ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಚಾಮರಾಜನಗರ ಲೋಕಸಭಾ ಕ್ಷೇತ್ರದ ಜನರು ತಲೆ ತಗ್ಗಿಸುವ ಕೆಲಸವನ್ನು ನಾನು ಎಂದಿಗೂ ಮಾಡಲಾರೆ. ನಾನು ಚುನಾವಣೆಗಳಲ್ಲಿ ಸ್ಪರ್ಧಿಸದಿದ್ದರೂ ಕಳೆದ 20 ವರ್ಷಗಳಿಂದಲೂ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಿದ್ದೆನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಹೇಳಿದರು.ಕುಂತೂರು ಗ್ರಾಪಂ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ನಾನು 2008ರಲ್ಲಿ ರಾಜಕೀಯದಲ್ಲಿ ಗುರುತಿಸಿಕೊಂಡೆ. ನರಸೀಪುರ ಕ್ಷೇತ್ರದಲ್ಲಿನ ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಾನು ಮತದಾರರು ಮತ್ತು ಸಚಿವ ಮಹದೇವಪ್ಪ ಅವರ ನಡುವೆ ಸೇತುವೆಯಾಗಿದ್ದೆ. ಈ ಚುನಾವಣೆ ಸ್ಪರ್ಧೆ ನನಗೆ ಹೊಸದು, ಆದರೆ ರಾಜಕೀಯ ಹೊಸದೇನೂ ಅಲ್ಲ ಎಂದರು.
ನಾನು 3 ಬಾರಿ ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಕಾರಣಾಂತರಗಳಿಂದ ನನಗೆ ಟಿಕೆಟ್ ಸಿಕ್ಕಿರಲಿಲ್ಲ. ಈ ಹಿನ್ನೆಲೆ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ನನ್ನ ಸೇವೆ ಗುರುತಿಸಿ ಲೋಕಸಭೆಯಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮ ತಂದೆ 4 ಬಾರಿ ಮಂತ್ರಿಯಾಗಿ ರಾಜ್ಯದ ಉದ್ದಗಲಕ್ಕೂ ಅಭಿವೃದ್ಧಿಗೆ ಸ್ಪಂದಿಸಿದ್ದಾರೆ. ಅವರಂತೆ ನಾನು ಈ ಕ್ಷೇತ್ರದ ಜನರ ಮನೆಯ ಮಗನಂತೆ ಸ್ಪಂದಿಸುವೆ ಎಂದರು.ಅಧಿಕ ಮತಗಳಿಂದ ಗೆಲ್ಲಿಸಿ:
ನನಗೆ ಗೆಲ್ಲಿಸಿದಂತೆ ಸುನೀಲ್ ಬೋಸ್‌ರನ್ನು 1 ಲಕ್ಷಕ್ಕೂ ಅಧಿಕ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಸಿಎಂ ಸಿದ್ದರಾಮಯ್ಯ ಜನಪರ ಕೆಲಸ ಮಾಡುತ್ತಿದ್ದು ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಲು ಅವಕಾಶ ಮಾಡಿಕೊಟ್ಟಿದ್ದಾರೆ. ರಾಜ್ಯದ ಗ್ಯಾರಂಟಿ ಯೋಜನೆಗೆ ಬೆಂಬಲಿಸುವ ಮೂಲಕ ಕಾಂಗ್ರೆಸ್ ಗೆಲ್ಲಿಸಿ ಎಂದರು.