ಮತದಾನ ಹೆಚ್ಚಳಕ್ಕೆ ಗ್ಯಾರಂಟಿ ಯೋಜನೆ ಕಾರಣ: ಮಧು ಬಂಗಾರಪ್ಪ

KannadaprabhaNewsNetwork | Published : May 9, 2024 1:01 AM

ಸಾರಾಂಶ

ಮತದಾನ ಹೆಚ್ಚಳಕ್ಕೆ ರಾಜ್ಯ ಸರ್ಕಾರದ ಗ್ಯಾರಂಟಿಗಳು ಹಾಗೂ ಕೇಂದ್ರ ಕಾಂಗ್ರೆಸ್ಸಿನ ಗ್ಯಾರಂಟಿಗಳ ಆಶ್ವಾಸನೆಗಳು ಕೂಡ ಕಾರಣವಾಗಿವೆ. ಮತದಾರ ಮತ್ತು ಕಾಂಗ್ರೆಸ್ ನಡುವೆ ಬಾಂಧವ್ಯದ ಬೆಸುಗೆಯಾಗಿದೆ. ಈ ಎಲ್ಲಾ ಕಾರಣಗಳಿಂದ ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಅತ್ಯಂತ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುತ್ತಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮತದಾನ ಪ್ರಮಾಣ ಹೆಚ್ಚಾಗಲು ಸರ್ಕಾರದ ಗ್ಯಾರಂಟಿ ಯೋಜನೆ ಕಾರಣ. ಇದು ಕಾಂಗ್ರೆಸ್ ಗೆಲುವಿಗೆ ಕಾರಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ನಿರೀಕ್ಷೆಗೂ ಮೀರಿ ನಮಗೆ ಮತ ಬರುವ ವಿಶ್ವಾಸ ಇದೆ. ಗ್ಯಾರಂಟಿಗಳ ಬಗ್ಗೆ ಮತದಾರನಿಗೆ ಮನವರಿಕೆ ಮಾಡಿಕೊಂಡಿದ್ದೆವು. ಆ ವಿಶ್ವಾಸದಿಂದಲೇ, ಹೆಮ್ಮೆಯಿಂದಲೇ ಮತ ಕೇಳಿದ್ದೆವು. ಇದು ನಮ್ಮನ್ನು ಗೆಲುವಿಗೆ ಕೊಂಡೊಯ್ಯುತ್ತದೆ ಎಂದರು.

