ಮತದಾನ ಕೇವಲ ಹಕ್ಕಲ್ಲ, ನಮ್ಮ ಕರ್ತವ್ಯ: ನ್ಯಾ.ಮಂಜುನಾಥ ನಾಯಕ್

KannadaprabhaNewsNetwork | Published : Jan 26, 2025 1:30 AM

ಸಾರಾಂಶ

ಶಿವಮೊಗ್ಗ : ಮತದಾನ ಕೇವಲ ಹಕ್ಕಲ್ಲ. ಅದು ನಮ್ಮ ಕರ್ತವ್ಯ. ಹಾಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ನಾಯಕ್ ಹೇಳಿದರು.

ಶಿವಮೊಗ್ಗ : ಮತದಾನ ಕೇವಲ ಹಕ್ಕಲ್ಲ. ಅದು ನಮ್ಮ ಕರ್ತವ್ಯ. ಹಾಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ನಾಯಕ್ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿಗೆ ಯುವಕರು ಮತದಾನ ಮಾಡುವಲ್ಲಿ ಹಿಂದೆ ಉಳಿದಿದ್ದಾರೆ. ಮತದಾನದ ಮಹತ್ವವನ್ನು ತಿಳಿಯದೆ ನಿರಾಸಕ್ತರಾಗಿದ್ದಾರೆ. ಆದ್ದರಿಂದ ಮತದಾನವೂ ಕೂಡ ಕುಂಠಿತವಾಗುತ್ತಿದೆ. ಮತದಾನದದ ಮಹತ್ವದ ಕುರಿತು ಅರಿವು ಮೂಡಿಸುವಲ್ಲಿ ನಾವೆಲ್ಲಾ ಕೆಲಸ ಮಾಡಬೇಕು ಎಂದರು.

ಮೊದಲೆಲ್ಲಾ 20 ವರ್ಷ ತುಂಬಿದವರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿತ್ತು. 1988ರಲ್ಲಿ ಅದನ್ನು ತಿದ್ದುಪಡಿ ಮಾಡಿದ ನಂತರ 18 ವರ್ಷ ತುಂಬಿದವರಿಗೆ ಮತದಾನ ಮಾಡುವ ಅವಕಾಶ ದೊರಕಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮನ್ನು ಆಳುವವರು ಯಾರು ಎಂದು ತೀರ್ಮಾನ ಮಾಡಲು ಮತದಾನವನ್ನು ಮಾಡಬೇಕು. ಆ ಮೂಲಕ ಎಲ್ಲರೂ ಮತದಾನದಲ್ಲಿ ಭಾವಹಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವಹಿಸಿದ್ದರು.

ಈ ವೇಳೆ ಉತ್ತಮ ಮತಗಟ್ಟೆ ಅಧಿಕಾರಿಗಳನ್ನು, ಕಂಪ್ಯೂಟರ್ ಆಪರೇಟರ್‌ಗಳನ್ನು ಹಾಗೂ ಸ್ವೀಪ್ ಸಮಿತಿ ಅಧಿಕಾರಿಯನ್ನು ಸನ್ಮಾನಿಸಲಾಯಿತು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಸಂತೋಷ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿ.ಪಂ ಸಿಇಒ ಹೇಮಂತ್ ಎನ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಎಸಿ ಸತ್ಯನಾರಾಯಣ, ತಹಸೀಲ್ದಾರ್ ವಿ.ಎಸ್ ರಾಜೀವ್, ಚುನಾವಣಾ ತಹಸೀಲ್ದಾರ್ ಪ್ರದೀಪ್.ಆರ್ ಮತ್ತಿತರರಿದ್ದರು.

Share this article