ಹೂವಿನಹಡಗಲಿ: ತಾಲೂಕಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮುಕ್ತಾಯವಾಗಿದ್ದು, ಅಂತಿಮ ಕರಡು ಪಟ್ಟಿ ಪ್ರಕಟಿಸಲಾಗಿದೆ ಎಂದು ಬಿಇಒ ಮಂಗಳಾ ಕೆ, ಪುರಸಭೆ ಮುಖ್ಯಾಧಿಕಾರಿ ಹನುಮಂತಪ್ಪ ಹೇಳಿದರು.
ಎಸ್‌ಐಆರ್ ಪ್ರಕ್ರಿಯೆ ಆರಂಭಗೊಂಡ ನಂತರದಲ್ಲಿ 7876 ಮೃತ ಮತದಾರರು, 2552 ಮತದಾರರು ಗೈರಾಗಿದ್ದಾರೆ, 12943 ಮತದಾರರು ಸ್ಥಳಾಂತರವಾಗಿದ್ದಾರೆ, 31 ಜನ ಇತರರು ರದ್ದಾಗಿದ್ದಾರೆ, 3629 ಮತದಾರರು ಎರಡು ಕಡೆಗಳಲ್ಲಿ ಮತದಾನದ ಹಕ್ಕು ಹೊಂದಿದ್ದರು. ಒಟ್ಟು ಅಂತಿಮವಾಗಿ 27044 ಮತದಾರರ ಹೆಸರು ಡೀಲಿಟ್ ಮಾಡಲಾಗಿದೆ ಕರಡು ಪಟ್ಟಿಯಲ್ಲಿ177337 ಮತದಾರರ ಹೆಸರು ಖಚಿತವಾಗಿದೆ ಎಂದು ಹೇಳಿದರು.
ಈ ಅಂತಿಮ ಮತದಾರರ ಕರಡು ಪಟ್ಟಿಯಲ್ಲಿ 177337 ಮತದಾರರಲ್ಲಿ, 89879 ಪುರುಷ ಮತದಾರರು, 87450 ಮಹಿಳಾ ಮತದಾರರು, 970 ಹಿರಿಯ ನಾಗರಿಕ ಮತದಾರರು, 3401 ಯುವ ಮತದಾರರು,3001 ಅಂಗವಿಕಲ ಮತದಾರರು ಸೇರಿದಂತೆ ಇತರೆ 8 ಜನ ಮತದಾರರಿದ್ದಾರೆಂದು ಹೇಳಿದರು.ಚುನಾವಣೆ ಶಾಖೆಯ ಅಧಿಕಾರಿ ಸಲೀಂ ಮಾತನಾಡಿ, ಹೊಸದಾಗಿ ಮತದಾರರ ಹೆಸರು ನೋಂದಣಿ ಕೆಲಸ ನಿರಂತರವಾಗಿ ನಡೆಯುತ್ತಿದೆ, ಜತೆಗೆ ತಿದ್ದುಪಡಿ, ಸೇರ್ಪಡೆ ಮಾಡಲು ಸೂಕ್ತ ದಾಖಲೆಯೊಂದಿಗೆ ಚುನಾವಣೆಯ ಆನ್‌ಲೈನ್ ಆ್ಯಪ್‌ನಲ್ಲಿಯೂ ನೋಂದಣಿ ಮಾಡಬಹುದು, ಇಲ್ಲವೇ ತಮ್ಮ ವ್ಯಾಪ್ತಿಯ ಬಿಎಲ್ಒ ಸಂಪರ್ಕಿಸಬಹುದು, ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಚೇರಿಯ ಚುನಾವಣೆ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಸಿಎಂ ವಿಸ್ತರಣಾಧಿಕಾರಿ ವಿ.ರಮೇಶ, ತೋಟಗಾರಿಕೆ ಹಿರಿಯ ಉಪ ನಿರ್ದೇಶಕ ನಾಗರಾಜ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಕಾಂಗ್ರೆಸ್ ಮುಖಂಡ ಎಸ್. ಮಲ್ಲಿಕಾರ್ಜುನ ಸೇರಿದಂತೆ ಬಿಎಲ್‌ಓಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.