ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಜಾಥಾ । ಮಾನವ ಸರಪಳಿ ರಚನೆ । ಮತದಾನ ಜಾಗೃತಿ
ಕನ್ನಡಪ್ರಭ ವಾರ್ತೆ ಬೇಲೂರುಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಮತದಾನದ ಪ್ರಮಾಣ ಹೆಚ್ಚಳವಾಗಬೇಕು. ಮತದಾರರು ಯಾವುದೇ ಆಮಿಷಕ್ಜೆ ಒಳಾಗದೆ ನಿರ್ಭಿತಿಯಿಂದ ಮತದಾನ ಮಾಡಬೇಕು. ಮತದಾನದ ಮಹತ್ವವನ್ನು ತಿಳಿಸುವ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿಯ ವತಿಯಿಂದ ಕಾಲ್ನಡಿಗೆ ಜಾಥಾವನ್ನು ಹಮ್ನಿಕೊಳ್ಳಲಾಗಿದೆ ಎಂದು ಬೇಲೂರು ತಹಸೀಲ್ದಾರ್ ಎಂ. ಮಮತ ಹೇಳಿದರು.
ಚನ್ನಕೇಶವ ದೇಗುಲದಿಂದ ಸ್ವೀಪ್ ಸಮಿತಿಯ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಈ ಕಾರ್ಯಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದಾರೆ. ಪಂಚಾಯತ ಅಧಿಕಾರಿಗಳು ಆಗಮಿಸಿದ್ದು ಅವರು ತಮ್ಮ ವ್ಯಾಪ್ತಿಯಲ್ಲಿ ಮತದಾನ ನಡೆಯುವ ದಿನಾಂಕದ ತನಕ ಜಾಥಾವನ್ನು ನಡೆಸಿ ಮತದಾನದ ಅರಿವು ಮೂಡಿಸಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಶ್ರೇಷ್ಠ ಸ್ಥಾನ ಮಾನ ಕಲ್ಪಿಸಿದೆ. ಬಡವ, ಶ್ರೀಮಂತ, ಶ್ರೇಷ್ಠ ಎನ್ನದೆ ಎಲ್ಲರಗೂ ಸಮಾನತೆಯಿಂದ ಮತದಾನದ ಅವಕಾಶ ನೀಡಿದೆ. ಪ್ರತಿಯೊಬ್ಬ ನಾಗರಿಕರು ತಮ್ಮ ಜವಾಬ್ದಾರಿ ಅರಿತು ಮತಗಟ್ಟೆಯ ಬಳಿ ತೆರಳಿ ಮತದಾನ ನಡೆಸಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯತ ಕಾರ್ಯಾನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಸತೀಶ್ ಮಾತನಾಡಿ, ಮತದಾನ ಒಂದು ಪವಿತ್ರ ಕಾರ್ಯ, ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ತಿಳಿದವರೇ ಮತದಾನದಿಂದ ದೂರ ಇರುವುದು ನಿಜಕ್ಕೂ ಶೋಚನೀಯ. ಪ್ರತಿಯೊಬ್ಬರು ಕೂಡ ಮತದಾನ ನಡೆಸಬೇಕು ಎಂದು ಚುನಾವಣೆ ಆಯೋಗದ ಮಾರ್ಗದರ್ಶನ ಪಡೆದು ಬೇಲೂರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮತದಾನ ಜಾಗೃತಿ ಅಭಿಯಾನವನ್ನು ಕಾಲ್ನಡಿಗೆ ನಡೆಸುವ ಮೂಲಕ ಪಟ್ಟಣದ ಹೃದಯ ಭಾಗದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.ಮತದಾನದ ಮಹತ್ವವನ್ನು ಜನರು ಅರ್ಥಮಾಡಿಕೊಳ್ಳಲು ಮತದಾನ ಜಾಗೃತಿಯ ಪರಿಕಲ್ಪನೆಯಾಗಿದೆ. ಮತದಾರರು ತಮ್ಮ ಸರ್ಕಾರವನ್ನು ನಿಯಂತ್ರಿಸಲು ಮತದಾನವು ಒಂದು ಪ್ರಮುಖ ಮಾರ್ಗವಾಗಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ನಾಗರಿಕರು ತಮ್ಮ ನಾಯಕರಿಂದ ತಮಗೆ ಬೇಕಾದುದನ್ನು ವ್ಯಕ್ತಪಡಿಸಲು ಇದು ಒಂದು ವಿಧಾನವಾಗಿದೆ ಎಂದರು.
ಪುರಸಭಾ ಮತ್ತು ತಾಲೂಕು ಪಂಚಾಯಿತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.ಬೇಲೂರು ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಅರಿವು ಮೂಡಿಸಿದರು.