ಬಿಜೆಪಿ ಹೇಳುವ ಸುಳ್ಳನ್ನು ಮತದಾರ ನಂಬಲ್ಲ: ಎನ್.ರಮೇಶ್

KannadaprabhaNewsNetwork | Published : Apr 4, 2024 1:02 AM

ಸಾರಾಂಶ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮತದಾರ ಸುಳ್ಳು ಹೇಳುವ ಬಿಜೆಪಿ ಪಕ್ಷವನ್ನು ದ್ವೇಷ ಮಾಡುತ್ತಿದ್ದಾನೆ. ಈ ಬಾರಿ ಖಂಡಿತ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸುಳುಗಳ ಮೇಲೆ ಗೆಲ್ಲಲು ಪ್ರಯತ್ನಿಸುತ್ತಿದೆ. ಆದರೆ ಅದು ಸಾಧ್ಯವೇ ಇಲ್ಲ. ಕೇಂದ್ರದ ಬಿಜೆಪಿ ಆಡಳಿತದಿಂದ ಸಂವಿಧಾನದ ಕಗ್ಗೊಲೆಯಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಿದೆ. ಗಾಂಧಿ, ಅಂಬೇಡ್ಕರ್ವಾದಿಗಳು, ಪ್ರಜಾಪ್ರಭುತ್ವ ವಾದಿಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತ ಬಂದಿದೆ ಎಂದು ದೂರಿದರು.

ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರ ಇರುವುದು ಅತ್ಯಂತ ಅಪಾಯಕಾರಿಯಾಗಿದೆ. ಇದರ ಜೊತೆಗೆ ಬಿಜೆಪಿ ಅತಿ ಭ್ರಷ್ಟ ಸರ್ಕಾರ ವಾಗಿದೆ. ಸುಳ್ಳುಗಳನ್ನು ಹೇಳುತ್ತಿದೆ, ಕಪ್ಪು ಹಣ ಬರಲಿಲ್ಲ. ಮಹಿಳೆಯರಿಗೆ ಸುರಕ್ಷತೆ ಇಲ್ಲ, ನ್ಯಾಯಾಂಗ ವ್ಯವಸ್ಥೆಯನ್ನೇ ಬುಡ ಮೇಲು ಮಾಡಿದ್ದಾರೆ, ಮಾಧ್ಯಮಗಳ ಮುಂದೆ ಮೋದಿಯವರು ಬರಲೇ ಇಲ್ಲ, ಸಂಪತ್ತು ಕ್ರೋಢೀಕರಣ ಮಾಡುವವರಿಗೆ ಬಿಜೆಪಿ ಬೆಂಬಲಿಸುತ್ತದೆ, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಹೊಸ ಭರವಸೆಗಳನ್ನು ಜನರಿಗೆ ನೀಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 5 ಗ್ಯಾರಂಟಿಗಳನ್ನು ಸಮರ್ಥ ವಾಗಿ ಅನುಷ್ಠಾನಗೊಳಿಸುವ ಮೂಲಕ ಮಾತು ಕೊಟ್ಟಂತೆ ನಡೆದಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳ ಜೊತೆಗೆ ರಾಹುಲ್ ಗಾಂಧಿಯವರು ಕೂಡ 10 ಗ್ಯಾರಂಟಿಗಳ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿಕಾರಿಪುರ ನಾಗರಾಜ್ ಗೌಡ ಮಾತನಾಡಿ, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ರೈತರಿಗೆ ಯಾವ ಸೌಲಭ್ಯವನ್ನು ನೀಡಲಿಲ್ಲ. ರಾಜ್ಯದಲ್ಲಿರುವ ಶರಾವತಿ ಮುಳುಗಡೆ, ಬಗರ್‌ಹುಕುಂ ರೈತರ ಸಮಸ್ಯೆಯನ್ನು ಬಗೆಹರಿಸಲಿಲ್ಲ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಚಂದ್ರ ಭೂಪಾಲ್, ಕಲಗೋಡು ರತ್ನಾಕರ್, ಮಂಜುನಾಥ್ ಬಾಬು, ಶಿವಾನಂದ್ ಎಲ್, ಸತ್ಯನಾರಾಯಣ ರಾವ್, ಮಧು, ನೇತ್ರಾವತಿ ಟಿ, ಸುವರ್ಣ ನಾಗರಾಜ್, ಹಾಲಪ್ಪ ಮತ್ತಿತರರು ಇದ್ದರು.

Share this article