ನರಗುಂದ: ದೇಶದಲ್ಲಿ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡುತ್ತವೆ. ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕು ದೇಶದ ಸಂಸತ್ತನ್ನು ನಿರ್ಮಿಸುವ ಹಕ್ಕಾಗಿದೆ. ಹೀಗಾಗಿ ನಾವೇಲ್ಲರು ಚುನಾವಣೆ ದಿನ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ನರಗುಂದ ವಿಧಾನಸಭಾ ಚುನಾವಣಾ ಸಹಾಯಕ ಚುನಾವಣಾ ಅಧಿಕಾರಿ ಡಾ. ಹಂಪಣ್ಣ ಸಜ್ಜನರ ಹೇಳಿದರು.
ಚುನಾವಣಾ ಆಯೋಗ ಹಾಗೂ ಜಿಲ್ಲಾ ಮತ್ತು ತಾಪಂಗಳು ಇಡೀ ದೇಶಾದ್ಯಂತ ಸ್ವೀಪ್ ಚಟುವಟಿಕೆ ಮೂಲಕ ಕಡ್ಡಾಯ ಮತದಾನ ಬಗ್ಗೆ ಅರಿವು ಮೂಡಿಸುವ ಕೆಲಸವಾಗುತ್ತಿದೆ. ಎಲ್ಲ ಮತದಾರರು ಕಡ್ಡಾಯವಾಗಿ ಮತ ಹಕ್ಕನ್ನು ಚಲಾಯಿಸಿದಾಗ ಮಾತ್ರ ಸ್ವೀಪ್ ಸಮಿತಿ ಕಾರ್ಯ ಯಶಸ್ವಿಯಾಗುತ್ತದೆ. ನಮ್ಮ ಒಂದು ಮತ ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಮತವಾಗಬೇಕು ಎಂದರು.
ಕಾಮಗಾರಿ ಸ್ಥಳದಲ್ಲಿದ್ದ 300ಕ್ಕೂ ಅಧಿಕ ಕೂಲಿಕಾರರಿಗೆ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಮಗಾರಿ ಸ್ಥಳದಲ್ಲಿ ಕೂಲಿಕಾರರು ಮಾನವ ಸರಪಳಿ ರಚಿಸುವ ಮೂಲಕ ಕಡ್ಡಾಯ ಮತದಾನ ಬಗೆಗಿನ ಘೋಷಣೆ ಕೂಗಿದರು.ತಾಪಂ ಅಧಿಕಾರಿ ಸೋಮಶೇಖ ಬಿರಾದಾರ, ಹಿರೇಕೊಪ್ಪ ಪಿಡಿಓ ಕೆ.ಎನ್. ಹದಗಲ್, ಜಿಲ್ಲಾ ಐಇಸಿ ಸಂಯೋಜಕ ವೀರಭದ್ರಪ್ಪ ಸಜ್ಜನ, ತಾಲೂಕು ಐಇಸಿ ಸಂಯೋಜಕ ಸುರೇಶ ಬಾಳಿಕಾಯಿ, ತಾಂತ್ರಿಕ ಸಹಾಯಕ ಅಲ್ತಾಪ ಅಮೀನಬಾವಿ, ಬಿಎಫ್‌ಟಿ ಬಸವರಾಜ ಚಿಮ್ಮನಕಟ್ಟಿ, ಹಿರೇಕೊಪ್ಪ ಗ್ರಾಪಂ ಸಿಬ್ಬಂದಿ ವರ್ಗ ಹಾಜರಿದ್ದರು.