ಬೆಂಗಳೂರು: ಉತ್ತರ ಕ್ಷೇತ್ರದಲ್ಲಿ ಮತದಾನ ಮತ್ತಷ್ಟು ಇಳಿಕೆ

KannadaprabhaNewsNetwork | Updated : Apr 27 2024, 08:32 AM IST

ಸಾರಾಂಶ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.

 ಬೆಂಗಳೂರು :  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.

ಆದರೆ, ಮತದಾನ ಪ್ರಮಾಣ ಕಳೆದ ಲೋಕಸಭಾ ಚುನಾವಣೆಗಿಂತ ಕಡಿಮೆಯೇ ಆಗಿದೆ. ಈ ಬಾರಿ ಮತದಾನ ಪ್ರಮಾಣ ಶೇ.54.42. ಕಳೆದ 2019ರ ಚುನಾವಣೆಯಲ್ಲಿ ನಡೆದ ಮತದಾನ ಶೇ.54.76. ಅಂದರೆ, ಶೇ.0.34ರಷ್ಟು ಮತದಾನ ಇಳಿಕೆಯಾಗಿದೆ.

ಬೆಳಗ್ಗೆ ವಾತಾವರಣ ತಂಪಾಗಿದ್ದ ಹಿನ್ನೆಲೆಯಲ್ಲಿ ವೃದ್ಧರು, ಮಹಿಳೆಯರು, ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಧಾವಿಸಿ ತಮ್ಮ ಹಕ್ಕು ಚಲಾಯಿಸಿದರು. ಬೆಳಗ್ಗೆ 9ರ ವೇಳೆಗೆ ಮತಗಟ್ಟೆಗಳ ಬಳಿ ಮತದಾರರ ಉದ್ದದ ಸರತಿ ಸಾಲುಗಳು ಇದ್ದವು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಬ್ಬಾಳ, ಬ್ಯಾಟರಾಯನಪುರ, ಕೆ.ಆರ್‌.ಪುರ, ಪುಲಕೇಶಿನಗರ, ಮಲ್ಲೇಶ್ವರ, ಮಹಾಲಕ್ಷ್ಮಿ ಲೇಔಟ್‌, ಯಶವಂತಪುರ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.

ಮತಗಟ್ಟೆಗಳ ಬಳಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರ ಮತ ಹಾಕುವಂತೆ ಸಾರ್ವಜನಿಕರ ಬಳಿ ಕೈ ಮುಗಿದು ಮನವಿ ಮಾಡುವ ದೃಶ್ಯಗಳು ಕಂಡು ಬಂದಿದವು. ಕೆಲ ಮತಗಟ್ಟೆಗಳ ಬಳಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಪೈಪೋಟಿ ಮೇಲೆ ಮತದಾರರನ್ನು ಮಾತನಾಡಿಸಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಕೋರುತ್ತಿದ್ದರು. ಸುಡು ಬಿಸಿಲನ್ನೂ ಲೆಕ್ಕಸದೆ ಮತದಾರರು ಕುಟುಂಬ ಸಮೇತ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ಇನ್ನು ಮತಚಲಾಯಿಸಲು ಮತಗಟ್ಟೆ ಬಳಿ ಬರುವ ಅಂಗವಿಕಲರ ಅನುಕೂಲಕ್ಕಾಗಿ ಗಾಲಿ ಖುರ್ಚಿ ವ್ಯವಸ್ಥೆ ಮಾಡಲಾಗಿತ್ತು. ಅಂತೆಯೆ ಅಂಗವಿಕಲರು, ವೃದ್ಧರಿಗೆ ನೆರವಾಗಲು ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರತಿ ಮತಗಟ್ಟೆಯ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಕೆಲ ಮತಗಟ್ಟೆಗಳ ಬಳಿ ಕಾರ್ಯಕರ್ತರ ನಡುವೆ ಮಾತಿಕಚಕಮಕಿ ಹೊರತುಪಡಿಸಿ ಬಹುತೇಕ ಶಾಂತಿಯುತ ಮತದಾನ ನಡೆಯಿತು.

