ಕನ್ನಡಪ್ರಭ ವಾರ್ತೆ ಯಳಂದೂರು
ಕೆಟ್ಟು ಹೋದ ಇವಿಎಂ:
ತಾಲೂಕಿನ ಚಾಮಲಾಪುರ, ಹೊನ್ನೂರು, ಯರಗಂಬಳ್ಳಿ ಗ್ರಾಮಗಳ ಮತಗಟ್ಟೆಗಳಲ್ಲಿ ಮತ ಯಂತ್ರಗಳು ಕೆಲವು ಸಮಯ ಕೆಟ್ಟು ಆತಂಕ ಸೃಷ್ಟಿಸಿತು. ಇದು ಮತದಾರರಲ್ಲಿ ಗೊಂದಲ ಸೃಷ್ಟಿಸಲು ಕಾರಣವಾಯಿತು. ಸಂಬಂಧಪಟ್ಟ ತಾಂತ್ರಿಕ ಸಿಬ್ಬಂದಿ ಇದನ್ನು ಸರಿಪಡಿಸುವ ತನಕ ಮತದಾರರು ಇಲ್ಲೇ ಕಾದು ನಿಂತು ನಂತರ ಮತದಾನ ಮಾಡಿದರು. ಮತದಾನ ಮಾಡಿದ ಗಣ್ಯರು:ಚಾಮರಾಜನಗರ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ತಮ್ಮ ಕುಟುಂಬ ಸಮೇತ ತಮ್ಮ ಸ್ವಗ್ರಾಮವಾದ ತಾಲೂಕಿನ ಮದ್ದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ರ ಮತಗಟ್ಟೆ ಸಂಖ್ಯೆ 187 ರಲ್ಲಿ ತಮ್ಮ ಪತ್ನಿ ಹಾಗೂ ಕುಟುಂಬ ಸದಸ್ಯರ ಜತೆಗೆ ಆಗಮಿಸಿ ಮತ ಚಲಾಯಿಸಿದರು. ಚಾಮರಾಜನಗರ ಕ್ಷೇತ್ರದ ವಿಧಾನ ಸಭಾ ಕ್ಷೇತ್ರ ಶಾಸಕ ಸಿ.ಪುಟ್ಟರಂಗಶೆಟ್ಟಿ ಉಪ್ಪಿನಮೋಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ ಮತಗಟ್ಟೆಗೆ ಭೇಟಿ ನೀಡಿ ಮತ ಚಲಾಯಿಸಿದರು.
3 ಲಕ್ಷ ಅಂತರದ ಗೆಲುವಿನ ವಿಶ್ವಾಸ:ತಾಲೂಕಿನ ಮಾಂಬಳ್ಳಿ ಗ್ರಾಮದ ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ತಮ್ಮ ಬೆಂಬಲಿಗರ ಜೊತೆಯಲ್ಲಿ ಗ್ರಾಮದ ಕಮಲಮ್ಮ ಕರಿಗೇಗೌಡರ ಪ್ರೌಢಶಾಲೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈ ಬಾರಿ ಚಾಮರಾಜನಗರ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಲಿದೆ. ಕ್ಷೇತ್ರದ ಅಭ್ಯರ್ಥಿ ಸುನೀಲ್ ಬೋಸ್ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ರಾಜ್ಯದಲ್ಲಿ ಈ ಬಾರಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು ವಿವಿಯ ಸಿಂಡಿಕೇಟ್‌ನ ಮಾಜಿ ಸದಸ್ಯ, ಕಾಂಗ್ರೆಸ್ ಪಕ್ಷದ ಮುಖಂಡ ಕಿನಕಹಳ್ಳಿ ರಾಚಯ್ಯ ತಮ್ಮ ಬೆಂಬಲಿಗರ ಜೊತೆಗೆ ಆಗಮಿಸಿ ಕಿನಕಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.