ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ವಾಣಿವಿಲಾಸ ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಮಂಗಳವಾರ ಡ್ಯಾಂಗೆ 2426 ಕ್ಯೂಸೆಕ್ಸ್ ನೀರು ಹರಿದು ಬಂದಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ ಮಂಗಳವಾರ ರಾತ್ರಿ ವೇಳೆಗೆ 122.75 ಅಡಿ ತಲುಪಿದೆ.89 ವರ್ಷಗಳ ಬಳಿಕ 2022 ರಲ್ಲಿ ಕೋಡಿ ಬಿದ್ದಿದ್ದ ಜಲಾಶಯ, ಈ ವರ್ಷದಲ್ಲಿ ಕೋಡಿ ಬೀಳಲು ಕೇವಲ 7 ಅಡಿ ನೀರು ಬರಬೇಕಿದೆ. ಇನ್ನು ಒಂದು ತಿಂಗಳ ಕಾಲ ಮಳೆಯಾಗುವ ಸಂಭವವಿದ್ದು, ಕೋಡಿ ಬೀಳುವ ಸಾಧ್ಯತೆ ಹೆಚ್ಚು. ಒಂದು ವೇಳೆ ಮಳೆ ಕಡಿಮೆಯಾದಲ್ಲಿ ಪ್ರಸಕ್ತ ಸಾಲಿನಲ್ಲಿ ಜಲಾಶಯದ ನೀರಿನ ಮಟ್ಟ 125 ಅಡಿ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.
1907 ರಲ್ಲಿ ನಿರ್ಮಾಣವಾಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಇತಿಹಾಸವಿದೆ. 1935 ರಲ್ಲಿ ಜಲಾಶಯದಲ್ಲಿ 135.25 ಅಡಿ ನೀರು ಸಂಗ್ರಹವಾಗುವ ಮೂಲಕ ಮೊದಲ ಬಾರಿಗೆ ಡ್ಯಾಂ ಕೋಡಿ ಬಿದ್ದು ಇತಿಹಾಸ ಸೃಷ್ಟಿಸಿತ್ತು. ಇದಾದ ಬಳಿಕ ಕಳೆದ 2022 ರಲ್ಲಿ ಎರಡನೇ ಬಾರಿಗೆ ಕೋಡಿ ಬಿದ್ದಿತ್ತು. ಈ ವರ್ಷದಲ್ಲಿ 7 ಅಡಿ ನೀರು ಬಂದರೆ ಡ್ಯಾಂ ಮೂರನೇ ಬಾರಿಗೆ ಕೋಡಿ ಬೀಳುವ ಸಂಭವವಿದೆ.1933 ರಲ್ಲಿ 135.25 ಅಡಿ ಸಂಗ್ರಹ, 1934 ರಲ್ಲಿ 130.24 ಅಡಿ, 1957 ರಲ್ಲಿ 125.05 ಅಡಿ, 1958 ರಲ್ಲಿ 124.50 ಅಡಿ, 2021 ರಲ್ಲಿ 125.50 ಅಡಿ ಹಾಗೂ 2022 ರಲ್ಲಿ 135 ಅಡಿ ನೀರು ಸಂಗ್ರಹವಾಗುವ ಮೂಲಕ ಹೊಸ ದಾಖಲೆ ಬರೆದಿತ್ತು. 2023 ರಲ್ಲಿ ಮಳೆ ಬಾರದ ಕಾರಣ ಡ್ಯಾಂಗೆ ಯಾವುದೇ ಹೇಳಿಕೊಳ್ಳುವಂತಹ ಒಳಹರಿವು ಬಂದಿರಲಿಲ್ಲ. ಈ ವರ್ಷ 122.75 ಅಡಿ ತಲುಪಿದ್ದು ಇನ್ನೂ ಒಂದಷ್ಟು ಅಡಿ ನೀರು ಬರುವ ಆಶಾ ಭಾವನೆ ತಾಲೂಕಿನ ರೈತರಲ್ಲಿದೆ.