಯವಸ್ಥೆ, ಅಸಮಾನತೆ, ಮೇಲು ಕೀಳು ಭಾವನೆ ಹೋಗಲಾಡಿಸಬೇಕೆಂಬ ದೃಷ್ಟಿಯಿಂದ ಮಹಿಳೆಯರೂ ಸೇರಿ ಸಮಾಜದ ಎಲ್ಲ ವರ್ಗದವರೂ ಅಲ್ಲಿ ಪ್ರಾತಿನಿಧ್ಯ ಹೊಂದಿದ್ದರು.
ಸ್ವಾತಂತ್ರ್ಯಾ ನಂತರ ಬಹುಸಂಸ್ಕೃತಿಯುಳ್ಳ ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಕಾಪಾಡಲು ಪ್ರಜಾಪ್ರಭುತ್ವದ ವ್ಯವಸ್ಥೆ ತರಲಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇನ್ನೂ ಜಾತಿವ್ಯವಸ್ಥೆ ಹೋಗಿಲ್ಲ. ಇದರಿಂದ ಅಸಮಾನತೆ ಮುಂದುವರೆದಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ತರದೆ ಜಾತಿ ವ್ಯವಸ್ಥೆ ನಿರ್ಮೂಲನಗೊಳಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಹಿಂದುಳಿದವರನ್ನು ಮೇಲೆತ್ತಲು, ಸಮಾನತೆ ತರಲು ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದೆ ಎಂದರು.ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ, ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಇದ್ದರು.ಪ್ರತಾಪ್ ಸಿಂಹ ಮೂರ್ಖ ಎಂದು ಸಿಎಂ ಟೀಕೆ:ಸಾಹಿತಿ ಭಾನು ಮುಷ್ತಾಕ್ ಅನ್ಯಧರ್ಮದವರು ಎನ್ನುವ ಕಾರಣಕ್ಕೆ ಕೆಲವರು ದಸರಾ ಉದ್ಘಾಟಿಸಲು ವಿರೋಧಿಸುತ್ತಿದ್ದಾರೆ. ಲೋಕಸಭೆಯ ಒಬ್ಬ ಮಾಜಿ ಸದಸ್ಯರಾದವರಿಗೆ ಸಂವಿಧಾನ ಗೊತ್ತಿಲ್ಲ ಅಂದರೆ ಏನನ್ನಬೇಕು. ಇಂಥ ಮೂರ್ಖರು ನಮ್ಮ ದೇಶದಲ್ಲಿದ್ದಾರೆಂದು ಹೆಸರೇಳದೆಯೇ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.ಬಿಜೆಪಿಯವರಿಗೆ ರಾಜಕೀಯ ಮಾಡಲು ಜಾತಿ, ಧರ್ಮದ ವಿಚಾರ ಬಿಟ್ಟು ಬೇರೇನೂ ಗೊತ್ತೇ ಇಲ್ಲ. ಸಾಹಿತಿ ಬಾನು ಮುಷ್ತಾಕ್ ಅನ್ಯಧರ್ಮದವರೆಂದು, ದಸರಾ ಉದ್ಘಾಟಿಸಬಾರದೆಂದು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಾತಿ, ಧರ್ಮ, ವರ್ಗ ವ್ಯವಸ್ಥೆಯನ್ನು ಮೀರಿ ಸಮಾನತೆ, ಸಹಬಾಳ್ವೆ ಮತ್ತು ಸಹೋರತ್ವದಿಂದ ಬದುಕಬೇಕೆಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಲೋಕಸಭೆಯ ಮಾಜಿ ಸಂಸದರಿಗೇ ಸಂವಿಧಾನ ಗೊತ್ತಿಲ್ಲ ಅಂದರೆ ಏನಂತ ಹೇಳಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಸಭಿಕರು ಮೂರ್ಖ ಎನ್ನಬೇಕು ಎಂದು ಉದ್ಗರಿಸಿದರು. ಆಗ ಮುಖ್ಯಮಂತ್ರಿ ಅವರು, ಸಂವಿಧಾನ ಗೊತ್ತಿಲ್ಲದ ಇಂತಹ ಮೂರ್ಖರು ನಮ್ಮ ದೇಶದಲ್ಲಿದ್ದಾರೆ ಎಚ್ಚರದಿಂದಿರಬೇಕು ಎಂದರು. ಪಟ್ಟಭದ್ರಹಿತಾಸಕ್ತಿಗಳು, ಮತಾಂಧತೆಯ ವರ್ತನೆಯನ್ನು ಎಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು. ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ. ಪ್ರತಿಪಕ್ಷದವರ ಆಕ್ಷೇಪಗಳಿಗೂ ಅವಕಾಶ ನೀಡೋಣ. ಆದರೆ, ಜನರನ್ನು ತಪ್ಪದಾರಿಗೆಳೆಯುವ ಪ್ರಯತ್ನಗಳು ಖಂಡನೀಯ ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗೆ ಬದ್ಧ: ಸಿಎಂಅಭಿವ್ಯಕ್ತಿ ಸ್ವಾತಂತ್ರಕ್ಕೆ ನಾನು ಮತ್ತು ನಮ್ಮ ಸರ್ಕಾರ ಎಂದೆಂದಿಗೂ ಬದ್ಧವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇರಲೇಬೇಕು. ಅದನ್ನು ಮೊಟಕು ಮಾಡುವ ಕಾರ್ಯವನ್ನು ನಾವು ಎಂದೂ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಹುಬ್ಬಳ್ಳಿಯ ಗೋಕುಲ್ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸಂಜೆ ನೂತನವಾಗಿ ಆರಂಭವಾದ ‘ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್’ ಉದ್ಘಾಟಿಸಿ ಅವರು ಮಾತನಾಡಿದರು.ಪತ್ರಕರ್ತರು ಊಹೆ ಮಾಡಿ ಸುದ್ದಿ ಮಾಡಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಪಡೆದು ಸುಳ್ಳು ಸುದ್ದಿ ಹರಡಬೇಡಿ. ಸುದ್ದಿ ಮಾಡುವಾಗ ವಿಷಯದ ಸತ್ಯಾಸತ್ಯತೆ ಅರಿತು, ಮೂಲ ಪರಿಶೀಲಿಸಿ, ನೈಜ ಸಂಗತಿಯನ್ನು ಜನರ ಮುಂದಿಡಬೇಕು. ಆ ಮೂಲಕ ಸಾರ್ವಜನಿಕರು ಮಾಧ್ಯಮಗಳ ಮೇಲಿಟ್ಟಿರುವ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಯೂಟ್ಯೂಬ್, ಡಿಜಿಟಲ್ ಮಾಧ್ಯಮಕ್ಕೆ ಲೈಸೆನ್ಸ್ ನೀಡುವ ಬಗ್ಗೆ ಮತ್ತು ಸುಳ್ಳು ಸುದ್ದಿ ತಡೆ ಕಾಯ್ದೆ ಜಾರಿಗೆ ಸರ್ಕಾರ ಪರಿಶೀಲನೆ ನಡೆಸಲಿದೆ. ಜೊತೆಗೆ, ಸರ್ಕಾರ ತಾಲೂಕುಮಟ್ಟದ ಪತ್ರಕರ್ತರಿಗೆ ಪಾಸ್, ಆರೋಗ್ಯ ಸಂಜೀವಿನಿ, ನಿವೃತ್ತ ಪತ್ರಕರ್ತರಿಗೆ ಮಾಶಾಸನ ನೀಡುವ ಮೂಲಕ ಅನುಕೂಲ ಕಲ್ಪಿಸಿದೆ ಎಂದು ತಿಳಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮಾಧ್ಯಮ ಪತ್ರಕರ್ತರಿಗೆ ಸಾಂಕೇತಿಕವಾಗಿ ಅಪಘಾತ ವಿಮೆಯ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು. ಈ ವೇಳೆ ಸಂಘದ ಲೋಗೋ ಅನಾವರಣ ಮಾಡಲಾಯಿತು. ಸಚಿವರಾದ ಸಂತೋಷ ಲಾಡ್, ಚಲುವರಾಯಸ್ವಾಮಿ, ಶಾಸಕರಾದ ಎನ್.