- 2002ರ ಪಟ್ಟಿಯಲ್ಲಿ ಹೆಸರು ಹುಡುಕಿಕೊಡಲು ಬಿಎಲ್‌ಒಗಳು ಸಹಕರಿಸಲು ತಾಕೀತು - - -
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ ಸುಗಮವಾಗಿ ನಡೆಯುತ್ತಿದ್ದು, 2002ರ ಮತಪಟ್ಟಿಯಲ್ಲಿನ ಹೆಸರು ಹುಡುಕಲು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮತದಾರರಿಗೆ ಅಧಿಕಾರಿಗಳ ತಂಡವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.
ಅವರು ಶುಕ್ರವಾರ ಇಲ್ಲಿನ ಮಿಲ್ಲತ್ ಸ್ಕೂಲ್, ಅಲ್ ಇಕ್ರಾ ಶಾಲೆ, ದೂಡಾ ಕಚೇರಿ ಮತ್ತು ವಿಶೇಷಚೇತನರ ಶಾಲೆಯಲ್ಲಿನ ಮತಗಟ್ಟೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಎಸ್‌ಐಆರ್ ಪ್ರಗತಿ ಪರಿಶೀಲನೆ ನಡೆಸಿ ಮತದಾರರು ಮತ್ತು ಮತಗಟ್ಟೆ ಅಧಿಕಾರಿಗಳ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.ಎಲ್ಲ ಮತಗಟ್ಟೆಗಳಲ್ಲಿ ಗಣತಿ ನಮೂನೆಗಳನ್ನು ಶೇಕಡಾವಾರು ವಿತರಣೆ ಮಾಡಲಾಗಿದೆ. ಭರ್ತಿ ಮಾಡಿದ ನಮೂನೆಗಳನ್ನು ಗಣಕೀಕರಣ ಮಾಡುವ ಕೆಲಸ ಪ್ರಗತಿಯಲ್ಲಿದ್ದು, ಶೇ.50 ಮತ್ತು ಕೆಲವು ಮತಗಟ್ಟೆಗಳಲ್ಲಿ ಅದಕ್ಕಿಂತ ಹೆಚ್ಚು ಗಣಕೀಕರಣ ಮಾಡಲಾಗಿದೆ. ಮಿಲ್ಲತ್ ಸ್ಕೂಲ್ ಮತಗಟ್ಟೆಯಲ್ಲಿ ವೇಗವಾಗಿ ಗಣಕೀಕರಣ ಮಾಡಲು ಮತಗಟ್ಟೆ ಅಧಿಕಾರಿಗಳಿಗೆ ವೈ ಫೈ ಸೌಲಭ್ಯವನ್ನು ಪಾಲಿಕೆಯಿಂದ ಕಲ್ಪಿಸಲಾಗಿದೆ. ಮಿಲ್ಲತ್ ಸ್ಕೂಲ್, ಅಲ್ ಇಕ್ರಾ ಶಾಲೆಯಲ್ಲಿ ಪ್ರತಿ ಮತಗಟ್ಟೆಯಲ್ಲಿ ಸಾವಿರಕ್ಕಿಂತಲೂ ಹೆಚ್ಚು ಮತದಾರರು ಇರುವುದರಿಂದ ಡಿಜಿಟಲೀಕರಣಕ್ಕೆ ವೇಗ ನೀಡಲು ವೈಫೈ ಅಳವಡಿಸಲಾಗಿದೆ. ಇದೇ ರೀತಿ ಹೆಚ್ಚು ಮತಗಟ್ಟೆಗಳಿರುವ ಕಡೆ ವೈಫೈ ಸೌಲಭ್ಯ ಬಳಸಬಹುದು ಎಂದರು.
ಮತದಾರರು ಪ್ರೋಜಿಣಿಗೆ 2002ರ ಮತದಾರರ ಪಟ್ಟಿಯಲ್ಲಿನ ಮತಗಟ್ಟೆ, ಮತದಾರರ ಪಟ್ಟಿಯಲ್ಲಿನ ಕ್ರಮಸಂಖ್ಯೆಯ ಬಗ್ಗೆ ಆತಂಕಪಡುತ್ತಿರುವುದು ಗಮನಿಸಲಾಗಿದೆ. ಆದರೆ ಯಾವುದೇ ಸಾರ್ವಜನಿಕರು 2002ರ ಪಟ್ಟಿಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, 2002ರಲ್ಲಿ ಎಲ್ಲಿ ಮತದಾನ ಮಾಡಲಾಗಿದೆ ಎಂಬುದನ್ನು ನಿಖರವಾಗಿ ಬಿ.ಎಲ್.ಒ.ಗಳಿಗೆ ತಿಳಿಸಿ, ಅದರ ಭಾಗದ ಸಂಖ್ಯೆ, ಎಫಿಕ್ ಸಂಖ್ಯೆ ಇದ್ದರೆ ಸ್ಥಳದಲ್ಲಿಯೇ ವಿವರವನ್ನು ನೀಡುವರು. ಆದರೂ ನಿಮ್ಮಗಳ ಸಹಾಯಕ್ಕೆ ಎಲ್ಲ ಅಧಿಕಾರಿಗಳ ತಂಡ ಬದ್ದವಾಗಿದೆ, ಆತಂಕ ಬೇಕಿಲ್ಲ ಎಂದರು.
ಬಿಎಲ್‌ಒಗಳಿಗೆ ಎಚ್ಚರಿಕೆ:
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಶೇ.100 ರಷ್ಟು ಗಣತಿ ನಮೂನೆಗಳನ್ನು ವಿತರಿಸಿದ್ದು, ಇದರಲ್ಲಿ 1,22,123 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಿ ಶೇ.47.20ರಷ್ಟು ಮತ್ತು ದಾವಣಗೆರೆ ದಕ್ಷಿಣದಲ್ಲಿ ಶೇ.100ರಷ್ಟು ಗಣತಿ ನಮೂನೆ ವಿತರಣೆ ಮಾಡಿ 1,21,286 ಗಣತಿ ನಮೂನೆಗಳನ್ನು ಗಣಕೀಕರಣ ಮಾಡಿ ಶೇ 53.20 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
- - -
ದಾವಣಗೆರೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮತಗಟ್ಟೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಎಸ್‌ಐಆರ್ ಪ್ರಗತಿ ಪರಿಶೀಲನೆ ನಡೆಸಿದರು.