ಮುಳಗುಂದ: ಮತದಾನ ದೇಶವನ್ನು ಅಭಿವೃದ್ಧಿ ಕಡೆಗೆ ಮತ್ತು ಪ್ರಜಾ ಪ್ರತಿನಿಧಿಯ ನಾಯಕನನ್ನು ಆಯ್ಕೆ ಮಾಡಿ ಸದೃಢ ದೇಶಕಟ್ಟುವಲ್ಲಿ ಅಮೂಲ್ಯವಾದದ್ದು. ಮತದಾನದ ಸಂದರ್ಭದಲ್ಲಿ ನಮ್ಮ ಕೆಲಸದ ಒತ್ತಡದಲ್ಲಿ ಬೇರೆ ಬೇರೆ ನಗರಗಳಲ್ಲಿ ಇರುವುದರಿಂದ ಮತದಾನ ನಿರ್ಲಕ್ಷ್ಯ ಮಾಡುತ್ತೇವೆ. ಪ್ರಜೆಗಳಾದ ನಾವು ಪ್ರಜಾ ನಾಯಕನನ್ನು ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ. ಆದ್ದರಿಂದ ಮತದಾನದ ದಿನ ಎಲ್ಲೇ ಇರಿ ಹೇಗೆ ಇರಿ ಮತದಾನ ಮಾಡುವುದನ್ನು ಮರೆಯದಿರಿ ಎಂದು ಮುಳಗುಂದ ಪಪಂ ಸದಸ್ಯ ವಿಜಯ ನೀಲಗುಂದ ಹೇಳಿದರು.
ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿ, ದೇಶ ಕಟ್ಟುವ ನಾಯಕನ ಸಾಮರ್ಥ್ಯವನ್ನು ಪರಿಶೀಲಿಸಿ ಪ್ರಬುದ್ಧ ನಾಯಕನನ್ನು ಈ ದೇಶಕ್ಕೆ ಕೊಡುಗೆ ನೀಡಬೇಕು. ಆ ಶಕ್ತಿ ಇರುವದು ಮಾತ್ರ ಮತದಾನಕ್ಕೆ. ಏಕೆಂದರೆ ಇಂದು ಸಮಾಜ ಸೇವೆ ಎಂಬುವದು ವ್ಯಾಪಾರವಾಗುತ್ತಿದೆ. ಉಳ್ಳವರಿಗೆ ಮಾತ್ರ ರಾಜನಾಗುವ ಅವಕಾಶ ಏಕೆಂದರೆ ಆಮೇಶಗಳಲ್ಲಿ ಓಟಿಗೊಂದು ನೋಟಿನ ಕಾಲ ಇರುವುದರಿಂದ ಪ್ರಬುದ್ಧ ನಾಯಕನನ್ನು ಆಯ್ಕೆ ಮಾಡುವದು ಕಠಿಣವಾಗಿದೆ. ನಮ್ಮ ಅಮೂಲ್ಯವಾದ ಮತವನ್ನು ಮಾರದೇ ಸದೃಢ ದೇಶ ನಿರ್ಮಾಣಕ್ಕೆ ಶಕ್ತಿಯಾಗಬೇಕು ಎಂದರು.
ವಸತಿ ಶಾಲೆಯ ಪ್ರಾ. ಎಚ್.ಆರ್. ಸಕ್ರಿ, ಪಪಂ ಸದಸ್ಯ ಕೆ.ಎಲ್. ಕರಿಗೌಡ್ರ, ದಾವುದ್ ಜಮಾಲಸಾಬನವರ, ಉಪನ್ಯಾಸಕರಾದ ಬಿ.ಸಿ. ಕುತ್ನಿ, ನಿರ್ಮಲಾ ತರವಾಡೆ ಇದ್ದರು.