ಕಾರ್ಖಾನೆಗಳ ವಿರುದ್ಧ ಗೋಡೆ ಬರಹ ಅಭಿಯಾನ ಶುರು

KannadaprabhaNewsNetwork | Published : May 20, 2025 11:45 PM
ಕೊಪ್ಪಳ ನಗರದ ವಿವಿಧೆಡೆ ಮತ್ತು ಬಾಧಿತ ಪ್ರದೇಶಗಳ ಹಳ್ಳಿಗಳಲ್ಲಿ ಕಾರ್ಖಾನೆ ವಿರುದ್ಧ ಮತ್ತು ಅದರಿಂದ ಆಗುತ್ತಿರುವ ಹಾನಿಯ ಬಗ್ಗೆ ಜನಜಾಗೃತಿ ಗೋಡೆ ಬರಹ ಬರೆಯುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
Follow Us

ಕೊಪ್ಪಳ:

ನಗರಕ್ಕೆ ಹೊಂದಿಕೊಂಡು ಸ್ಥಾಪನೆಗೆ ಸಿದ್ಧವಾದ ಎಂಎಸ್‌ಪಿಎಲ್ ಅಥವಾ ಬಿಎಸ್‌ಪಿಎಲ್ ಹಾಗೂ ಕಿರ್ಲೋಸ್ಕರ್, ಕಲ್ಯಾಣ ಸೇರಿ ಇತರೆ ಕಾರ್ಖಾನೆಗಳ ಆರಂಭ, ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಜನಾಂದೋಲನಕ್ಕೆ ಮತ್ತೊಂದು ರೀತಿಯ ಹೋರಾಟ ಸೇರ್ಪಡೆಯಾಗಿದ್ದು, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ವತಿಯಿಂದ ಗೋಡೆ ಬರೆಹ ಅಭಿಯಾನ ಆರಂಭಿಸಲಾಗಿದೆ.

ನಗರದ ವಿವಿಧೆಡೆ ಮತ್ತು ಬಾಧಿತ ಪ್ರದೇಶಗಳ ಹಳ್ಳಿಗಳಲ್ಲಿ ಕಾರ್ಖಾನೆ ವಿರುದ್ಧ ಮತ್ತು ಅದರಿಂದ ಆಗುತ್ತಿರುವ ಹಾನಿಯ ಬಗ್ಗೆ ಜನಜಾಗೃತಿ ಗೋಡೆ ಬರಹ ಬರೆಯುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ಅಭಿಯಾನವನ್ನು ಜನಾಂದೋಲನವಾಗಿ ಸಹಕಾರದ ತತ್ವದಲ್ಲಿ ಮಾಡುವ ಉದ್ದೇಶದಿಂದ ಎಲ್ಲರನ್ನೂ ಒಳಗೊಳ್ಳುವ ಉದ್ದೇಶದಿಂದ ಗೋಡೆ ಬರಹಕ್ಕೆ ಅಗತ್ಯವಿರುವ ಬಣ್ಣವನ್ನು ಕೊಪ್ಪಳ, ಭಾಗ್ಯನಗರದ ವಿವಿಧ ಬಣ್ಣದ ವ್ಯಾಪಾರಿಗಳಿಂದ ದೇಣಿಗೆ ರೂಪದಲ್ಲಿ ಪಡೆದು ಗೋಡೆ ಬರಹ ಬರೆಸಲು ಸಮಿತಿ ನಿರ್ಧರಿಸಿ, ಮಂಗಳವಾರ ಚಾಲನೆ ನೀಡಿದೆ.

ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಿರಣ್ ಪೇಂಟ್ಸ್ ಅಂಗಡಿ ಮಾಲೀಕ ಗವಿಸಿದ್ದಪ್ಪ ಚಿನ್ನೂರ್, ಹುಲಿಗಮ್ಮ ದೇವಿ ಪೆಂಟ್ಸ್‌ನ ಮಾರುತಿ ದೇಣಿಗೆ ನೀಡಿದರು. ಗೋಡೆ ಬರಹ ಬರೆಯಲು ಹಿರಿಯ ಚಿತ್ರ ಕಲಾವಿದರಾದ ರಾಜು ತೇರದಾಳ ಮತ್ತು ಕೃಷ್ಣ ಚಿತ್ರಗಾರ ಒಪ್ಪಿಕೊಂಡಿದ್ದಾರೆ. ಇನ್ನೂ ಅನೇಕ ಬಣ್ಣದ ಅಂಗಡಿ ಮಾಲೀಕರು ಮತ್ತು ಚಿತ್ರ ಕಲಾವಿದರು ಸಹಕಾರ ನೀಡುವ ನಿರೀಕ್ಷೆಯಿದೆ. ಕೊಪ್ಪಳದಿಂದ ಕಾರ್ಖಾನೆ ಓಡಿಸುವ ನಿಟ್ಟಿನಲ್ಲಿ ಆಂದೋಲನ ತೀವ್ರಗೊಳಿಸಲು ಜನರು ಸಹಕಾರ ನೀಡಲು ಕೋರಲಾಗಿದೆ.

ಈ ವೇಳೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನದ ಪ್ರೊ. ಅಲ್ಲಮಪ್ರಭು ಬೆಟ್ಟದೂರ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ ಇದ್ದರು.

ಬಣ್ಣದ ಸಹಾಯ ಮಾಡಲಿಚ್ಚಿಸುವ ಬಣ್ಣದ ಅಂಗಡಿಯವರು, ಗೋಡೆ ಬರಹ ಮಾಡಲು ಇಚ್ಛಿಸುವ ಚಿತ್ರ ಕಲಾವಿದರು ಆಂದೋಲನದ ಸದಸ್ಯರನ್ನು ಸಂಪರ್ಕಿಸಿ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಸಂಘಟಕರು ಮನವಿ ಮಾಡಿದ್ದಾರೆ.