ಕೇಂದ್ರ ಬಿಜೆಪಿ ಶ್ರೀಮಂತರ ಪರವಿದ್ದು ಬಡವರ ವಿರೋಧಿ ಪಕ್ಷವಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ ಎಂದು ಮನವಿ ಮಾಡಿದರು. ಲೋಕಸಭೆ ಚುನಾವಣೆ ಫಲಿತಾಂಶ ಮುಂಬರುವ ತಾಲೂಕು, ಜಿಪಂ ಚುನಾವಣೆಗೆ ದಿಕ್ಸೂಚಿಯಾಗಿದೆ. ಬಿಜೆಪಿ ಮತದಾರರ ಮುಂದೇ ಹೇಳಿದಂತೆ ನಡೆದುಕೊಂಡಿಲ್ಲ. ರಾಜ್ಯಕ್ಕೆ ಕೇಂದ್ರದ ಬಿಜೆಪಿ ಕೊಡುಗೆ ಶೂನ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಗ್ರಾಣ ನಿಗಮ ರಾಜ್ಯಧ್ಯಕ್ಷ, ಮಾಜಿ ಶಾಸಕ ಎಸ್.ಜಯಣ್ಣ, ಬ್ಲಾಕ್ ಅಧ್ಯಕ್ಷ ತೋಟೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು, ಉಪಾಧ್ಯಕ್ಷೆ ರಾಜೇಂದ್ರ ಮೋಳೆ, ಕೆಪಿಸಿಸಿ ರಾಜ್ಯ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಜಿ.ಸಿ.ಕಿರಣ್, ಮುಖಂಡ ಕಿನಕಹಳ್ಳಿ ರಾಚಯ್ಯ, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ನಿವೃತ್ತ ತಹಸೀಲ್ದಾರ್ ಮಹದೇವಯ್ಯ, ಓಲೆ ಮಹದೇವ, ಶಶಿಕಲಾ ನಾಗರಾಜು, ಡಿ.ಎನ್.ನಟರಾಜು, ರಾಚಯ್ಯ ಇದ್ದರು.ಇಬ್ಬರು ಬಿಜೆಪಿ ಮುಗಿಸಲು ನಿಂತಿದ್ದಾರೆ ಕುಂತೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶಾಸಕ ಕೃಷ್ಣಮೂರ್ತಿ, ಮಾಜಿ ಸಚಿವ ಎನ್ ಮಹೇಶ್ ಮತ್ತು ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಅವರ ಹೆಸರನ್ನು ಉಲ್ಲೇಖಿಸದೇ ಆನೆ ಈಗ ಕಮಲಕ್ಕೆ ಹೋಗಿದೆ. ಅಂದೆ ನಾನು ಹೇಳಿದ್ದೆ ಕಾಡಾನೆಗೆ ನಾಡಿನಲ್ಲಿ ಜಾಗ ನೀಡಿದರೆ ಎಲ್ಲಾ ಮೇಯ್ದುಕೊಂಡು ಹೋಗುತ್ತೆ ಎಂದಿದ್ದೆ. ಆನೆ ಈಗ ಕಮಲ ಹಿಡಿದು ಹೋಗಿದೆ. ತಮ್ಮ ಸ್ವಜಾತಿಯವರನ್ನೆ ಲಘುವಾಗಿ ಟೀಕಿಸುವ ಹಂತಕ್ಕೆ ತಲುಪಿದೆ ಎಂದು ಮಾಜಿ ಸಚಿವ ಎನ್ ಮಹೇಶ್ ವಿರುದ್ಧ ಕಿಡಿಕಾರಿದರು. ತಾವಿರುವ ಸಮಾಜದ ಬಗ್ಗೆಯೇ ಲಘುವಾಗಿ ಮಾತನಾಡಿರುವುದು ಸರಿಯಲ್ಲ, ಆತನನ್ನು ನಿಮ್ಮ ಬೀದಿಗಳಿಗೆ ಸೇರಿಸದಿರಿ ಎಂದು ಖಂಡಿಸಿದರು.
ಬಿಜೆಪಿ ಪಕ್ಷದ ಅಭ್ಯರ್ಥಿ ಹಿಂದೆ ಯಾರಿದ್ದಾರೆ, ಆತನನ್ನು ನೋಡಿದರೆ ಮತ ಹಾಕಲು ಮನಸ್ಸು ಬರಲ್ಲ ಎಂದು ಬಾಲರಾಜು ಹೆಸರೇಳದೆ ಶಾಸಕರು ಕುಟುಕಿದರು. ಇಬ್ಬರು ಬಿಜೆಪಿ ಮುಗಿಸಲು ನಿಂತಿದ್ದಾರೆ. ಇದನ್ನು ಆರ್‌ಎಸ್ಎಸ್‌ನವರು ಅರ್ಥಮಾಡಿಕೊಳ್ಳಬೇಕು ಎಂದರು. ಈ ಚುನಾವಣೆಯಲ್ಲಿ ಮತದಾರರು ಗಿಲಿಟ್ ಮಾಡುವವರನ್ನು, ಮಿಮಿಕ್ರಿ ಮಾಡಿಕೊಂಡು ಹಾಡು ಹೇಳುವವರಿಗೆ ಮನ್ನಣೆ ನೀಡಬೇಡಿ. ಬಡವರ ಸೇವೆ ಮಾಡುವವರಿಗೆ ಬೆಂಬಲಿಸಿ ಎಂದರು.