ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವುದೇ ಮತದಾನ

KannadaprabhaNewsNetwork | Published : Jan 26, 2025 1:34 AM

ಸಾರಾಂಶ

ರಾಮನಗರ: ಮತದಾನ ಎಂದರೆ ಭಾರತೀಯ ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ದಾನ ಮಾಡುವುದು. ಈ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ, ಯಾವುದೇ ಪ್ರಲೋಭನೆ, ಆಸೆ, ಆಮಿಷಗಳಿಗೆ ಒಳಗಾಗದೆ, ಜಾತಿ, ಮತ, ಲಿಂಗ ತಾರತಮ್ಯ ನೋಡದೆ ಮತ ಚಲಾಯಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಹೇಳಿದರು.

ರಾಮನಗರ: ಮತದಾನ ಎಂದರೆ ಭಾರತೀಯ ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ದಾನ ಮಾಡುವುದು. ಈ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ, ಯಾವುದೇ ಪ್ರಲೋಭನೆ, ಆಸೆ, ಆಮಿಷಗಳಿಗೆ ಒಳಗಾಗದೆ, ಜಾತಿ, ಮತ, ಲಿಂಗ ತಾರತಮ್ಯ ನೋಡದೆ ಮತ ಚಲಾಯಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಟ್ ಸಮಿತಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಧತೆಯಲ್ಲಿ ಏಕತೆ ಇರುವ ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಗ್ರಾಮ ಪಂಚಾಯಿತಿಯಿಂದ ಲೋಕಸಭಾ ಕ್ಷೇತ್ರದವರೆಗೂ ಮತ ಚಲಾವಣೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ವಂಶ ಪಾರಂಪರ್ಯ ಆಡಳಿತಕ್ಕೆ ಇಲ್ಲಿ ಅವಕಾಶ ಇಲ್ಲ. ಮತದಾರ ಗೆಲ್ಲಬೇಕು ಎನ್ನುವ ಉದ್ದೇಶದೊಂದಿಗೆ ಈ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ. ಎಂದು ಹೇಳಿದರು.

ಈ ಮತದಾನ ಬೇರೆ ರೂಪಕ್ಕೆ ಬಂದರೆ ಅದರ ಕಷ್ಟಕಾರ್ಪಣ್ಯಗಳನ್ನು ಅನುಭವಿಸುವವರು ನಾವೇ ಆಗಿರುತ್ತೇವೆ. ಮತದಾನ ಸಂವಿಧಾನ ನೀಡಿರುವ ಶ್ರೇಷ್ಠ ಹಕ್ಕಾಗಿದ್ದು, ಇತ್ತೀಚಿನ ದಿನಗಳಲ್ಲಿ ಯುವ ಮತದಾರರ ಭಾಗವಹಿಸುವಿಕೆಯಿಂದ ಮತದಾನದ ಪ್ರಮಾಣ ಶೇಕಡ 90ರಷ್ಟು ತಲುಪುತ್ತಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ನಮ್ಮ ಕರ್ತವ್ಯ ನಿಭಾಯಿಸಬೇಕು. ಸೂಕ್ತ ವ್ಯಕ್ತಿ ಆಯ್ಕೆಯಾಗದಿದ್ದಲ್ಲಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅವರ ಮನೆಗೆ ಹೋಗುವ ಅಗತ್ಯವಿರುವುದಿಲ್ಲ. ಆದಕಾರಣ ಚುನಾವಣಾ ದಿನದಂದು ತಪ್ಪದೆ ಮತದಾನ ಮಾಡಬೇಕು ಹಾಗೂ ನಮ್ಮ ಪರಿಸರದಲ್ಲಿರುವ ಪ್ರತಿಯೊಬ್ಬರಿಗೂ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಕರೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಮಾತನಾಡಿ, ಚುನಾವಣಾ ಆಯೋಗ ಜಾರಿಗೆ ಬಂದ ಜನವರಿ 25ರ ನೆನಪಿಗಾಗಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಬಾರಿ ಖಚಿತವಾಗಿ ಮತ ಹಾಕುತ್ತೇನೆ ಎಂಬ ಘೋಷ ವಾಕ್ಯವನ್ನು ಹೊಂದಲಾಗಿದೆ. ಪ್ರತಿಯೊಬ್ಬರೂ ಮತ ಹಾಕುವುದರಿಂದ ಪ್ರಜಾಪ್ರಭುತ್ವದ ರಕ್ಷಣೆಯಾಗುತ್ತದೆ, ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ ದೊಡ್ಡ ಶಕ್ತಿ ಮತದಾರ, ಆದ ಕಾರಣ ಮತ ಚಲಾಯಿಸಿ ದೇಶವನ್ನು ಬಲಪಡಿಸಬೇಕು. ಆ ಮೂಲಕ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಹೋರಾಟ ಮಾಡಿದ ನಮ್ಮ ಮಹನೀಯರಿಗೆ ಗೌರವ ನೀಡಬೇಕು. ಮತದಾನ ಮಾಡುವುದು ಸಂಭ್ರಮಾಚರಣೆಯಾಗಬೇಕು ಅದರಿಂದ ಗೌರವ ಹಾಗೂ ಹೆಮ್ಮೆ. ಆದಕಾರಣ ಜವಾಬ್ದಾರಿಯಿಂದ ಮತ ಚಲಾಯಿಸುವಂತೆ ಕಿವಿಮಾತು ಹೇಳಿದರು.

