ದೊಡ್ಡಬಳ್ಳಾಪುರ: ನಿಯಮಿತ ನಡಿಗೆಯ ಅಭ್ಯಾಸದಿಂದ ಎಲ್ಲ ಅಂಗಾಂಗಗಳಿಗೂ ಶುದ್ಧರಕ್ತ ಸಂಚಾರವಾಗಿ ಒಟ್ಟಾರೆ ದೇಹದಲ್ಲಿ ನವಚೈತನ್ಯ ಮೂಡುತ್ತದೆ. ಆದರೆ ಇಂದಿನ ಪೀಳಿಗೆ ಸಹಜ ನಡಿಗೆ ಮರೆತು ಅತಿಯಾಗಿ ವಾಹನಗಳನ್ನು ಅವಲಂಬಿಸಿರುವುದರ ಜೊತೆಗೆ, ಜಂಕ್ ಫುಡ್ಸ್ ಹಾಗೂ ದುಶ್ಚಟಗಳಿಗೆ ದಾಸರಾಗಿ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ದುರಂತ ಎಂದು ನಾಗದಳ ಸಂಚಾಲಕ ಸಿ.ನಟರಾಜ ಹೇಳಿದರು.
ವಿಶ್ವಾದ್ಯಂತ ನಡೆದ ಹಲವಾರು ಸಮೀಕ್ಷೆಗಳು ದೃಢಪಡಿಸಿರುವಂತೆ ಕ್ರಮಬದ್ಧ ನಡಿಗೆ ಹವ್ಯಾಸ ಇರುವವರ ರೋಗನಿರೋಧಕ ಶಕ್ತಿ ಹಾಗೂ ಆಯಸ್ಸು ಚಟುವಟಿಕೆ ರಹಿತರಿಗೆ ಹೋಲಿಸಿದರೆ ಹೆಚ್ಚಿರುತ್ತದೆ. ನಡಿಗೆಯು ಯಾವುದೇ ಖರ್ಚುವೆಚ್ಚವಿಲ್ಲದೆ ಮಾಡಬಹುದಾದ ದೈಹಿಕ ಮಾನಸಿಕ ಶಕ್ತಿಯನ್ನು ವೃದ್ಧಿಸುವ ಸುಲಭದ ವ್ಯಾಯಾಮವಾಗಿದೆ ಎಂದರು.
ಪಾದಯಾತ್ರಿ ಪಾಂಡುರಂಗ ಮಾತನಾಡಿ, ಕೆಲವು ವರ್ಷಗಳ ಹಿಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹತಾಶರಾಗಿದ್ದ ತಮಗೆ ಪ್ರತಿನಿತ್ಯ ನಾಗರಕೆರೆ ಕಟ್ಟೆಯ ಮೇಲೆ ತಪ್ಪದೆ ಮಾಡುವ ನಡಿಗೆ ಪರಿಣಾಮ ಮರು ಚೈತನ್ಯ ದೊರೆತು ಆರೋಗ್ಯ, ಜೀವನೋತ್ಸಾಹ ಇಮ್ಮಡಿಯಾಗಿದೆ ಎಂದು ಹೇಳಿದರು.ನಾಗದಳದ ಎ.ವಿ. ರಘು, ನುನ್ನ ನಾಗರಾಜ್ ಮತ್ತಿತರರು ಮಾತನಾಡಿ, ಪರಿಸರ ಹಾಗೂ ಮನುಷ್ಯನ ಸಹಜ ಸಂಬಂಧಗಳ ಅನನ್ಯತೆಯನ್ನು ವಿವರಿಸಿದರು. ಕೊಂಗಾಡಿಯಪ್ಪ ಮುಖ್ಯರಸ್ತೆಯ ನೇಯ್ಗೆಯವರ ಬೀದಿ ಶಾಲೆ ಬಳಿಯಿಂದ ಪ್ರಾರಂಭವಾದ ಪಾದಯಾತ್ರೆ ಕಂಟನಕುಂಟೆ, ವಡ್ಡರಹಳ್ಳಿ, ಹಾಡೋನಹಳ್ಳಿ, ಪಾಲ್ ಪಾಲ್ ದಿನ್ನೆ ಮಾರ್ಗವಾಗಿ ಘಾಟಿ ದೇವಸ್ಥಾನ ತಲುಪಿತು. ನೂರಕ್ಕೂ ಹೆಚ್ಚು ಪಾದಯಾತ್ರಿಗಳಿದ್ದ ತಂಡದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರೀಕರೂ ಉತ್ಸಾಹದಿಂದ ಭಾಗವಹಿಸಿದ್ದರು. ದೇವಸ್ಥಾನದಲ್ಲಿ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
22ಕೆಡಿಬಿಪಿ3-
ನಾಗದಳದ ನೇತೃತ್ವದಲ್ಲಿ ದೊಡ್ಡಬಳ್ಳಾಪುರದಿಂದ ಘಾಟಿ ಕ್ಷೇತ್ರಕ್ಕೆ 29ನೇ ವರ್ಷದ ಪಾದಯಾತ್ರೆಯಲ್ಲಿ ನೂರಾರು ಪಾದಯಾತ್ರಿಗಳು ಭಾಗವಹಿಸಿದ್ದರು.