ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ಮತದಾನದ ದಿನವಾದ ಮೇ 7ರಂದು ಉಪ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿ.ಅಭಿಷೇಕ ಅವರು ಹೊನ್ನಾಳಿ, ನ್ಯಾಮತಿ ತಾಲೂಕು ತಹಸೀಲ್ದಾರ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ತಾಂಡಾಕ್ಕೆ ತೆರಳಿದರು. ಸ್ಥಳೀಯರ ಮನವೊಲಿಸಿ, ತಾನೂ ಈ ಬಾರಿ ನಿಮ್ಮೊಂದಿಗೆ ಕಾಲ್ನಡಿಗೆಯಲ್ಲಿಯೇ ಹೊನ್ನೂರುವಡ್ಡರ ಹಟ್ಟಿ ಗ್ರಾಮಕ್ಕೆ ಬರುತ್ತೇನೆ, ದಯವಿಟ್ಟು ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ಅಧಿಕಾರಿಗಳ ಕೋರಿಕೆಗೆ ಮಣಿದ ತಾಂಡಾ ಜನರು ಬಹಿಷ್ಕಾರ ಹಿಂಪಡೆದು, ಹೊನ್ನೂರು ವಡ್ಡರ ಹಟ್ಟಿ ಗ್ರಾಮಕ್ಕೆ ಬಂದು ಮತಗಟ್ಟೆ ಸಂಖ್ಯೆ 7ರಲ್ಲಿ ಮತಹಾಕಿದರು.
ಈ ಸಂದರ್ಭ ಹೊನ್ನಾಳಿ ತಹಸೀಲ್ದಾರ್ ಪುರಂದರ ಹೆಗಡೆ, ನ್ಯಾಮತಿ ತಹಸೀಲ್ದಾರ್, ಫಿರೋಜ್ ಷಾ, ತಾಪಂ ಅಧಿಕಾರಿ, ಸುಮಾ, ರಾಘವೇಂದ್ರ, ಸೆಕ್ಟರ್ ಆಧಿಕಾರಿಗಳು ತಾಂಡಾದ ಮುಖಂಡರು, ಪಿಡಿಒ ಅರುಣ್ ಇತರರು ಇದ್ದರು.ಮತದಾನ ಬಹಿಷ್ಕರಿಸಿದ್ದು ಏಕೆ?:
ಉಪವಿಭಾಗಾಧಿಕಾರಿ ಭೇಟಿ ಸಮಯದಲ್ಲಿ ಸ್ಥಳದಲ್ಲಿದ್ದ ಯುವಕರು, ತಾಂಡಾ ಜನ ಮಾತನಾಡಿ, ತಾಂಡಾದಲ್ಲಿ ಕುಡಿಯುವ ನೀರು, ವಿದ್ಯುತ್, ಆರೋಗ್ಯ ಸೇವೆ, ಶಿಕ್ಷಣ ಸೌಲಭ್ಯ, ಸಾರಿಗೆ ಸೌಲಭ್ಯ ಹೀಗೆ ಹಲವಾರು ಸಮಸ್ಯೆಗಳಿವೆ. ಮತಗಟ್ಟೆ ತಮ್ಮ ತಾಂಡಾದಿಂದ ಕಿ.ಮಿ.ಗಟ್ಟಲೇ ದೂರವಿರುವ ಹೊನ್ನೂರು ವಡ್ಡರಹಟ್ಟಿ ಗ್ರಾಮದಲ್ಲಿದೆ. ಮತ ಹಾಕಲು ತೆರಳಲು ತಾಂಡಾ ಮಹಿಳೆಯರು, ವೃದ್ಧರು, ರೋಗಪೀಡಿತರು, ವಿಕಲಚೇತನರಿಗೆ ತುಂಬಾ ತೊಂದರೆಯಾಗುತ್ತಿದೆ. ಹಲವಾರು ವರ್ಷಗಳಿಂದ ತಾಂಡಾಕ್ಕೆ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಿ ಕೊಡಿ ಎಂದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅರ್ಜಿ ಕೊಟ್ಟು, ಮನವಿ ಸಲ್ಲಿಸುತ್ತಿದ್ದೇವೆ. ಆದರೂ, ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಕಾರಣದಿಂದ ತಾಂಡಾ ಜನ 2024ರ ಲೋಕಸಭಾ ಚುನಾವಣೆಗೆ ಮತ ಬಹಿಷ್ಕಾರ ಮಾಡುತ್ತಿರುವುದಾಗಿ ತಿಳಿಸಿದ್ದರು.
- - -
ಪ್ರತ್ಯೇಕ ಮತಗಟ್ಟೆಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದ ತಾಂಡಾ ನಿವಾಸಿಗಳು ಅಧಿಕಾರಿಗಳ ಮನವಿಗೆ ಮಣಿದು ಮಂಗಳವಾರ ಉಪವಿಗಾಧಿಕಾರಿ ನೇತೃತ್ವದಲ್ಲಿ ಕಾಲ್ನಡಿಗೆಯೆಲ್ಲಿ ಹೊನ್ನೂರು ವಡ್ಡರ ಹಟ್ಟಿ ಗ್ರಾಮದ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.