ಡಿವೈಎಸ್ಪಿ ಕೆಂಚೇಗೌಡ ಮಾತನಾಡಿ, ನಮ್ಮನ್ನು ನಾವೇ ಆಳಿಕೊಳ್ಳುವ ಪ್ರಭುತ್ವವೇ ಪ್ರಜಾಪ್ರಭುತ್ವ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಕಡಿಮೆ ಪ್ರಮಾಣದಲ್ಲಿ ಮತದಾನ ಮಾಡುತ್ತಿರುವುದು ಕಂಡುಬಂದಿದೆ. ಅಂದರೆ ನಾವು ಸಾಕಷ್ಟು ಜನ ಮತ ಚಲಾಯಿಸದಿದ್ದರೆ ದೇಶವನ್ನು ಆಳುವ ಸಮರ್ಥರನ್ನು ಆಯ್ಕೆ ಮಾಡುವಲ್ಲಿ ವಿಫಲರಾಗುತ್ತಿದ್ದೇವೆ ಎಂದಾಗಿದೆ. ನಮ್ಮ ಅಧಿಕಾರ ಹಾಗೂ ಜವಾಬ್ದಾರಿಯನ್ನು ಅರಿತು ಗ್ರಾಮ ಪಂಚಾಯತಿಯಿಂದ ಹಿಡಿದು ಸಂಸತ್ ಸದಸ್ಯರವರೆಗೆ ಮತ ಚಲಾವಣೆ ಮೂಲಕ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಮತದಾನದ ಸದಾವಕಾಶ ಪಡೆದು ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿ ದೇಶಕ್ಕೆ ಪ್ರಗತಿಗೆ ಕಾರಣೀಭೂತರಾಗಬೇಕು ಎಂದರು.

ಇದೇ ಸಂದರ್ಭದಲ್ಲಿ 18 ವರ್ಷ ಪೂರ್ಣಗೊಂಡ ಯುವ ಮತದಾರರಿಗೆ ಚುನಾವಣಾ ಗುರುತಿನ ಚೀಟಿಯನ್ನು ವಿತರಿಸಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶಾಲಾ ಹಾಗೂ ಕಾಲೇಜು ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರು ಭಾಗವಹಿಸಿದ್ದರು.

ಚುನಾವಣಾ ತಹಸೀಲ್ದಾರ್‌ ಹರ್ಷವರ್ಧನ್, ಬಿಎಸ್‌ವಿಪಿ ಕಾಲೇಜಿನ ಪ್ರಾಂಶುಪಾಲ ಜಿ.ಶಿವಣ್ಣ ಮಾತನಾಡಿದರು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಬಸವರಾಜೇ ಗೌಡ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ರಮ್ಯಾ, ನಾಗೇಂದ್ರ ಕುಮಾರ್ ಉಪಸ್ಥಿತರಿದ್ದರು.

ಕೋಟ್‌..............

ಭಾರತೀಯ ಚುನಾವಣಾ ಆಯೋಗ ಸರಳ, ಸುಲಭ ಹಾಗೂ ಸುಲಲಿತವಾಗಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭಾ ಕ್ಷೇತ್ರದ ಚುನಾವಣೆಗಳನ್ನು ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಆಯೋಜಿಸುತ್ತದೆ. ಇದರ ಅಧ್ಯಯನಕ್ಕಾಗಿ ಪ್ರಪಂಚದ ಇತರೆ ರಾಷ್ಟ್ರಗಳ ಪ್ರತಿನಿಧಿಗಳು ಕೂಡ ಭಾರತಕ್ಕೆ ಬರುತ್ತಾರೆ.

-ಆರ್.ಚಂದ್ರಯ್ಯ, ಅಪರ ಜಿಲ್ಲಾಧಿಕಾರಿ

25ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಉದ್ಘಾಟಿಸಿದರು.

Share this article