ಕನ್ನಡಪ್ರಭ ವಾರ್ತೆ ಯರಗಟ್ಟಿಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇಬೂದನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಳಗಲಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಇದರಿಂದ ಎಚ್ಚೆತ್ತ ತಾಲೂಕು ಪಂಚಾಯತಿ ಇಒ ಯಶವಂತಕುಮಾರ ಹಿರೇಬೂದನೂರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜನರ ಮನವೊಲಿಕೆಗೆ ಯತ್ನಿಸಿದರು. ಜನಪ್ರತಿನಿಧಿಗಳು ನಮಗೆ ಮೂಲಸೌಕರ್ಯ ಒದಗಿಸುವ ಗೋಜಿಗೆ ಹೊಗಿಲ್ಲ, ಇಲ್ಲಿ ಪ್ರತಿಯೂಂದಕ್ಕೂ ಪರದಾಡುವ ಸ್ಥಿತಿ ಇದ್ದು, ಮೊದಲು ಮೂಲಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ ನಾವು ಯಾರು ಮತದಾನ ಮಾಡುವುದಿಲ್ಲ ಎಂದು ಪಿಡಿಒ ಗುರುಪಾದ ಗಿರೆಣ್ಣವರ ಗೆ ಮನವಿ ಸಲ್ಲಿಸಿದರು.
ಮಳಗಲಿ ಗ್ರಾಮದಲ್ಲಿ ಸರಿಯಾದ ರಸ್ತೆಯಿಲ್ಲ, ಸಮರ್ಪಕವಾಗಿ ವಿದ್ಯುತ್ ಸೌಲಭ್ಯವಿಲ್ಲ, ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ, ಸಾರಿಗೆ ವ್ಯವಸ್ಥೆ, ಮೊಬೈಲ್ ನೆಟ್ ವರ್ಕ್ ಹೀಗೆ ಹಲವು ಸೌಕರ್ಯಗಳು ಇಲ್ಲದ್ದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ. ಇಲ್ಲಿನ ಈ ಭಾಗದಲ್ಲಿ ಜಲಮೂಲಗಳು ಕೂಡ ಬತ್ತಿ ಹೋಗಿದ್ದು, ಹನಿ ನೀರಿಗಾಗಿ ಹಾಹಾಕಾರ ಪಡುತ್ತಿದ್ದೇವೆ. ಇಂತಹ ಸಮಸ್ಯೆಗಳನ್ನು ಬಗೆ ಹರಿಸುವಂತೆ ಆಗ್ರಹಿಸಿದರು.ಬೈಲಹೊಂಗಲ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಯರಗಟ್ಟಿಯಿಂದ 12 ಕಿಮೀ ಬೈಲಹೊಂಗಲದಿಂದ 21 ಕಿಮೀ ದೂರದಲ್ಲಿ ಕಾಗದ ಪತ್ರ ವ್ಯವಹಾರಕ್ಕಾಗಿ 55 ಕಿಮೀ ದೂರದ ಸವದತ್ತಿಗೆ ಹೋಗಬೇಕಿದೆ. ಸಮೀಪದ ತಡಸಲೂರ ಬ್ಯಾಂಕಿನಲ್ಲಿ ಸರ್ಕಾರಿ ಯೋಜನೆಗಳ ಸಾಲ ಸೌಲಭ್ಯ ಸಿಗುತ್ತಿಲ್ಲ ಎಂದು ಗ್ರಾಪಂ ಉಪಾಧ್ಯಕ್ಷ ಶಿವರಾಜ ರುದ್ರಪ್ಪನವರ ದೂರಿದರು.
ವಿಷಯ ತಿಳಿದ ಸವದತ್ತಿ ತಾಲೂಕು ತಾಪಂ ಇಒ ಯಶವಂತಕುಮಾರ ಅವರು ಗ್ರಾಮಸ್ಥರಿಗೆ ಮನವಲಿಕೆಗೆ ಯತ್ನಿಸಿದರು. ಸರಕಾರ ನಿಮ್ಮ ಬೇಡಿಕೆಗೆ ಸ್ಪಂದಿಸಲಿದೆ. ಮತದಾನ ಬಹಿಷ್ಕಾರ ಮಾಡದಂತೆ ಮನವಿ ಮಾಡಿದರು. ಸೌಲಭ್ಯಗಳನ್ನು ಕೊಟ್ಟರೆ ಮತ ಹಾಕುತ್ತೇವೆ. ಇಲ್ಲದಿದ್ದರೆ ಮತದಾನ ಬಹಿಷ್ಕಾರ ನಿಶ್ಚಿತ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಗ್ರಾಪಂ ಅಧ್ಯಕ್ಷ ಶಿವಬಸವ್ವ ನಾಯ್ಕಪ್ಪಗೋಳ, ತಿಮ್ಮಣ್ಣ ಬಂಡಿವಡ್ಡರ, ಫಕ್ಕಿರಪ್ಪ ವಕ್ಕುಂದ, ರಾಘವೇಂದ್ರ ರುದ್ರಪ್ಪನ್ನವರ, ಶೇಖರ ಹಿರೇಮಠ, ಬೆಳ್ಳೆಪ್ಪ ಕಂಬಳ್ಳಿ ಮುಂತಾದವರು ಇದ್ದರು.