ಮತಗಳವು : ಚು.ಆಯೋಗಕ್ಕೆ ಕೈ ದೂರು

KannadaprabhaNewsNetwork |  
Published : Aug 09, 2025, 02:05 AM ISTUpdated : Aug 09, 2025, 06:52 AM IST
Election 1 | Kannada Prabha

ಸಾರಾಂಶ

ಮತಗಳ್ಳತನದ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರ ನಿಯೋಗ ಚುನಾವಣಾ ಆಯೋಗಕ್ಕೆ ತೆರಳಿ ಪಕ್ಷದ ಆರೋಪಗಳ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

 ಬೆಂಗಳೂರು :  ಮತಗಳ್ಳತನದ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರ ನಿಯೋಗ ಚುನಾವಣಾ ಆಯೋಗಕ್ಕೆ ತೆರಳಿ ಪಕ್ಷದ ಆರೋಪಗಳ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

ಮನವಿ ಸ್ವೀಕರಿಸಿದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯಕ್ತ ಅನ್ಬುಕುಮಾರ್ ಅವರು, ಈ ಆರೋಪಗಳಿಗೆ ದಾಖಲೆ ಸಹಿತ ಪ್ರಮಾಣಪತ್ರ ಸಲ್ಲಿಸುವಂತೆ ನಿಯೋಗಕ್ಕೆ ತಿಳಿಸಿದೆ ಎಂದು ತಿಳಿದುಬಂದಿದೆ.

ಪ್ರತಿಭಟನಾ ಸಭೆ ನಂತರ ಇಲ್ಲಿಗೆ ಸಮೀಪದಲ್ಲೇ ಇದ್ದ ಆಯೋಗದ ಕಚೇರಿಗೆ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ತೆರಳಿ ಮನವಿ ಸಲ್ಲಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ಮಧ್ಯಾಾಹ್ನ 1 ರಿಂದ 3ರವರೆಗೆ ಸಮಯವನ್ನೂ ಆಯೋಗ ನೀಡಿತ್ತು.

ಸಭೆ ಮುಕ್ತಾಯದ ಬಳಿಕ ವೇದಿಕೆಯಲ್ಲೇ ಸ್ವತಃ ಡಿ.ಕೆ.ಶಿವಕುಮಾರ್ ಇದನ್ನು ಘೋಷಿಸಿದ್ದಲ್ಲದೆ, ಕೆಪಿಸಿಸಿ ವಾಟ್ಸ್‌ಅಪ್‌ ಗ್ರೂಪ್‌ನಲ್ಲಿ ಲೈವ್ ಲಿಂಕ್ ಕೂಡ ನೀಡಲಾಯಿತು. ಆದರೆ, ಕೊನೇ ಕ್ಷಣದಲ್ಲಿ ರಾಹುಲ್ ಗಾಂಧಿ ಮತ್ತು ಖರ್ಗೆ ಅವರು ಆಯೋಗದ ಕಚೇರಿಗೆ ಭೇಟಿ ನೀಡಲಿಲ್ಲ.

ಡಿ.ಕೆ.ಶಿವಕುಮಾರ್ ಸೇರಿ ಇತರೆ ಕೆಲ ನಾಯಕರು ತೆರಳಿ ಮನವಿ ಸಲ್ಲಿಸಿದರು. ಈ ಲಿಖಿತ ದೂರಿನಲ್ಲಿ ರಾಹುಲ್‌ ಹಾಗೂ ಖರ್ಗೆ ಅವರ ಸಹಿಯೂ ಇಲ್ಲ. ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಲ್ ಮತ್ತು ರಣದೀಪ್‌ಸಿಂಗ್ ಸುರ್ಜೇವಾಲ ಸಹಿ ಹಾಕಿದ ದೂರನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ಅವರಿಗೆ ಸಲ್ಲಿಸಿದರು.

