ಚಾಮರಾಜನಗರ: ಪ್ರಜಾಪ್ರಭುತ್ವ ಬಲಿಷ್ಠಗೊಳ್ಳಲು ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಬೇಕು. ಒಂದೊಂದು ಮತವು ಸದೃಢ ಭಾರತ ನಿರ್ಮಾಣಕ್ಕೆ ಸಂಜೀವಿನಿಯಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ ತಿಳಿಸಿದರು. ತಾಪಂ ಸ್ವೀಪ್ ಸಮಿತಿ ವತಿಯಿಂದ ತಾಲೂಕಿನ ಮುಳ್ಳೂರು ಗ್ರಾಪಂಯಲ್ಲಿ ಲೋಕಸಭಾ ಚುನಾವಣಾ-2024ರ ಅಂಗವಾಗಿ ಸಾರ್ವಜನಿಕರಿಗೆ ಮತದಾನ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಅಲಂಕರಿಸಿದ ಎತ್ತಿನಗಾಡಿ ಜಾಥಾವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮತದಾನ ನಮ್ಮ ಹಕ್ಕು. ಯಾರು ಸಹ ಮತದಾನದಿಂದ ದೂರ ಉಳಿಯದೇ ತಪ್ಪದೇ ಮತ ಚಲಾಯಿಸಬೇಕು. ಪ್ರಜಾಪ್ರಭುತ್ವದ ಹಬ್ಬವನ್ನು ಎಲ್ಲರೂ ಮತ ಚಲಾಯಿಸುವ ಮೂಲಕ ಆಚರಿಸಬೇಕು. ಪ್ರತೀ ಐದು ವರ್ಷಕ್ಕೆ ಒಮ್ಮೆ ಮಾತ್ರ ಬರುವ ಚುನಾವಣೆಯಲ್ಲಿ ಅಭಿವೃದ್ಧಿ ಪರವಾಗಿ ಕೆಲಸಗಳನ್ನು ಮಾಡುವ ಉತ್ತಮ ವ್ಯಕ್ತಿಯನ್ನು ಆರಿಸಿಕೊಳ್ಳಿ ಎಂದರು.
ಎತ್ತಿನಗಾಡಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಚುನಾವಣಾ ಯುವ ರಾಯಭಾರಿಗಳಾದ ಬಿಗ್‌ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ಚಾಲನೆ ನೀಡಿ ಮಾತನಾಡಿ, ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಪ್ರಬುದ್ಧ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಕಡ್ಡಾಯ ಮತದಾನ ಮಾಡುವುದನ್ನು ಮರಿಯಬೇಡಿ ಎಂದರು. ಮತೋರ್ವ ರಾಯಭಾರಿ ಸಮತಾ ಸಮಾಜದ ಅಧ್ಯಕ್ಷರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಾದ ದೀಪಾ ಬುದ್ದೇ ಅವರು ಮತದಾನ ಮಾಡುವುದು ಬಹಳ ಪವಿತ್ರ ಕೆಲಸ. ನಮ್ಮ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಒಬ್ಬ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲು ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ತಿಳಿಸಿದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ, ಸಹಾಯಕ ನಿರ್ದೇಶಕ ಗೋಪಾಲ್ ಕೃಷ್ಣ, ಗ್ರಾಪಂ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಸಂಜೀವಿನಿ ಯೋಜನೆಯ ಒಕ್ಕೂಟದ ಸದಸ್ಯರು ಇದ್ದರು.