ಸದೃಢ ಪ್ರಜಾಪ್ರಭುತ್ವಕ್ಕಾಗಿ ತಪ್ಪದೇ ಮತದಾನ ಮಾಡಿ: ಪನ್ವಾರ

KannadaprabhaNewsNetwork | Published : Apr 25, 2024 1:03 AM

ಸಾರಾಂಶ

ಯಾದಗಿರಿ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದ ಜನ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಸದೃಢ ಹಾಗೂ ಆರೋಗ್ಯಕರ ಪ್ರಜಾಪ್ರಭುತ್ವ ಉಳಿಸಿ, ಬೆಳೆಸಲು ಪ್ರತಿಯೊಬ್ಬ ಮತದಾರರು ಮೇ 7ರಂದು ತಪ್ಪದೇ ಮತದಾನ ಮಾಡಬೇಕೆಂದು ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಗರಿಮಾ ಪನ್ವಾರ ವಲಸೆ ಕೂಲಿಕಾರರು ಹಾಗೂ ರೈಲ್ವೆ ಪ್ರಯಾಣಿಕರಲ್ಲಿ ಮನವಿ ಮಾಡಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಸ್ವೀಪ್ ಚಟುವಟಿಕೆಗಳಡಿ ನಗರದ ರೈಲ್ವೆ ನಿಲ್ದಾಣದಲ್ಲಿ ಮತದಾರರಿಗೆ ಮತದಾನ ಜಾಗೃತಿ ಹಾಗೂ ನರೇಗಾ ಯೋಜನೆಯ "ವಲಸೆ ಯಾಕ್ರೀ ನಿಮ್ಮೂರಲ್ಲೆ ಉದ್ಯೋಗ ಖಾತ್ರಿಯ ದುಡಿಮೆ ಖಾತ್ರಿ " ವಿಶೇಷ ಅಭಿಯಾನದಡಿ ನಡೆದ ಜನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆರೋಗ್ಯಕರ ಪ್ರಜಾಪ್ರಭುತ್ವ ಉನ್ನತ ರಾಜಕೀಯ ಭಾಗವಹಿಸುವಿಕೆಯ ಮೇಲೆ ಅವಲಂಬಿತವಾಗಿದೆ ಎಂಬ ಸಂದೇಶವನ್ನು ನಾವು ಹರಡಬೇಕಾಗಿದೆ. ಮತದಾನ ಕೇವಲ ಸಾಂವಿಧಾನಿಕ ಹಕ್ಕು ಮಾತ್ರವಲ್ಲ. ನೈತಿಕ ಕರ್ತವ್ಯ ಎಂಬುದನ್ನು ಎಲ್ಲ ಮತದಾರರು ಅರಿತು ಮತದಾನ ಮಾಡಬೇಕು ಎಂದರು

ಮತದಾನಕ್ಕಿಂತ ಮುಖ್ಯವಾದದು ಮತ್ತೊಂದಿಲ್ಲ. ಖಂಡಿತ ಮತ ಹಾಕುತ್ತೇನೆ ಎಂಬುದು ಈ ವರ್ಷದ ಸ್ವೀಪ್‌ನ ಘೋಷವಾಕ್ಯವಾಗಿದ್ದು, ಚುನಾವಣಾ ದಿನ ದೇಶದ ಪ್ರಜಾಪ್ರಭುತ್ವ ಆಚರಿಸುವ ದಿನವಾಗಿದೆ ಮತ್ತು ಅದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ನೈತಿಕ ಮತದಾನದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ ಮಾತನಾಡಿ, ಕೂಲಿ ಕೆಲಸಕ್ಕಾಗಿ ದೂರದ ನಗರ, ಪಟ್ಟಣಗಳಿಗೆ ವಲಸೆ ಹೋಗದೆ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿ, ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ನರೇಗಾ ಕಾಮಗಾರಿ ಕೆಲಸ ಮಾಡುವ ಪ್ರಮಾಣದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಶೇ.30 ಹಾಗೂ ಜೂನ್ ತಿಂಗಳಲ್ಲಿ ಶೇ.20ರಷ್ಟು ವಿನಾಯ್ತಿ ನೀಡಿದ್ದು, ಇದರ ಸದುಪಯೋಗ ಪಡೆದು ಕೂಲಿ ಕೆಲಸ ಮಾಡುವಂತೆ ತಿಳಿಸಿದರು.

ರೈಲ್ವೆ ನಿಲ್ದಾಣದ ಪ್ಲಾಟ್ ಪಾರ್ಮ್ ನಲ್ಲಿ ಮತದಾನ ಜಾಗೃತಿ ಕುರಿತು ಅರಿವು ಮೂಡಿಸುವ ಬ್ಯಾನರ್ ಹಿಡಿದು ಕಾಲ್ನಡಿಗೆ ಜಾಥಾ ಮಾಡಲಾಯಿತು.

ಬಳಿಕ ಚುನಾವಣಾ ಜಾಗೃತಿ ಕರಪತ್ರ ಬಿಡುಗಡೆ ಮಾಡಿ, ಮೇ 7ರಂದು ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಮತದಾರರಿಗೆ ಮತದಾನ ಆಹ್ವಾನ ಪತ್ರಿಕೆ ನೀಡಿ, ಮತ ಹಾಕುವಂತೆ ಮನವಿ ಮಾಡಿದರು. ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗುರುನಾಥ ಗೌಡಪ್ಪನೋರ, ಜಿಲ್ಲಾ ಯೋಜನಾ ಅಂದಾಜು ಹಾಗೂ ಮೌಲ್ಯಮಾಪನ ಅಧಿಕಾರಿ ಕುಮಲಯ್ಯ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರವೀಣ ಕುಮಾರ, ವಿಲಾಶರಾಜ್, ಮಲ್ಲಿಕಾರ್ಜುನ ಸಂಗ್ವಾರ ಸೇರಿದಂತೆ ಇತರರಿದ್ದರು.

ದಿನಗೂಲಿ 349 ರುಪಾಯಿ ಗೆ ಹೆಚ್ಚಳ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಏ.1ರಿಂದ ನರೇಗಾ ಯೋಜನೆಯಡಿ ಕೂಲಿಕೆಲಸ ಮಾಡುವ ಕೂಲಿಕಾರರ ದಿನದ ಕೂಲಿ 316 ರು.ಗಳಿಂದ 349 ರು.ಗಳಿಗೆ ಹೆಚ್ಚಳ ಮಾಡಿದ್ದು, ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೂ ನೂರು ದಿನಗಳ ಅಕುಶಲ ಕೂಲಿ ಕೆಲಸದ ಖಾತ್ರಿ ನೀಡಿದ್ದು, ಒಂದು ಕುಟುಂಬ ನೂರು ದಿನ ಕೆಲಸ ಮಾಡಿದರೆ 34,900 ರು.ಗಳ ಕೂಲಿ ಹಣ ಪಡೆದುಕೊಳ್ಳಬಹುದು ಎಂದು ಬಿ.ಎಸ್. ರಾಠೋಡ ತಿಳಿಸಿದರು.

Share this article