ಮತ ಹಾಕದವರು ಮೂರ್ಖರು:

ಜಾಲಹಳ್ಳಿಯ ಸೇಂಟ್‌ ಕ್ಲಾರೆನ್ಸ್ ಶಾಲೆಯ ಮತಗಟ್ಟೆಗೆ ಮುಮ್ಮಗಳ ಜತೆಗೆ ಬಂದಿದ್ದ 77 ವರ್ಷದ ಪುಟ್ಟ ಎಂಬ ವೃದ್ಧೆ ಮತಚಲಾಯಿಸಿ ಸಂಭ್ರಮಿಸಿದರು. ಮತದಾನ ಮಾಡುವುದು ನಮ್ಮ ಹಕ್ಕು. ಎಲ್ಲರೂ ಮತದಾನ ಮಾಡಬೇಕು. ಮತದಾನ ಮಾಡದವರು ಮೂರ್ಖರು ಎಂದು ಹೇಳಿದರು.ಡಿವಿಎಸ್‌, ಶೋಭಾ ಒಂದೇಮತಗಟ್ಟೆಯಲ್ಲಿ ಮತಚಲಾವಣೆ

ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಆರ್‌ಎಂಬಿ ಕ್ಲಬ್‌ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಪತ್ನಿ ಜತೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಇದೇ ಮತಗಟ್ಟೆಯಲ್ಲಿ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ ಚಲಾಯಿಸಿದರು. ಈ ವೇಳೆ ಸದಾನಂದಗೌಡರ ಕಾಲಿಗೆ ಶೋಭಾ ಕರಂದ್ಲಾಜೆ ನಮಸ್ಕರಿಸಿದರು. ಬೆಳಗ್ಗೆಯಿಂದಲೇ ಭಾರೀ ಸಂಖ್ಯೆಯಲ್ಲಿ ಜನರು ಮತ ಚಲಾವಣೆಗೆ ಸರತಿ ಸಾಲಿನಲ್ಲಿ ನಿಂತಿರುವುದಕ್ಕೆ ಸದಾನಂದಗೌಡ ಮತ್ತು ಶೋಭಾ ಕರಂದ್ಲಾಜೆ ಹರ್ಷ ವ್ಯಕ್ತಪಡಿಸಿದರು.ಮತದಾರರ ಪಟ್ಟಿಯಲ್ಲಿ ಹೆಸರೇ ಇಲ್ಲ!

ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದ ಎಚ್‌ಎಂಟಿ ಲೇಔಟ್‌ ಗಂಗಾನಗರ ನಿವಾಸಿ ವಸಿಮುಲ್ಲಾ ಖಾನ್‌ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತಚಲಾಯಿಸಿದ್ದೇನೆ. ಆದರೆ, ಈಗ ಮತದಾರರಪಟ್ಟಿಯಲ್ಲಿ ನನ್ನ ಹೆಸರು ಡಿಲೀಟ್‌ ಆಗಿದೆ ಎಂದು ಪೋಲಿಂಗ್‌ ಅಧಿಕಾರಿ ಹೇಳುತ್ತಿದ್ದಾರೆ. ನನ್ನ ಮನೆಯ ಸದಸ್ಯರ ಹೆಸರಿದೆ. ನನ್ನ ಹೆಸರಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ಕಳೆದ 30 ವರ್ಷದಿಂದ ಈ ಏರಿಯಾದಲ್ಲಿ ನೆಲೆಸಿದ್ದೇನೆ. ಸಂಜೆ ವರೆಗೂ ಇಲ್ಲೇ ಕಾಯುತ್ತೇನೆ. ನಾನು ಮತ ಚಲಾಯಿಸಲೇಬೇಕು ಎಂದು ಮತಗಟ್ಟೆ ಬಳಿ ಪಟ್ಟು ಹಿಡಿದು ಕುಳಿತ್ತಿದ್ದರು.ಅಮೆರಿಕದಿಂದ ಬಂದು ಮತ ಚಲಾವಣೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವಿದ್ಯಾರಣ್ಯಪುರದ ಗಣೇಶ್‌ ಗುರುಮೂರ್ತಿ ಅಮೆರಿಕದಿಂದ ಬಂದು ಎಂಇಎಸ್‌ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಗಣೇಶ್‌, ಕಳೆದ 12 ವರ್ಷಗಳಿಂದ ಅಮೆರಿಕದಲ್ಲಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೂರದ ಅಮೆರಿಕದಿಂದ ನಗರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ‘ಪ್ರತಿ ಮತವೂ ಮುಖ್ಯ. ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಅಮೇರಿಕದಿಂದ ಬಂದು ಮತ ಚಲಾಯಿಸಿದ್ದೆ. ನಾವು ಬೇರೆ ದೇಶದಲ್ಲಿ ಇದ್ದರೂ ನಮ್ಮ ಭಾರತ ದೇಶ ಮುಖ್ಯ. ಹೀಗಾಗಿ ಅಮೆರಿಕದಿಂದ ಬಂದು ಮತ ಚಲಾಯಿಸಿದ್ದೇನೆ’ ಎಂದು ಗಣೇಶ್‌ ಗುರುಮೂರ್ತಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

Share this article