ಪಟ್ಟಣದ ಅಗಸಿಯಿಂದ ಪಂಚಾಯಿತಿ ಮತ್ತು ಪೊಲೀಸ್ ಠಾಣೆಯವರೆಗೆ ರಸ್ತೆಯಲ್ಲಿ ಅಕ್ರಮವಾಗಿ ಡಬ್ಬಿ ಅಂಗಡಿ ಹಾಕಲಾಗಿದ್ದು, ಇದರಿಂದ ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ತೆರವುಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಡಗೇರಾ
ಪಟ್ಟಣದ ಅಗಸಿಯಿಂದ ಪಂಚಾಯಿತಿ ಮತ್ತು ಪೊಲೀಸ್ ಠಾಣೆಯವರೆಗೆ ರಸ್ತೆಯಲ್ಲಿ ಅಕ್ರಮವಾಗಿ ಡಬ್ಬಿ ಅಂಗಡಿ ಹಾಕಲಾಗಿದ್ದು, ಇದರಿಂದ ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ತೆರವುಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಒತ್ತಾಯಿಸಿದ್ದಾರೆ.ವಡಗೇರಾ ಪಟ್ಟಣಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಹೇಳಿಕೆ ನೀಡಿರುವ ಅವರು, ವಡಗೇರಾ ತಾಲೂಕಾಗಿ ಆರು ವರ್ಷ ಗತಿಸಿದರೂ ಯಾವುದೇ ಒಂದು ಅಭಿವೃದ್ಧಿ ಕಂಡಿಲ್ಲ. ಆದರೆ, ತಾಲೂಕು ರಚನೆಗೂ ಮುಂಚೆ ಯಾವುದೇ ಅಕ್ರಮ ಡಬ್ಬಿಗಳು ರಸ್ತೆ ಮೇಲೆ ಇರಲಿಲ್ಲ. ಆಗ ಸುಗಮ ಸಂಚಾರವಿತ್ತು. ತಾಲೂಕು ಘೋಷಣೆ ಆಗುತ್ತಿದ್ದಂತೆ ಅಕ್ರಮ ಡಬ್ಬಿಗಳು ತಲೆಎತ್ತಿ ನಿಂತಿದ್ದು, ಆ ಸ್ಥಳಗಳು ಬಹುತೇಕ ಗ್ರಾಮ ಪಂಚಾಯ್ತಿಗೆ ಸೇರಿದ್ದರೂ ಅಕ್ರಮ ಡಬ್ಬಿಗಳ ಬಾಡಿಗೆ ಮಾತ್ರ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ಈ ಅಕ್ರಮ ಡಬ್ಬಿಗಳಿಗೆ ಜೆಸ್ಕಾಂ ಇಲಾಖೆ ಅಧಿಕಾರಿಗಳು ಯಾವ ಆಧಾರದ ಮೇಲೆ ವಿದ್ಯುತ್ ಸಂಪರ್ಕ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಬೀದಿದೀಪಗಳಿಲ್ಲದೇ ಸಾರ್ವಜನಿಕರು ಹಾಗೂ ವಾಹನ ಸವಾರರು ಕತ್ತಲಲ್ಲಿ ಸಂಚರಿಸುವಂತಾಗಿದೆ. ಜತೆಗೆ ಚರಂಡಿ ಅವ್ಯವಸ್ಥೆಯಿಂದ ಸೊಳ್ಳೆಗಳ ಕಾಟಾ ಹೆಚ್ಚಾಗಿದ್ದು, ಸಾಂಕ್ರಮಿಕ ರೋಗಗಳು ಹರಡುವ ಭೀತಿಯಲ್ಲಿ ಇಲ್ಲಿನ ಜನರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಸ್ತೆಯ ಎಡ-ಬಲ ಬದಿಗಳಲ್ಲಿ ಅಕ್ರಮ ಡಬ್ಬಿಗಳು ತಲೆ ಎತ್ತಿವೆ. ಇದಕ್ಕೆ ಯಾರು ಪರವಾನಿಗೆ ನೀಡಿದ್ದಾರೆ ಎಂಬುದನ್ನು ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯಿತಿ ತುರ್ತಾಗಿ ಎರಡ್ಮೂರು ದಿನಗಳಲ್ಲಿ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.ತಕ್ಷಣ ಆಗಿರುವ ತೊಂದರೆಗಳನ್ನು ಸರಿಪಡಿಸಲು ವಡಗೇರಾ ಪಟ್ಟಣಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ದಿಢೀರ್ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿ ಅಗತ್ಯ ಕ್ರಮಕೈಗೊಂಡು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಜಾಲಿಕಂಟಿ ಮುಳ್ಳುಗಳನ್ನು ಬಡಿದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ಬಸವರಾಜ ಇಟಗಿ, ಬಸವರಾಜ ಬುಜ್ಜಿ, ಹಣಮಂತಪ್ಪ ಬುಸೇನಿ, ಯಂಕಪ್ಪ ಎಕ್ಕಳ್ಳಿ, ವಿಶ್ವರಧ್ಯ ಹಿರೇಮಠ, ವಿಶ್ವ ಹಿರೇಮಠ, ದೇವರಾಜ ಪಿಡ್ಡೆಗೌಡ್ರ, ನಾಗರಾಜ ಗೌಡ, ಬಾಬು ಹುಲಿರ, ಯಲ್ಲಪ್ಪ ಯಾದಗಿರ, ಮಲ್ಲಪ್ಪ ಕಡಮಾನೂರ, ಸ್ವಾಮಿ ಕ್ಯಾಮರಾ, ರವೀಂದ್ರ ನಸಲಾಯಿ, ಇಮಾಮ ನಾಯ್ಕೋಡಿ, ಮಾದೇಪ್ಪಾ ಗೋರುವ, ಬಡ್ದೆಪ್ಪ ಶಿರವಾಳ, ರಫೀಕ್ ಮಿರ್ಚಿ, ಸಂತೋಷ್ ಬುಸೇನಿ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.