ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಜೀವನವನ್ನು ಮುಡುಪಾಗಿಟ್ಟಿದ್ದ ವೃಕ್ಷಮಾತೆ, ಪದ್ಮಶ್ರೀ ತುಳಸಿ ಗೌಡ ನಿಧನ

KannadaprabhaNewsNetwork |  
Published : Dec 17, 2024, 01:01 AM ISTUpdated : Dec 17, 2024, 11:04 AM IST
ತುಳಸಿ ಗೌಡ | Kannada Prabha

ಸಾರಾಂಶ

ತುಳಸಿ ಗೌಡ ಅವರು ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸಿದ್ದರು. 5 ದಶಕಕ್ಕೂ ಹೆಚ್ಚು ಪರಿಸರ ರಕ್ಷಣೆಗಾಗಿ ತಮ್ಮ ಜೀವನನ್ನು ಮುಡುಪಾಗಿಟ್ಟಿದ್ದರು. ಹೀಗಾಗಿ ಅವರನ್ನು ವೃಕ್ಷಮಾತೆ, ವನದೇವತೆಯೆಂದೇ ಕರೆಯಲಾಗುತ್ತಿತ್ತು.

ರಾಘು ಕಾಕರಮಠ

ಅಂಕೋಲಾ: ಯಾವುದೇ ಲಾಭದ ಅರಿವಿಲ್ಲದೆ, ಫಲವನ್ನೂ ಬಯಸದೇ ಗಿಡಮರಗಳನ್ನು ಬೆಳೆಸುತ್ತಾ ಬಯಲಾಗುತ್ತಿರುವ ಅರಣ್ಯಕ್ಕೆ ಹಸಿರು ಸೆರಗು ಹೊದಿಸುತ್ತಾ ಪರಿಸರ ಸಂರಕ್ಷಣೆಯ ಮಹತ್ತರ ಕಾರ್ಯಕ್ಕೆ ಐದು ದಶಕಗಳ ಕಾಲದಿಂದ ತಮ್ಮ ಜೀವನವನ್ನು ಮುಡುಪಾಗಿಟ್ಟ ವನದೇವತೆಯೆಂದೇ ಹೆಸರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.ಪರಿಸರಪ್ರೇಮದ ಮಹತ್ತರ ಕಾರ್ಯಕ್ಕೆ ತೊಡಗಿಕೊಳ್ಳುವ ಮೂಲಕ ಮಾದರಿ ಮಹಿಳೆಯಾಗಿ ನಮ್ಮ ಕಣ್ಣು ಮುಂದೆ ಇದ್ದ ತುಳಸಿ ಗೌಡ ಅವರು ಪರಿಸರ ಕ್ಷೇತ್ರಕ್ಕೆ ತಮ್ಮದೆ ಆದ ವಿಶೇಷ ಕೊಡುಗೆ ದಾಖಲಿಸಿ ಕೇಂದ್ರ ಸರ್ಕಾರದ ಪದ್ಮಶ್ರೀ ಪಶಸ್ತಿಯನ್ನು ಮಡಿಲಿಗೆ ಹಾಕಿಕೊಂಡಿದ್ದರು

ನಿರಕ್ಷರಿ ಹಾಲಕ್ಕಿ ಮಹಿಳೆ: ಸ್ವಾತಂತ್ರ್ಯ ಪೂರ್ವದ ಕಾಲ 1938ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಉಳವರೆ ಎಂಬ ಹಳ್ಳಿಯಲ್ಲಿ ತುಳಸಿ ಜನಿಸಿದರು. ಕೆಳವರ್ಗದ ಹಾಲಕ್ಕಿ ಪಂಗಡದವಳಾದರೂ ಉನ್ನತ ಕಾರ್ಯಕಲ್ಪವುಳ್ಳವರು. ಏಳೆಯ ವಯಸ್ಸಿನಲ್ಲಿಯೇ ವಿಧವೆಯಾಗಿ ಆನಂತರ ಕಾಡನ್ನೇ ಬಾಳಸಂಗಾತಿಯಾಗಿಸಿಕೊಂಡು ಅಂಕೋಲಾ ತಾಲೂಕು ಕೇಂದ್ರದಿಂದ 25 ಕಿಮೀ ಅಂತರದಲ್ಲಿರುವ ಹೊನ್ನಳ್ಳಿ ಗ್ರಾಮದಲ್ಲಿ ಪರಿಸರದ ಆರೈಕೆಗೆ ತೊಡಗಿಸಿಕೊಂಡಿದ್ದರು.