ಈ ಬಾರಿಯ ಮತದಾನ ದಾಖಲೆಯಾಗಿದೆ. ಈ ಮತದಾನ ಹೆಚ್ಚಳಕ್ಕೆ ರಾಜ್ಯ ಸರ್ಕಾರದ ಗ್ಯಾರಂಟಿಗಳು ಹಾಗೂ ಕೇಂದ್ರ ಕಾಂಗ್ರೆಸ್ಸಿನ ಗ್ಯಾರಂಟಿಗಳ ಆಶ್ವಾಸನೆಗಳು ಕೂಡ ಕಾರಣವಾಗಿವೆ. ಮತದಾರ ಮತ್ತು ಕಾಂಗ್ರೆಸ್ ನಡುವೆ ಬಾಂಧವ್ಯದ ಬೆಸುಗೆಯಾಗಿದೆ. ಈ ಎಲ್ಲಾ ಕಾರಣಗಳಿಂದ ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಅತ್ಯಂತ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿಯ ಬಣ್ಣ ಈ ಚುನಾವಣೆಯಲ್ಲಿ ಬಯಲಾಗಿದೆ. ಧರ್ಮ ಹಾಗೂ ಭಾವನೆ ಆಧಾರದಲ್ಲಿ ಚುನಾವಣೆಗಳು ನಡೆಯುವುದಿಲ್ಲ ಎಂಬುವುದು ಸಾಬೀತಾಗಿದೆ. ಬಡವರಿಗೆ ಬೇಕಾಗಿರುವುದು ಬದುಕು, ನಮ್ಮದು ಜೀವಪರ ಯೋಜನೆಗಳು. ಗ್ಯಾರಂಟಿಗಳಿಂದ ಯಾರೂ ಹಾಳಾಗುವುದಿಲ್ಲ. ದೇಶದ ಆರ್ಥಿಕತೆಯು ಕುಸಿತವಾಗುವುದಿಲ್ಲ. ಗ್ಯಾರಂಟಿಯಿಂದಾಗಿ ಹಣ ಮತ್ತೆ ಸಮುದಾಯದಲ್ಲಿಯೇ ವೆಚ್ಚಾಗುವುದರಿಂದ ಆರ್ಥಿಕತೆ ಬೆಳೆಯುತ್ತದೆ. ಈ ಸೂಕ್ಷ್ಮತೆ ಬಿಜೆಪಿಯರಿಗೆ ಅರ್ಥವಾಗದೆ ಗ್ಯಾರಂಟಿಯಿಂದ ಆರ್ಥಿಕತೆ ನಾಶವಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿ, ನಮ್ಮ ಬೂತ್ ನಮ್ಮ ಜವಬ್ದಾರಿಯ ಹಿನ್ನಲೆಯಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡರು ದೊಡ್ಡವರು, ಸಣ್ಣವರು ಎನ್ನದೇ ತಮ್ಮ ತಮ್ಮ ವಾರ್ಡ್‍ಗಳಲ್ಲಿ ಕೆಲಸ ಮಾಡಿದ್ದಾರೆ. ಎಲ್ಲಾ ಮುಖಂಡರು ಇದರಲ್ಲಿ ಭಾಗವಹಿಸಿದ್ದರು. ಕಾರ್ಯಕರ್ತರು, ಮುಖಂಡರು, ಮತದಾರರು, ಎಲ್ಲರಿಗೂ ಅಭಿನಂದನೆಗಳು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆಯನೂರು ಮಂಜುನಾಥ್, ಆರ್.ಎಂ. ಮಂಜುನಾಥ ಗೌಡ, ಎಂ. ಶ್ರೀಕಾಂತ್, ಕಲಗೋಡು ರತ್ನಾಕರ್, ಡಾ.ಶ್ರೀನಿವಾಸ ಕರಿಯಣ್ಣ, ಎಸ್.ಕೆ. ಮರಿಯಪ್ಪ, ಕಲೀಂ ಪಾಶಾ, ಜಿ.ಡಿ.ಮಂಜುನಾಥ್, ವೈ.ಎಚ್. ನಾಗರಾಜ್, ಎಚ್.ಪಿ. ಗಿರೀಶ್, ಎಸ್.ಪಿ. ಶೇಷಾದ್ರಿ ಇದ್ದರು.ಪ್ರತಿಯೊಬ್ಬರಿಗೂ ಅಭಿಮಾನದ ಕೃತಜ್ಞತೆಗಳು

ಕಾಂಗ್ರೆಸ್ಸಿನ ಹಾಲಿ ಶಾಸಕರು, ಮಾಜಿ ಶಾಸಕರು, ಜಿ.ಪಂ., ತಾ.ಪಂ., ಪಾಲಿಕೆ, ಪಟ್ಟಣ, ನಗರ ಹೀಗೆ ಸ್ಥಳೀಯ ಸಂಸ್ಥೆಯ ಎಲ್ಲಾ ನಾಯಕರಿಗೆ ಮುಖಂಡರಿಗೆ ವಿಶೇಷವಾಗಿ ಮಹಿಳಾ ಘಟಕಕ್ಕೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರು ಶಿವಮೊಗ್ಗಕ್ಕೆ ಬಂದು ಮತ ಕೇಳಿದ್ದಾರೆ. ಪ್ರತಿಯೊಬ್ಬರಿಗೂ ಅಭಿಮಾನದ ಕೃತಜ್ಞತೆಗಳು. ಚುನಾವಣೆ ಮುಗಿದಿದೆ, ಶಿವರಾಜ್‍ಕುಮಾರ್ ಅವರು ಸ್ವಲ್ಪ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿದ್ದಾರೆ. ಹಾಗಾಗಿ ಗೀತಾ ಬರಲು ಆಗಲಿಲ್ಲ. ಇನ್ನು 5 ದಿನ ಕಳೆದ ನಂತರ ಶಿವಮೊಗ್ಗಕ್ಕೆ ಬರುತ್ತಾರೆ.

-ಮಧು ಬಂಗಾರಪ್ಪ, ಶಿಕ್ಷಣ ಸಚಿವ.

Share this article