ವಿವಿವಿ ಸಂಶೋಧನಾ ಕೇಂದ್ರ ಶೀಘ್ರ ಕಾರ್ಯಾರಂಭ: ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ

KannadaprabhaNewsNetwork |  
Published : Oct 26, 2023, 01:01 AM IST
ವಿವಿವಿ ಸಂಶೋಧನಾ ಕೇಂದ್ರ ಶೀಘ್ರ ಕಾರ್ಯಾರಂಭ | Kannada Prabha

ಸಾರಾಂಶ

, ರಾಮಾಯಣ ಬಗ್ಗೆ ಅಲ್ಪಾವಧಿ ಕೋರ್ಸ್ ಹಾಗೂ ಮಕ್ಕಳ ಸಂಸ್ಕಾರ ಬೆಳೆಸುವ ಕೋರ್ಸ್ ಕೂಡಾ ಆರಂಭವಾಗಲಿದೆ. ಸ್ವರ್ಣಪಾದುಕೆಗಳ ಸಂಚಾರದ ಮೂಲಕ ವಿವಿವಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ವರ್ಷವಿಡೀ ನಡೆಯಲಿದೆ

ಕನ್ನಡಪ್ರಭ ವಾರ್ತೆ ಬಂಟ್ವಾಳ ಶ್ರೀ ರಾಮಚಂದ್ರಾ ಪುರ ಮಠದ ಶಿಖರಪ್ರಾಯ ಯೋಜನೆಯಾದ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಶೋಧನಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆಯುವ ಹಂತದಲ್ಲಿದ್ದು, ಇಷ್ಟರಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮಾಣಿ ಮಠದಲ್ಲಿ ನವರಾತ್ರ ಮನಸ್ಯ ಅಂಗವಾಗಿ ವಿದ್ಯಾದಶಮಿಯಂದು ಶ್ರೀಸಂದೇಶ ಅನುಗ್ರಹಿಸಿದ ಶ್ರೀಗಳು, ರಾಮಾಯಣ ಬಗ್ಗೆ ಅಲ್ಪಾವಧಿ ಕೋರ್ಸ್ ಹಾಗೂ ಮಕ್ಕಳ ಸಂಸ್ಕಾರ ಬೆಳೆಸುವ ಕೋರ್ಸ್ ಕೂಡಾ ಆರಂಭವಾಗಲಿದೆ. ಸ್ವರ್ಣಪಾದುಕೆಗಳ ಸಂಚಾರದ ಮೂಲಕ ವಿವಿವಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ವರ್ಷವಿಡೀ ನಡೆಯಲಿದೆ ಎಂದು ಬಣ್ಣಿಸಿದರು. ಗುರುಶಿಷ್ಯರು ಹೇಗಿರಬೇಕು ಎನ್ನುವುದನ್ನು ಈ ಭಾಗದ ಜನ ಸೇವೆ, ಸಮರ್ಪಣೆ ಮತ್ತು ಸಂಘಟನೆ ಮೂಲಕ ತೋರಿಸಿಕೊಟ್ಟಿದ್ದಾರೆ. ಗುರು-ಶಿಷ್ಯ ಬಾಂಧವ್ಯಕ್ಕೆ ಸರ್ವೋತ್ತಮ ಉದಾಹರಣೆ ಮಂಗಳೂರು ಹೋಬಳಿ ಎಂದು ಅಭಿಪ್ರಾಯಪಟ್ಟರು. ಇಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಯ ಬಗ್ಗೆ ಉನ್ನತ ಸಂಶೋಧನೆಗಳು ನಡೆಯಲಿವೆ. ನಮ್ಮ ಸಂಪ್ರದಾಯಗಳ ವೈಜ್ಞಾನಿಕ ಸಂಶೋಧನೆಯ ವಿಶ್ಲೇಷಣೆಯಿಂದ ಮುಂದಿನ ದಿನಗಳಲ್ಲಿ ಸಮಾಜಕ್ಕೆ ದೊಡ್ಡ ಕೊಡುಗೆ ಸಿಗಲಿದೆ ಎಂದು ಅಭಿಪ್ರಾಯಪಟ್ಟರು. ಮೂಲಮಠದ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ಗುರುದೃಷ್ಟಿ ಸಭಾಭವನಕ್ಕೆ ಕೈಜೋಡಿಸುವ ಶಿಷ್ಯರಿಗೆ ಸ್ವರ್ಣಾಕ್ಷತೆ ಮತ್ತು ರಜತಾಕ್ಷತೆ ನೀಡುವ ಅಮರ ಮಂತ್ರಾಕ್ಷತೆ ಯೋಜನೆಯನ್ನು ಶ್ರೀಗಳು ಈ ಸಂದರ್ಭದಲ್ಲಿ ಘೋಷಿಸಿದರು. ಮಠದ ಜತೆ ಸಂಪರ್ಕ ಬೆಸೆದುಕೊಂಡಂದಿನಿಂದ ಶಿಷ್ಯರ ಉದ್ಧಾರ ಆರಂಭವಾಗುತ್ತದೆ. ನವರಾತ್ರಿ ನಮಸ್ಯದಲ್ಲಿ ಬಹಳಷ್ಟು ಮಂದಿ ಪಾರಂಪರಿಕ ಶಿಷ್ಯರು ಮತ್ತೆ ಮಠದ ಸಕ್ರಿಯ ಸಂಪರ್ಕಕ್ಕೆ ಬಂದಿದ್ದಾರೆ. ಹೊಸಪೀಳಿಗೆ ಸನಾತನ ಸಂಸ್ಕೃತಿಯತ್ತ ಮರಳಬೇಕು. ಇದರಿಂದ ಮಾತ್ರ ಮುಂದಿನ ಭವಿಷ್ಯ ಉಜ್ವಲವಾಗಲು ಸಾಧ್ಯ. ಮಾಣಿಮಠ ಮಹಾಕ್ಷೇತ್ರವಾಗಿ ಮಾರ್ಪಟ್ಟು, ಪರಂಪರೆಯ ದಿವ್ಯಕ್ಷೇತ್ರವಾಗಿ ಸಮಾಜವನ್ನು ಮುನ್ನಡೆಸಲಿ ಎಂದು ಆಶಿಸಿದರು. ನವರಾತ್ರ ನಮಸ್ಯಾ ಕಾರ್ಯಕ್ರಮದ ಮೂಲಕ ಧರ್ಮಜಾಗೃತಿಯಾಗಿರುವುದು ಒಳ್ಳೆಯ ಬೆಳವಣಿಗೆ. ಸೀತಾರಾಮರ ಹೆಸರಿನಲ್ಲಿ ಪ್ರಧಾನ ಮಠ, ಪ್ರಧಾನ ಮಠದಲ್ಲಿ ಚಂದ್ರಮೌಳೀಶ್ವರ, ಕೆಕ್ಕಾರು ಮಠದ ಪರಿಸರದಲ್ಲಿ ರಾಜರಾಜೇಶ್ವರಿ ಸೇವೆ ನಡೆಯುತ್ತಿದೆ. ಮಾಣಿಮಠದಲ್ಲಿ ಪ್ರತಿನಿತ್ಯ ಸ್ವರ್ಣಮಂಟಪದಲ್ಲಿ ರಾಜರಾಜೇಶ್ವರಿಯ ಆರಾಧನೆ, ಲಲಿತೋಪಾಖ್ಯಾನದ ಪ್ರವಚನದ ಮೂಲಕ ರಾಜರಾಜೇಶ್ವರಿಯ ತತ್ವಚಿಂತನೆ, ಜ್ಞಾನಪ್ರಧಾನ ತತ್ವಬೋಧನೆ ನಡೆದಿದೆ ಎಂದು ಬಣ್ಣಿಸಿದರು. ಮಾಣಿಮಠ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆಯವರು ಶ್ರೀಮಠದ ಯೋಜನೆಗಳನ್ನು ವಿವರಿಸಿದರು. ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಸ್ವರ್ಣಪಾದುಕೆ ಸಂಚಾರ ಬಗ್ಗೆ ವಿವರ ನೀಡಿದರು. ವಿವಿವಿ ಗೌರವಾಧ್ಯಕ್ಷರಾದ ದೇವಶ್ರವ ಶರ್ಮಾ, ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನ ಕುಮಾರ್, ಗೌರವಾಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಅಧ್ಯಕ್ಷ ಡಾ.ಶ್ರೀಧರ ಎಸ್ ಹೆಗಡೆ, ಪ್ರಧಾನ ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್, ಮಹಾಮಂಡಲ ಕೋಶಾಧ್ಯಕ್ಷೆ ಅಂಬಿಕಾ ಎಚ್.ಎನ್, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಯುವ ಪ್ರಧಾನ ಕೇಶವ ಪ್ರಕಾಶ್ ಮುಣ್ಚಿಕಾನ, ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ವಿವಿವಿ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಮೂರು ಮಂಡಲಗಳ ಅಧ್ಯಕ್ಷರಾದ ಪೆರ್ನೆಕೋಡಿ ಪ್ರಸನ್ನ, ಉದಯಶಂಕರ ಭಟ್ ನೀರ್ಪಾಜೆ, ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿಗಳಾದ ಸರವು ರಮೇಶ್ ಭಟ್, ಮಹೇಶ್ ಕುದುಪುಲ ಹಾಜರಿದ್ದರು. ತಿರುಮಲೇಶ್ವರ ಭಟ್ ಅವರು ಸಂಪಾದಿಸಿದ ಸಪರ್ಯಾ ಕೃತಿಯನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ನವರಾತ್ರ ನಮಸ್ಯಾ ಕಾರ್ಯಕ್ರಮದ ಅಂಗವಾಗಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ನಿರ್ಮಾಣವಾಗಲಿರುವ ಬೃಹತ್ ಗ್ರಂಥಾಲಯಕ್ಕೆ ಈ ಸಂದರ್ಭದಲ್ಲಿ 60 ಲಕ್ಷ ರು. ದೇಣಿಗೆಯನ್ನು ಸಮರ್ಪಿಸಲಾಯಿತು. ಗೋಪಾಲಕೃಷ್ಣ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!