ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಬಿಜೆಪಿಯ ಜನಪರ ಆಡಳಿತ ಹಾಗೂ ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಸರಿಯಾಗಿ ಭತ್ಯೆ ದೊರೆಯುತ್ತಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳ ಶುಲ್ಕ ವಿನಾಯಿತಿಯೂ ಜಾರಿಯಾಗಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸರ್ಕಾರ ಆಡಳಿತ ನಡೆಸುವುದನ್ನು ಬಿಟ್ಟು ಉಳಿದ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬರಗಾಲದಲ್ಲಿ ರೈತರಿಗೆ ಸಮರ್ಪಕ ಪರಿಹಾರ ನೀಡುತ್ತಿಲ್ಲ. ₹2,500 ಪರಿಹಾರ ನೀಡುವುದಾಗಿ ಹೇಳಿದ್ದಕ್ಕೆ ಆಕ್ರೋಶಗೊಂಡ ರೈತರು ಹೆಚ್ಚುವರಿ ಸೇರಿಸಿ ಸರ್ಕಾರಕ್ಕೆ ನೀಡಲು ಮುಂದಾಗುತ್ತಿದ್ದಾರೆ. ರೈತರ ಬಗ್ಗೆ ಯೋಚಿಸುವುದು ಬಿಟ್ಟು ಸ್ಟಿಂಗ್ ಆಪರೇಷನ್, ಎಸ್ಐಆರ್ ಬಗ್ಗೆ ಮಾತನಾಡುತ್ತ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರಂತಹ ನಾಯಕನ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಿ ಬೀದಿಗೆಳೆದು ಅವಮಾನಿಸಲಾಗುತ್ತಿದೆ. ಬಿಡದಿ ಟೌನ್ಶಿಪ್, ಬರ ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಎನ್ಇಪಿ ತೆಗೆದು ಎಸ್ಎಪಿ ತರುವ ಮೂಲಕ ವಿದ್ಯಾರ್ಥಿಗಳು, ಯುವಕರಿಗೆ ವಂಚಿಸಲಾಗುತ್ತಿದೆ. ಬಿಜೆಪಿ ಸರ್ಕಾರದ ಯೋಜನೆಗಳನ್ನು ಬದಿಗೊತ್ತಿ ರೈತರು, ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಗ್ಯಾರಂಟಿ ಬಗ್ಗೆ ಮಾತನಾಡುವ ಸರ್ಕಾರ ಒಂಬತ್ತು ತಿಂಗಳಿಂದ ವೃದ್ಧಾಪ್ಯ ವೇತನ ನೀಡಿಲ್ಲ; ವಿಶೇಷಚೇತನರ ಪಿಂಚಣಿಯನ್ನೂ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.ಹಾವೇರಿ ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್ ಚಟುವಟಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಪೊಲೀಸರು ಸಮರ್ಪಕ ದಾಳಿ ನಡೆಸುತ್ತಿಲ್ಲ. ಪರವಾನಗಿ ಪಡೆದಿರುವುದಾಗಿ ಹೇಳಿಕೊಂಡು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದರೂ ಕ್ರಮ ಕೈಗೊಳ್ಳದೆ ವಸೂಲಿಯಲ್ಲಿ ತೊಡಗಿದ್ದಾರೆ. ಅಕ್ರಮ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದರೆ ಅದರ ಹಿಂದಿನ ಉದ್ದೇಶ ಅರ್ಥವಾಗುತ್ತದೆ. ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಡವರು, ಹಿಂದುಳಿದವರು ಮತ್ತು ಯುವಕರ ಶೋಷಣೆ ನಡೆಯುತ್ತಿದೆ. ಮುಸ್ಲಿಂ ಯುವಕರು, ಶಿಕ್ಷಕರು ಹಾಗೂ ಉದ್ಯೋಗಿಗಳೂ ಸಂಕನೂರ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ. ಅರ್ಹ ಪದವೀಧರರು, ನೌಕರರು ಮತ್ತು ನಿವೃತ್ತ ನೌಕರರು ಸಂಕನೂರ ಅವರಿಗೆ ಮತ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಡಿ.ಕೆ. ಶಿವಕುಮಾರ್ ಅವರನ್ನು ಸ್ಟಿಂಗ್ ಆಪರೇಷನ್ ಪಿತಾಮಹ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜನರ ಪ್ರೀತಿ, ವಿಶ್ವಾಸ ಗಳಿಸಿ ಗೆಲ್ಲಬೇಕೇ ಹೊರತು ಸ್ಟಿಂಗ್ ಆಪರೇಷನ್ ಮೂಲಕ ಅವಮಾನಿಸುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ವಿಜಯಕುಮಾರ ಚಿನ್ನಿಕಟ್ಟಿ ಉಪಸ್ಥಿತರಿದ್ದರು.