ಅಗಾಧ ವೃಕ್ಷಜ್ಞಾನ: ತುಳಸಿ ತುಂಬ ಸೂಕ್ಷ್ಮಗ್ರಾಹಿ. ಅವರ ವೃಕ್ಷಜ್ಞಾನ ಅಗಾಧವಾದದ್ದು. ಬೀಟೆ, ಬನಾಟೆ, ದಾನಚಿನ್ನಿ, ಅತ್ತಿ, ಆಲ, ದಿಂಡಲ, ಹುನಾಲು, ಚೆಳ್ಳೆ, ಹೆಬ್ಬೆಲಸು, ಸಾಗವಾನಿ, ನಂದಿ ಮತ್ತಿ… ಹೀಗೆ ಯಾವ ಯಾವ ಮರದಿಂದ ಏನು ಪ್ರಯೋಜನ, ಯಾವ ಮರದಲ್ಲಿ ಯಾವಾಗ ಬೀಜ ಒಣಗುತ್ತದೆ. ಯಾವ ಮರದ ಬೀಜವನ್ನು ಯಾವ ಋತುವಿನಲ್ಲಿ ಮೊಳಕೆ ಬರಿಸಬೇಕು. ಯಾವ ಜಾತಿಯ ಸಸಿಗಳಿಗೆ ಎಷ್ಟು ನೀರು ಬೇಕು. ಯಾವಾಗ ನಾಟಿ ಮಾಡಿದರೆ ಉತ್ತಮ ಎಂಬುದೆಲ್ಲ ಸರ್ಕಾರಿ ಅರಣ್ಯ ಪಾಲಕರಿಗಿಂತ ಚೆನ್ನಾಗಿ ತುಳಸಿಗೆ ಗೊತ್ತಿತ್ತು.ಸಸಿಗಳ ಉತ್ಪಾದನೆಗೆ ಅವರಿಗೆ ಇರುವ ಜ್ಞಾನ, ತೋರುವ ಪ್ರಯೋಗಶೀಲತೆ, ಗಿಡ- ಮರ ಬೀಜಗಳ ಕುರಿತಾದ ಮಾಹಿತಿ ಅರಣ್ಯ ವಿಜ್ಞಾನಿಗಳನ್ನು ಬೆರಗುಗೊಳಿಸುವಂತಹುದು. ಕಾಡಿನ ಪರಿಸರ, ಗಿಡ, ಬೀಜ ಇತ್ಯಾದಿಗಳೆಲ್ಲದರ ವಿವರ ನೀಡಬಲ್ಲ ಕಾಡಿನ ವಿಶ್ವಕೋಶ ಇವರಾಗಿದ್ದರು.

ತುಳಸಿ ಅವರಿಗೆ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, 2001ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ ಸೇರಿದಂತೆ ಒಟ್ಟು 13 ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜತೆಗೆ 2021ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ ನೀಡಿ ಗೌರವಿಸಿದ್ದರು. ಬರಿಗಾಲಿನಲ್ಲಿ ಹೋಗಿ, ಸಾಂಪ್ರದಾಯಿಕವಾಗಿ ನಮಸ್ಕರಿಸಿ ಪ್ರಶಸ್ತಿ ಪಡೆದದ್ದು ಕೂಡ ಗಮನಾರ್ಹವಾಗಿತ್ತು.

ಕಳೆದ 9 ತಿಂಗಳಿನಿಂದ ಪಾಶ್ವವಾಯು

ಕಳೆದ 9 ತಿಂಗಳಿನಿಂದ ಪಾಶ್ವವಾಯು ಪೀಡಿತರಾಗಿದ್ದ ತುಳಸಿ ಗೌಡ ಅವರು ಮಂಗಳೂರು, ಮಣಿಪಾಲ ಹಾಗೂ ಕಾರವಾರದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಕಳೆದ 10 ದಿನದಿಂದ ತೀವ್ರ ಅಸ್ವಸ್ಥರಾದ ತುಳಸಿ ಗೌಡ ಅವರು ಹೊನ್ನಳ್ಳಿಯ ಸ್ವಗೃಹದಲ್ಲಿದ್ದರು.

ಅವರಿಗೆ ಓರ್ವ ಪುತ್ರ, ಓರ್ವ ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳಿದ್ದಾರೆ.ತುಳಸಿ ಗೌಡ ಅವರ ಮಹತ್ಕಾರ್ಯವನ್ನು ಗಮನಿಸಿದ ಕೇಂದ್ರ ಸರ್ಕಾರ 2020ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು.

ಪರಿಸರ ಸಂರಕ್ಷಣೆ: ತುಳಸಿ ಗೌಡ ಅವರು ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸಿದ್ದರು. 5 ದಶಕಕ್ಕೂ ಹೆಚ್ಚು ಪರಿಸರ ರಕ್ಷಣೆಗಾಗಿ ತಮ್ಮ ಜೀವನನ್ನು ಮುಡುಪಾಗಿಟ್ಟಿದ್ದರು. ಹೀಗಾಗಿ ಅವರನ್ನು ವೃಕ್ಷಮಾತೆ, ವನದೇವತೆಯೆಂದೇ ಕರೆಯಲಾಗುತ್ತಿತ್ತು.

ಇಂದು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಮೃತರ ಅಂತಿಮ ಕ್ರಿಯೆಯನ್ನು ಸ್ವಗ್ರಾಮವಾದ ಹೊನ್ನಳ್ಳಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಅವರ ಅಂತಿಮ ದರ್ಶನಕ್ಕೆ ಅವರ ಸ್ವಗೃಹದ ಬಳಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರ ಮೊಮ್ಮಕ್ಕಳಾದ ರಾಘವೇಂದ್ರ ಗೌಡ ಹಾಗೂ ಶೇಖರ ಗೌಡ ಅವರು ತಿಳಿಸಿದ್ದಾರೆ.

ಕಾಡನ್ನೇ ಬಾಳಸಂಗಾತಿಯಾಗಿಸಿಕೊಂಡು ಪರಿಸರಕ್ಕೆ ಕೊಡುಗೆ ನೀಡಿದ ಮಾದರಿ ಮಹಿಳೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