ಎಚ್.ಕೋನರಡ್ಡಿ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಉಪಸ್ಥಿತರಿದ್ದರು.ಕ.ಕರ್ನಾಟಕದ ಹಾರ್ಟ್‌ಲೈನ್ ಆ್ಯಂಬುಲೆನ್ಸ್‌ಗೆ ನಾಳೆ ಚಾಲನೆ:ಕಲ್ಯಾಣ ಕರ್ನಾಟಕ ಪ್ರದೇಶದ ಹೃದ್ರೋಗಿಗಳಿಗೆ ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ‘ಕೆಕೆಅರ್‌ಡಿಬಿ ಹಾರ್ಟ್ ಲೈನ್ ಆ್ಯಂಬುಲೆನ್ಸ್’ ಯೋಜನೆಗೆ ಸಿಎಂ ಸಿದ್ದರಾಮಯ್ಯ ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ। ಅಜಯ್ ಸಿಂಗ್ ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಕೆಆರ್‌ಡಿಬಿಯ ಈ ಯೋಜನೆಯಡಿ ಕಲಬುರಗಿ ಜಿಲ್ಲೆಗೆ 9, ಬೀದರ್- 4, ಯಾದಗಿರಿ- 2, ರಾಯಚೂರು-5, ಬಳ್ಳಾರಿ- 4, ಕೊಪ್ಪಳ-5, ವಿಜಯನಗರ-3 ಸೇರಿದಂತೆ ಒಟ್ಟು ಅತ್ಯಾಧುನಿಕ 32 ಆ್ಯಂಬುಲೆನ್ಸ್ ವಾಹನಗಳನ್ನು ಒದಗಿಸಲಾಗಿದೆ. ಕಾರ್ಡಿಯಕ್ ಮಾನಿಟರ್, ಡೆಫಿಬ್ರಿಲೇಟರ್, ಪೋರ್ಟೇಬಲ್ ವೆಂಟಿಲೇಟರ್, ಅಂಬು ಬ್ಯಾಗ್, ಎಮರ್ಜೆನ್ಸಿ ಡ್ರಗ್ಸ್ ಸೇವೆಗಳನ್ನು ಈ ಆ್ಯಂಬುಲೆನ್ಸ್ ಹೊಂದಿವೆ. 32 ವಾಹನಗಳು ಪ್ರದೇಶದ ತಾಲೂಕು, ಸಮುದಾಯ ಆರೋಗ್ಯ ಆಸ್ಪತ್ರೆಗಳಿಗೆ ಹಂಚಿಕೆ ಮಾಡಿದ್ದು, ತಲಾ ₹9.64 ಕೋಟಿ ವೆಚ್ಚದಲ್ಲಿ ಖರೀದಿಸಿದ ಆ್ಯಂಬುಲೆನ್ಸ್ (ಬಿಎಲ್‌ಎಸ್) ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದೆ. ಪ್ರಸ್ತುತ ಇರುವ 49 ಆ್ಯಂಬುಲೆನ್ಸ್ ಸೇರಿದಂತೆ ಒಟ್ಟಾರೆ 81 ಆ್ಯಂಬುಲೆನ್ಸ್‌ಗಳು ಪ್ರದೇಶದ ಆರೋಗ್ಯ ಸೇವೆಗಳಿಗೆ ಲಭ್ಯವಾಗಲಿವೆ ಎಂದು ಸಿಂಗ್ ತಿಳಿಸಿದರು.
ಜಯದೇವ ತಜ್ಞರ ಸಲಹೆ:ಗ್ರಾಮೀಣ ಭಾಗದಲ್ಲಿ ಯಾವುದೇ ವ್ಯಕ್ತಿ ಹೃದಯಾಘಾತಕ್ಕೆ ಒಳಗಾದಲ್ಲಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದಾಗ ಹತ್ತಿರದ ತಾಲೂಕು ಆಸ್ಪತ್ರೆಗಳಿಗೆ ರೋಗಿಗಳನ್ನು ಸಂಪರ್ಕಿಸಲು ತಿಳಿಸಲಾಗುತ್ತದೆ. ಅಲ್ಲಿ ಹೃದ್ರೋಗಿಗಳಿಗೆ ಜಯದೇವ ಆಸ್ಪತ್ರೆಯ ತಜ್ಞ ವೈದ್ಯರ ಸಲಹೆ ಪಡೆದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಜಯದೇವ ಆಸ್ಪತ್ರೆಗೆ ಕಳುಹಿಸಲಾಗುತ್ತದೆ ಎಂದರು.