ರಾಜ್ಯದ ಎರಡು ಕ್ಷೇತ್ರಗಳಲ್ಲಿ ಮತದಾನ ಸುಸೂತ್ರ

KannadaprabhaNewsNetwork |  
Published : Apr 10, 2026, 01:30 AM IST
Election

ಸಾರಾಂಶ

ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ನಾಯಕರ ವಾಕ್ಸಮರಕ್ಕೆ ಕಾರಣವಾಗಿದ್ದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಫಲಿತಾಂಶ ತಿಳಿಯಲು ಹೆಚ್ಚೂ ಕಡಮೆ ಒಂದು ತಿಂಗಳು ಕಾಯಬೇಕಾಗುತ್ತದೆ.

 ಬೆಂಗಳೂರು :  ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ನಾಯಕರ ವಾಕ್ಸಮರಕ್ಕೆ ಕಾರಣವಾಗಿದ್ದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಫಲಿತಾಂಶ ತಿಳಿಯಲು ಹೆಚ್ಚೂ ಕಡಮೆ ಒಂದು ತಿಂಗಳು ಕಾಯಬೇಕಾಗುತ್ತದೆ.

ಬಾಗಲಕೋಟೆ ಕ್ಷೇತ್ರದಲ್ಲಿ ಶೇ.68.74 ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ.68.43ರಷ್ಟು ಮಂದಿ ಮತ ಚಲಾಯಿಸಿದ್ದಾರೆ.

ಬಾಗಲಕೋಟೆಯಲ್ಲಿ ಶೇ.68.69ರಷ್ಟು ಪುರುಷರು, ಶೇ.68.68ರಷ್ಟು ಮಹಿಳೆಯರು, ಶೇ.0.07ರಷ್ಟು ತೃತೀಯ ಲಿಂಗಿಗಳು ಮತ ಚಲಾಯಿಸಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಶೇ.68.55ರಷ್ಟು ಪುರುಷರು, ಶೇ.68.55ರಷ್ಟು ಮಹಿಳೆಯರು ಹಾಗೂ ಶೇ.0.08ರಷ್ಟು ತೃತೀಯ ಲಿಂಗಿಗಳು ಮತಚಲಾಯಿಸಿದ್ದಾರೆ. ಮೇ 4ರಂದು ಮತಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 

ಮತದಾನಕ್ಕೆ ಟಗರಿನೊಂದಿಗೆ ಬಂದ ಬಾಗಲಕೋಟೆ ಕೈ ಅಭ್ಯರ್ಥಿ ಮೇಟಿ:ಬಾಗಲಕೋಟೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರು ಗುರುವಾರ ಸ್ವಗ್ರಾಮ ತಿಮ್ಮಾಪುರದಲ್ಲಿ ಮತದಾನ ಮಾಡಿದರು. ಮತದಾನದ ಕೇಂದ್ರದವರೆಗೂ ಟಗರಿಗೆ ಕಾಂಗ್ರೆಸ್ ಪಕ್ಷದ ಧ್ವಜ ಹಾಕಿಕೊಂಡು ಬಂದು ಮತದಾನ ಮಾಡಿದರು.

 ಮತದಾನಕ್ಕೂ ಮುನ್ನ ತಂದೆ ದಿ.ಎಚ್.ವೈ.ಮೇಟಿ ಅವರ ಸಮಾಧಿಗೆ ತೆರಳಿ ಆಶೀರ್ವಾದ ಪಡೆದು, ಬೆಂಬಲಿಗರೊಂದಿಗೆ ಮತ ಕೇಂದ್ರಕ್ಕೆ ತೆರಳಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಮತದಾನ ಬಳಿಕ ತಂದೆಯನ್ನು ನೆನಸಿಕೊಂಡು ಕಣ್ಣೀರಿಟ್ಟರು. 15 ರಿಂದ 20 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಶ ವ್ಯಕ್ತಪಡಿಸಿದರು. 

ಮತದಾರರಿಗೆ ಹಣ ಹಂಚಿಕೆಯ ವಿಡಿಯೋ ವೈರಲ್‌: 

 ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಿದ ಆರೋಪದಡಿ ಬಾಗಲಕೋಟೆ ನವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.ಗುರುವಾರ ನಡೆದ ಮತದಾನದ ವೇಳೆ ಕೆಲವರು ಮತದಾರರಿಗೆ ಹಣ ಹಂಚಿಕೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಕಂಡು ಬಂದಿದೆ. 

ನವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌

ಈ ಬಗ್ಗೆ ತಕ್ಷಣವೇ ತನಿಖೆ ನಡೆಸಿ, ನವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಚುನಾವಣಾ ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನೀಟ್ ರದ್ದಾಗಿದ್ದಕ್ಕೆ ಜೀವ ಕಳಕೊಂಡ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್ !
ಹೆಣ ಹುಡುಕಿಕೊಂಡು ಹೋದ ಖಾಕಿಗೆ ಸಿಕ್ಕಿದ್ದು ಸತ್ತ ಹೆಗ್ಗಣ!