ಪ್ರಮಾಣ ಪತ್ರ ಕೇಳಿದ ಆಯೋಗ

ಇದರ ಬೆನ್ನಲ್ಲೇ ಆಯೋಗದ ಮುಖ್ಯ ಚುನಾವಣಾಧಿಕಾರಿ ಅವರು ದೂರು ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ದಾಖಲೆಗಳನ್ನು ಕೇಳಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಪ್ರಮಾಣಪತ್ರ/ಘೋಷಣಾಪತ್ರ ಸಲ್ಲಿಸುವಂತೆ ಕೋರಿದ್ದಾರೆ. ಶುಕ್ರವಾರ (ಆ.8) ತಾವು ನೀಡಿದ ಮನವಿಗೆ ಸಂಬಂಧಿಸಿ ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸಿಲ್ಲ. ಹಾಗಾಗಿ, ದೂರಿಗೆ ಪ್ರಮಾಣಪತ್ರದೊಂದಿಗೆ ಪೂರಕ ದಾಖಲೆಗಳನ್ನು ನೀಡಬೇಕು ಎಂದು ಸೂಚಿಸಿದ್ದಾರೆ. 

ಆಯೋಗಕ್ಕೆ ದೂರು ಕೊಡಲು ರಾಹುಲ್‌ ಏಕೆ ಹೋಗಲಿಲ್ಲ?:

ಲೋಕಸಭಾ ಚುನಾವಣೆಯ ಮತಗಳವು ಆರೋಪದ ತನಿಖೆಗಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಲು ರಾಹುಲ್‌ ಗಾಂಧಿ ಏಕೆ ಹೋಗಿಲ್ಲ ಎನ್ನುವ ಪ್ರಶ್ನೆ ಎದ್ದಿದ್ದು, ಇದಕ್ಕೆ ನಾನಾ ರೀತಿಯ ವಿಶ್ಲೇಷಣೆಗಳೂ ಬರುತ್ತಿವೆ. ಕಾಂಗ್ರೆಸ್ ಮೂಲಗಳ ಪ್ರಕಾರ, ತಾವು ಮಾಡಿರುವ ಮತಗಳವು ಆರೋಪ ಕರ್ನಾಟಕ ರಾಜ್ಯದ ಕ್ಷೇತ್ರವೊಂದಕ್ಕೆ ಸಂಬಂಧಿಸಿದ್ದು, ಹಾಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯಿಂದಲೇ ದೂರು ನೀಡುವುದು ಸೂಕ್ತ ಎನ್ನುವ ಕಾರಣಕ್ಕೆ ರಾಹುಲ್ ಅವರು ತೆರಳಲಿಲ್ಲ. ಈ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿಯೋಗದ ನೇತೃತ್ವ ವಹಿಸಿದರು ಎನ್ನುತ್ತವೆ.

ಅಲ್ಲದೆ, ತಮ್ಮ ಆರೋಪ ಸಂಬಂಧ ಪ್ರಮಾಣ ಪತ್ರ ಸಲ್ಲಿಸಲು ಆಯೋಗ ಕೇಳಿದೆ. ಆದರೆ ತಾವು ಸಂಸತ್‌ನಲ್ಲಿ ಲೋಕಸಭಾ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಸತ್ಯವನ್ನೇ ನುಡಿಯುವುದಾಗಿ ಸಂವಿಧಾನದ ಮೇಲೆ ಪ್ರತಿಜ್ಞೆ ಮಾಡಿರುವುದರಿಂದ ಮತ್ತೊಮ್ಮೆ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯವಿಲ್ಲ ಎನ್ನವ ನಿರ್ಧಾರ ರಾಹುಲ್ ಗಾಂಧಿ ಅವರದ್ದಾಗಿದೆ.ಒಂದು ವೇಳೆ ದೂರು ನೀಡಲು ಹೋದಾಗ ಆಯೋಗ ಅಫಿಡವಿಟ್ ನೀಡಿ ಎಂದು ಕೇಳಿದರೆ ನೇರವಾಗಿ ಆಯೋಗಕ್ಕೆ ತಾವು ಇಲ್ಲ ಎನ್ನುವುದು ಸರಿಯಲ್ಲ ಎಂದು ರಾಹುಲ್‌ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

PREV
Read more Articles on

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